Advertisement

ಬಿಳಿನೆಲೆ ಶಾಲೆ: ಪರಿಸರ –ಜಲ ಸಂರಕ್ಷಣೆಯ ಪ್ರಯೋಗ ಶಾಲೆ

01:19 PM Apr 12, 2018 | |

ಸುಬ್ರಹ್ಮಣ್ಯ : ಸರಕಾರಿ ಶಾಲೆಗಳೆಂದರೆ ಮೂಗು ಮುರಿಯುವ ಈ ಕಾಲದಲ್ಲಿ ಕಾರ್ಯದೊತ್ತಡ ನಡುವೆಯೂ ಎಂಟು ವರ್ಷಗಳಿಂದ ಒಂದಿಲ್ಲೊಂದು ಪರಿಸರ ಅಂಶವನ್ನು ಮಕ್ಕಳಲ್ಲಿ ಬಿತ್ತುತ್ತ ಬೆಳೆಯುತ್ತಿರುವ ಪುಟ್ಟ ಈ ಸರಕಾರಿ ಶಾಲೆಯ ಪರಿಸರ ಪ್ರೇಮ ಎಲ್ಲರಿಗೂ ಮಾದರಿಯಾಗಿದೆ.

Advertisement

ಪಶ್ಚಿಮ ಘಟ್ಟದ ತಪ್ಪಲಿನ ನಡುವೆ ಹೊದ್ದು ಮಲಗಿಕೊಂಡಿದೆ ಬಿಳಿನೆಲೆ ಎಂಬ ಪುಟ್ಟ ಹಳ್ಳಿ. ಇಲ್ಲಿನ ಬಿಳಿನೆಲೆ- ಕೈಕಂಬದ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 1ರಿಂದ 8ನೇ ತರಗತಿ ತನಕ ವಿದ್ಯಾಭ್ಯಾಸ ನೀಡಲಾಗುತ್ತಿದೆ. ಶಾಲೆಯಲ್ಲಿ ಒಟ್ಟು 29 ಹೆಣ್ಣುಮಕ್ಕಳು. 40 ಗಂಡು ಮಕ್ಕಳು ಇಲ್ಲಿ ಕಲಿಯುತ್ತಿದ್ದಾರೆ. 6 ಮಂದಿ ಬೋಧಕರಿದ್ದು, ಇಲ್ಲಿನ ವಿದ್ಯಾರ್ಥಿಗಳ, ಶಿಕ್ಷಕರ, ಹೆತ್ತವರ ಪರಿಸರ ಕಾಳಜಿ ಈಗ ಎಲ್ಲರನ್ನೂ ಶಾಲೆ ಕಡೆಗೆ ಸೆಳೆಯುತ್ತಿದೆ.

ಪರಿಸರ ಕಾಳಜಿ
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಶಿಕ್ಷಣ ಇಲಾಖೆ, ದ.ಕ. ಜಿಲ್ಲಾಡಳಿತದ ಆಶ್ರಯದಲ್ಲಿ ಪರಿಸರ ಮಿತ್ರ ಶಾಲೆಗಳಿಗೆ ನೀಡುವ ಹಸಿರು ಶಾಲೆ ಪುರಸ್ಕಾರವನ್ನು ಸತತ ಮೂರು ಬಾರಿ ಪಡೆದುಕೊಂಡ ಹೆಗ್ಗಳಿಕೆ ಈ ಶಾಲೆಗಿದೆ. ಈ ಪ್ರಶಸ್ತಿಯನ್ನು ಮೂರು ವರ್ಷಗಳ ಹಿಂದೆ ನೀಡಲು ಪ್ರಾರಂಭಿಸಲಾಗಿತ್ತು. ಅಲ್ಲಿಂದೀಚೆಗೆ ಪ್ರತಿ ವರ್ಷವೂ ಈ ಶಾಲೆ ಪ್ರಶಸ್ತಿಗೆ ಭಾಜನವಾಗಿದೆ. ಶಾಲಾ ಮುಖ್ಯ ಶಿಕ್ಷಕಿ ಮತ್ತು ಸಹಶಿಕ್ಷಕ, ಶಿಕ್ಷಕಿಯರ ಪರಿಸರ ಕಾಳಜಿ ಇಲ್ಲಿ ಮಕ್ಕಳ ಮೂಲಕ ಸಾಕಾರಗೊಂಡಿದೆ. 

