Advertisement

ಕಿದು ಸಂಶೋಧನ ಕೇಂದ್ರ ಉಳಿಸಲು ಪಕ್ಷ ಕಟಿಬದ್ಧವಾಗಿದೆ: ರಮಾನಾಥ ರೈ 

12:45 PM Dec 08, 2018 | Team Udayavani |

ಕಡಬ: ಅಂತರಾಷ್ಟ್ರೀಯ ತೆಂಗು ಜೀನ್‌ ಬ್ಯಾಂಕ್‌ ಬಿಳಿನೆಲೆ ಗ್ರಾಮದ ಕಿದು ಸಿಪಿಸಿಆರ್‌ಐ ಕೃಷಿ ಸಂಶೋಧನ ಕೇಂದ್ರವನ್ನು ಕೇಂದ್ರ ಸರಕಾರ ಸ್ಥಳಾಂತರಿಸಲು ಯತ್ನಿಸುತ್ತಿರುವುದು ಈ ಭಾಗದ ರೈತರಿಗೆ ಮಾಡುತ್ತಿರುವ ಘೋರ ಅನ್ಯಾಯ. ಕಿದು ಸಂಶೋಧನ ಕೇಂದ್ರ ಉಳಿಸಲು ಕಾಂಗ್ರೆಸ್‌ ಕಟಿಬದ್ಧವಾಗಿದೆ ಎಂದು ಮಾಜಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದರು.

Advertisement

ಶುಕ್ರವಾರ ಬಿಳಿನೆಲೆ ಸಿಪಿಸಿಆರ್‌ಐ ಕೃಷಿ ಸಂಶೋಧನ ಕೇಂದ್ರದ ಸ್ಥಳಾಂತರ ಹುನ್ನಾರದ ವಿರುದ್ಧ ಬಿಳಿನೆಲೆ ಗ್ರಾಮ ಪಂ. ನೇತೃತ್ವದಲ್ಲಿ ಬಿಳಿನೆಲೆ ಕಿದು ಫಾರ್ಮ್ ಎದುರು ಆಯೋಜಿಸಲಾಗಿದ್ದ ಪ್ರತಿಭಟನ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಈ ಹಿಂದೆ ಜಿಲ್ಲೆಯನ್ನು ಪ್ರತಿನಿಧಿಸುತ್ತಿದ್ದ ಕಾಂಗ್ರೆಸ್‌ ಸಂಸದರ ದೂರದೃಷ್ಟಿಯ ಫಲವಾಗಿ ಜಿಲ್ಲೆಯಲ್ಲಿ ಬಂದರು, ವಿಮಾನ ನಿಲ್ದಾಣ, ಸಿಪಿಸಿಆರ್‌ ಕೃಷಿ ಸಂಶೋಧನ ಕೇಂದ್ರ ಸೇರಿದಂತೆ ಉನ್ನತಮಟ್ಟದ ಹಲವು ಸಂಸ್ಥೆಗಳು ಸ್ಥಾಪನೆಗೊಂಡವು. ಆದರೆ ಇಂದು ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ನೇತೃತ್ವದ ಸರಕಾರ ಅವುಗಳನ್ನು ಹಾಳುಗೆಡವುತ್ತಿದೆ. ದೇಶದ ಜನರಲ್ಲಿ ಯಾವುದೋ ಭ್ರಮೆ ಹುಟ್ಟಿಸಿ ಅಧಿಕಾರ ಪಡೆದ ಮೋದಿ ಸರಕಾರ ಈ ದೇಶದಿಂದ ತೊಲಗದೆ ಈ ದೇಶಕ್ಕೆ ಉಳಿಗಾಲವಿಲ್ಲ ಎಂದು ರೈ ಆಕ್ರೋಶ ವ್ಯಕ್ತಪಡಿಸಿದರು.

