ಕಲಬುರಗಿ: ಬಿಲ್ಕಿಸ್ ಬಾನು ಪ್ರಕರಣದಲ್ಲಿ ಅಪರಾ ಗಳೆಂದು ಸಾಬೀತಾಗಿ ಈಗ ಸನ್ನಡೆತೆ ಆಧಾರದ ಮೇಲೆ ಬಿಡುಗಡೆಗೊಂಡಿರುವ ಎಲ್ಲ 11 ಜನ ಆರೋಪಿಗಳನ್ನು ಪುನಃ ಬಂಧಿಸಿ ಶಿಕ್ಷೆಗೆ ಗುರಿ ಮಾಡಬೇಕು ಎಂದು ಒತ್ತಾಯಿಸಿ ಶುಕ್ರವಾರ ದೌರ್ಜನ್ಯ ವಿರೋಧಿ ವೇದಿಕೆ ನೇತೃತ್ವದಲ್ಲಿ ನೂರಾರು ಕಾರ್ಯಕರ್ತೆಯರು ಜಿಲ್ಲಾ ಧಿಕಾರಿ ಕಚೇರಿ ಎದುರು ಬೃಹತ್ ಪ್ರತಿಭಟನೆ ಮಾಡಿದರು.
ಪ್ರತಿಭಟನೆಕಾರರು ನಂತರ ಜಿಲ್ಲಾ ಧಿಕಾರಿ ಮೂಲಕ ರಾಜ್ಯಪಾಲರಿಗೆ ಮತ್ತು ರಾಷ್ಟ್ರಪತಿಗಳಿಗೆ ಮನವಿ ಪತ್ರ ಸಲ್ಲಿಸಿ, ಬಿಲ್ಕಿಸ್ ಬಾನು ಅತ್ಯಾಚಾರ ಪ್ರಕರಣದ ಆರೋಪಿಗಳ ಬಿಡುಗಡೆ ಮಾಡಿರುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.
ಈ ವೇಳೆ ಮಾತನಾಡಿದ ಮಹಿಳಾ ಮುಖಂಡರು, ಕೈದಿಗಳೆಲ್ಲರೂ ಏನು ಸಾಧನೆ ಮಾಡಿದ್ದಾರೆಂದು ಬಿಜೆಪಿ ನಾಯಕರು ಅವರ ಪರವಾಗಿ ವಕಾಲತ್ತು ವಹಿಸಿದ್ದಾರೆ? ಅವರು ಬಿಡುಗಡೆಗೊಂಡ ಬಳಿಕ ಹೂವಿನ ಹಾರಗಳನ್ನು ಹಾಕಿ ಸ್ವಾಗತಿಸಿದ್ದಾರೆ. ಇದೆಲ್ಲವೂ ನಾಚಿಕೆಗೇಡಿನ ಸಂಗತಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಘೋರ ಘಟನೆಯು ಅತ್ಯಂತ ಅಪಾಯಕಾರಿ ನಿದರ್ಶನ ತೋರುತ್ತದೆ. ಬಿಜೆಪಿ ಸರ್ಕಾರದ ಇಂತಹ ಕಾನೂನು ಸಮ್ಮತವಲ್ಲದ ಮತ್ತು ಅನೈತಿಕ ಕ್ರಮವನ್ನು ಖಂಡಿಸಿ, ಅದರ ವಿರುದ್ಧ ತಮ್ಮ ಧ್ವನಿ ಎತ್ತಬೇಕು. ಕೂಡಲೇ 11 ಜನ ಅತ್ಯಾಚಾರಿಗಳನ್ನು ಮರು ಬಂಧಿಸಬೇಕು ಎಂದು ಒತ್ತಾಯಿಸಿದರು.
ಕೆ. ನೀಲಾ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಮೀನಾಕ್ಷಿ ಬಾಳಿ, ಇಂದುಮತಿ ಎಸ್ .ಟಿ., ಕಾವೇರಿ, ರೇಣುಕಾ ಸರಡಗಿ, ಪದ್ಮಾವತಿ ಎನ್. ಪಾಟೀಲ, ಎಂ.ಎಸ್. ಪಾಟೀಲ, ಯು. ಬಸವರಾಜ, ಸುಧಾಮ ಧನ್ನಿ, ಅಲ್ತಾಫ್ ಇನಾಂದಾರ, ಅರ್ಜುನ್ ಭದ್ರೆ, ಮಲ್ಲಿಕಾರ್ಜುನ್ ಖನ್ನಾ, ಅನಿತಾ, ಉಮಾ, ಡಾ|ಸಜ್ಜನ್ ಮಲ್ಲೇಶಿ ಪಾಲ್ಗೊಂಡಿದ್ದರು.