ಶಾಲೆಯ ಪಕ್ಕದಲ್ಲಿ ನಿರ್ಮಿಸಿದ ಸುಂದರ ಕೈತೋಟ ಮನ ಸೆಳೆಯುತ್ತಿದೆ. ಮಕ್ಕಳಿಗೆ ಪಠ್ಯ ವಿಷಯಗಳ ಜತೆಗೆ ಕೃಷಿ ಜ್ಞಾನ ಬೋಧಿಸಲಾಗುತ್ತಿದೆ. ಕೈತೋಟದಲ್ಲಿ ತರಕಾರಿ ಗಿಡಗಳನ್ನು ನೆಟ್ಟು ಅದಕ್ಕೆ ಹಟ್ಟಿ ಗೊಬ್ಬರ ಹಾಕಿ ಪೋಷಣೆ ಮಾಡಲಾಗುತ್ತಿದೆ. ಕೈತೋಟದಲ್ಲಿ ಔಷಧೀಯ ಸಸಿಗಳನ್ನು ನೆಟ್ಟು ಅಳಿವಿನಂಚಿನಲ್ಲಿರುವ ಆಯುರ್ವೇದ ಔಷಧೀಯ ಸಸ್ಯಗಳ ಪರಿಚಯವನ್ನು ಮಾಡಿ ಮುಂದಿನ ತಲೆಮಾರಿಗೆ ಪರಿಚಯಿಸುವ, ಉಳಿಸುವ ಕೆಲಸ ಆಗುತ್ತಿದೆ.

ಈ ಶಾಲೆಯಲ್ಲಿ ತರಕಾರಿ, ಔಷಧೀಯ ಗಿಡ, ಹೂ, ಹಣ್ಣು, ನೀರು, ಗಾಳಿ, ಮಣ್ಣು, ಶಕ್ತಿ, ಆರೋಗ್ಯ, ನೈರ್ಮಲ್ಯ ಕುರಿತು ವಿದ್ಯಾರ್ಥಿಗಳಿಗೆ ನೀಡಿದ ಅಪಾರ ಜ್ಞಾನದ ಸಂಕೇತವಾಗಿ ಸತತ ಮೂರು ಬಾರಿ ಶಾಲೆಗೆ ಪರಿಸರ ಪ್ರಶಸ್ತಿ ಬಂದಿದೆ. ಶಾಲೆಗೆ ಭೇಟಿ ಕೊಟ್ಟ ತಜ್ಞರ ಸಮಿತಿ ಈ ಎಲ್ಲ ವಿಚಾರಗಳನ್ನು ಪರಿಶೀಲಿಸಿ, ಈ ಬಾರಿ ಕೂಡ ಹಸಿರು ಶಾಲೆ ಪ್ರಶಸ್ತಿಗೆ ಆಯ್ಕೆ ಮಾಡಿತ್ತು.

Advertisement

ಜಲ ಕಾಳಜಿ
ಶಾಲೆಯಲ್ಲಿ ಜಲ ಮರುಪೂರಣ ಘಟಕ ವಿದೆ. ಮಳೆಕೊಯ್ಲು ಪದ್ಧತಿ ಅಳವಡಿಸಿದೆ. ತರಕಾರಿ ತೋಟ ನಿರ್ಮಾಣ, ಶುದ್ಧ ಕುಡಿಯುವ ನೀರಿನ ಘಟಕ, ಶಾಲಾ ಆವರಣದಲ್ಲಿ ಸ್ವಚ್ಛತೆ, ಶಾಲಾ ಆವರಣದಲ್ಲಿ ಫ‌ಲಭರಿತ ಮರಗಳ ಬೆಳೆಸುವಿಕೆ, ಹಣ್ಣಿನ ಗಿಡಗಳು, ಔಷಧೀಯ ಸಸ್ಯ ಬೆಳೆಸುವಿಕೆ, ಬಯೋಗ್ಯಾಸ್‌ ವ್ಯವಸ್ಥೆ ಇದೆ.