ಷಡ್ಯಂತರ ಹೆಣೆದಿದ್ದಾರೆ
ಮಾಜಿ ಶಾಸಕಿ ಶಕುಂತಳಾ ಟಿ.ಶೆಟ್ಟಿ ಮಾತನಾಡಿ, ಕಿದು ಸಿಪಿಸಿಆರ್‌ಐ ಸಂಸ್ಥೆಯ ಸ್ಥಳಾಂತರ ವಿಚಾರದಲ್ಲಿ ಕೇಂದ್ರ ಸಚಿವರು ಹಾಗೂ ಇಲ್ಲಿನ ಸಂಸದರು ಸ್ಪಷ್ಟವಾಗಿ ಮಾತನಾಡುತ್ತಿಲ್ಲ. ರಾಜಕೀಯ ಉದ್ದೇಶಕ್ಕಾಗಿ ಏನೇನೋ ಹೇಳುತ್ತಿದ್ದಾರೆ. ಓಟು ಪಡೆಯುವುದಕ್ಕೋಸ್ಕರ ಈ ಷಡ್ಯಂತರ ಹೆಣೆಯಲಾಗಿದೆ. ಇವರು ಜನರ ಹಿತ ಕಾಯುವುದಿಲ್ಲ ಎಂದರು.

ದೇವೇಗೌಡರ ಮೂಲಕ ಒತ್ತಡ
ಜೆಡಿಎಸ್‌ ರಾಜ್ಯ ಉಪಾಧ್ಯಕ್ಷ ಎಂ. ಬಿ.ಸದಾಶಿವ ಅವರು ಮಾತನಾಡಿ, ಇಲ್ಲಿನ ಬಿಜೆಪಿ ಮುಖಂಡರು ಸಂಸ್ಥೆಯು ಸ್ಥಳಾಂತರವಾಗುವುದಿಲ್ಲ ಎಂದು ಜನರಿಗೆ ತಪ್ಪು ಸಂದೇಶ ನೀಡುತ್ತಿದ್ದಾರೆ. ಈ ನಿಟ್ಟಿನಲ್ಲಿ ನಡೆದಿರುವ ಪ್ರಯತ್ನಗಳ ಬಗ್ಗೆ ಅವರು ದಾಖಲೆಗಳನ್ನು ಜನರ ಮುಂದಿರಿಸಲಿ ಎಂದು ಸವಾಲು ಹಾಕಿದರು. ಈ ಬಗ್ಗೆ ಮಾಜಿ ಪ್ರಧಾನಿ ದೇವೇಗೌಡರ ಮುಖಾಂತರ ಕೇಂದ್ರಕ್ಕೆ ಒತ್ತಡ ತರುತ್ತೇವೆ. ಹೋರಾಟಕ್ಕೆ ಮಾಜಿ ಪ್ರಧಾನಿಗಳು ನೇತೃತ್ವವಹಿಸಲಿದ್ದಾರೆ ಎಂದರು.