ಈ ಶಾಲೆ ಮಾದರಿಯಾಗಿದೆ
ಶಾಲೆ ಪರಿಸರ ಕಾಳಜಿಗೆ ಮಾದರಿಯಾಗಿದೆ. ಇಲ್ಲಿನ ಶಿಕ್ಷಕರು, ಮಕ್ಕಳು, ಶಾಲಾಭಿವೃದ್ಧಿ ಸಮಿತಿ, ಹೆತ್ತವರು ಹಾಗೂ ಸ್ಥಳೀಯರ ನೆರವಿನಿಂದ ಪರಿಸರಸ್ನೇಹಿ ಕಾರ್ಯಗಳು ನಡೆಯುತ್ತಿವೆ. ಶಿಕ್ಷಣ ಇಲಾಖೆ ಕಡೆಯಿಂದ ಈ ಸಾಧನೆಗೆ ಸಹಕರಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ.
– ಸುಕನ್ಯಾ,
ಕ್ಷೇತ್ರ ಶಿಕ್ಷಣಾಧಿಕಾರಿ, ಪುತ್ತೂರು

ಶಿಕ್ಷಣವನ್ನಷ್ಟೆ ನೀಡಿದರೆ ಸಾಲದು
ವಿದ್ಯಾರ್ಥಿಗಳಿಗೆ ಶಿಕ್ಷಣವನ್ನಷ್ಟೆ ಬೋಧಿಸಿದರೆ ಸಾಲದು, ಪರಿಸರ ಕಾಳಜಿಯ ಪಾಠವೂ ಅವಶ್ಯ. ಆ ದಿಕ್ಕಿನಲ್ಲಿ ಎಳೆ ವಯಸ್ಸಿನಲ್ಲಿ ಅವರಲ್ಲಿ ಪರಿಸರ ಕಾಳಜಿ ಮೂಡಿಸುವ ಪ್ರಯತ್ನ ನಡೆಸುತ್ತಿದ್ದೇವೆ. ನಶಿಸಿ ಹೋಗುತ್ತಿರುವ ಆಯುರ್ವೇದ ಔಷಧೀಯ ಸಸ್ಯಗಳನ್ನು ಮಕ್ಕಳಿಗೆ ಪರಿಚಯಿಸುತ್ತಿದ್ದೇವೆ. ಮಕ್ಕಳು, ಸಹ ಶಿಕ್ಷಕರು, ಇಲಾಖೆ ನೆರವಿನಿಂದ ಇದು ಇಲ್ಲಿ ಸಾಕಾರಗೊಂಡಿದೆ.
-ಶಾರದಾ ಪಿ.,
ಮುಖ್ಯ ಶಿಕ್ಷಕಿ

ಕಲಿಕೆ ಜತೆಗೆ ಅನುಭವ
ಅತ್ಯಂತ ಖುಷಿಯ ಅನುಭವ. ಸಸಿ ಬೆಳೆಸುವುದು, ಔಷಧೀಯ ಸಸ್ಯಗಳ ಪರಿಚಯ, ಅದರ ಉಪಯುಕ್ತತೆ ಕುರಿತು ಕಲಿಯಲು ಎಳವೆಯಲ್ಲೆ ಅವಕಾಶ ಸಿಕ್ಕಿದೆ. ನಾನು, ಸಹಪಾಠಿಗಳು ಎಲ್ಲರೂ ಇದರ ಅನುಭವವನ್ನು ಪಡೆಯುತ್ತಿದ್ದೇವೆ. ವೇಳಾಪಟ್ಟಿಯಂತೆ ನಾವು ಪಠ್ಯೇತರ ಚಟುವಟಿಕೆ ನಡೆಸುತ್ತಿದ್ದು, ಪ್ರಯೋಜನಕಾರಿ ಅಂಶವಿದು. ಎಲ್ಲ ಸರಕಾರಿ ಶಾಲೆಗಳಲ್ಲಿ ಇದೇ ಮಾದರಿ ಅಳವಡಿಕೆಯಾಗಬೇಕು.
-ನಿವೇದಿತಾ,
ವಿದ್ಯಾರ್ಥಿ ನಾಯಕಿ

ಬಾಲಕೃಷ್ಣ ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next