Advertisement

ಜಿ.ಪಂ. ಸದಸ್ಯ ಪಿ.ಪಿ.ವರ್ಗೀಸ್‌, ಸರ್ವೋತ್ತಮ ಗೌಡ, ಜಿಲ್ಲಾ ಕಾಂಗ್ರೆಸ್‌ ಉಪಾಧ್ಯಕ್ಷ ವಿಜಯಕುಮಾರ್‌ ರೈ ಕರ್ಮಾಯಿ, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಸದಸ್ಯ ಬಾಲಕೃಷ್ಣ ಗೌಡ ಬಳ್ಳೇರಿ, ಕಡಬ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ದಿವಾಕರ ಗೌಡ ಶಿರಾಡಿ, ಕಡಬ ತಾ| ಜೆಡಿಎಸ್‌ ಅಧ್ಯಕ್ಷ ಸಯ್ಯದ್‌ ಮೀರಾ ಸಾಹೇಬ್‌, ತಾ.ಪಂ. ಸದಸ್ಯ ಫಝಲ್‌ ಕೋಡಿಂಬಾಳ, ಗಣೇಶ್‌ ಕೈಕುರೆ, ಅಶೋಕ್‌ ನೆಕ್ರಾಜೆ, ಕಡಬ ಬ್ಲಾಕ್‌ ಕಾಂಗ್ರೆಸ್‌ ಮಹಿಳಾ ಘಟಕದ ಅಧ್ಯಕ್ಷೆ ಉಷಾ ಅಂಚನ್‌, ಕಾಂಗ್ರೆಸ್‌ ಮುಖಂಡ ಸುಧೀರ್‌ ಕುಮಾರ್‌ ಶೆಟ್ಟಿ, ತಾಲೂಕು ರಬ್ಬರ್‌ ಬೆಳೆಗಾರರ ಸಂಘದ ಅಧ್ಯಕ್ಷ ಪ್ರಸಾದ್‌ ಕೌಶಲ್‌ ಶೆಟ್ಟಿ, , ಕಡಬ ತಾ| ರೈತ ಸಂಘದ ಅಧ್ಯಕ್ಷ ವಿಕ್ಟರ್‌ ಮಾರ್ಟಿಸ್‌, ಜಿ.ಪಂ. ಮಾಜಿ ಸದಸ್ಯೆ ಕುಮಾರಿ ವಾಸುದೇವನ್‌, ಗಧಾದರ ಮಲ್ಲಾರ, ಮನೋಜ್‌ ಕುಮಾರ್‌ ಬಿಳಿನೆಲೆ ಮತ್ತಿತರರು ಮಾತನಾಡಿದರು.

ಜಿಲ್ಲಾ ಕಾಂಗ್ರೆಸ್‌ ಸಮಿತಿ ಕಾರ್ಯದರ್ಶಿ ಸೈಮನ್‌ ಸಿ.ಜೆ., ಜೆಡಿಎಸ್‌ ಮುಖಂಡ ದಯಾಕರ ಆಳ್ವ, ಕಾಂಗ್ರೆಸ್‌ ಮುಖಂಡರಾದ ಕೆ.ಪಿ.ಥಾಮಸ್‌ ನೆಲ್ಯಾಡಿ, ಮನಮೋಹನ್‌ ಗೋಳ್ಯಾಡಿ, ಬಾಬು ಮುಗೇರ, ಸದಾನಂದ ಗೌಡ ಸಾಂತ್ಯಡ್ಕ, ಗಿರೀಶ್‌ ಬದನೆ, ಕೆ.ಜೆ.ಥಾಮಸ್‌, ಎ.ಎಸ್‌. ಶರೀಫ್‌, ಥಾಮಸ್‌ ಇಡೆಯಾಳ, ಅಶ್ರಫ್‌ ಶೇಡಿಗುಂಡಿ ಮತ್ತಿತರ ಮುಖಂಡರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಕಡಬ ಉಪ ತಹಶೀಲ್ದಾರ್‌ ನವ್ಯ ಮುಖಾಂತರ ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು. ಬಿಳಿನೆಲೆ ಗ್ರಾ.ಪಂ.ಅಧ್ಯಕ್ಷೆ ಶಾರದಾ ದಿನೇಶ್‌ ಸ್ವಾಗತಿಸಿದರು. ದಲಿತ ಮುಖಂಡ ಶಶಿಧರ್‌ ಬೊಟ್ಟಡ್ಕ ನಿರೂಪಿಸಿ, ವಂದಿಸಿದರು.

ಸಂಸದರ ಕೊಡುಗೆ ಏನೂ ಇಲ್ಲ
ಕೆಪಿಸಿಸಿ ಸದಸ್ಯ ಡಾ| ರಘು ಬಿ. ಮಾತನಾಡಿ ಅವರು ನಮ್ಮ ಸಂಸದರು ಈ ಜಿಲ್ಲೆಗೆ ಮಾಡಿದ್ದು ಏನೂ ಇಲ್ಲ, ಸಿಪಿಸಿಆರ್‌ಐ ವಿಚಾರದಲ್ಲಿ ಅವರು ಸ್ಪಷ್ಟ ನಿಲುವನ್ನು ತೆಗೆದುಕೊಂಡಿಲ್ಲ, ಸಿಪಿಸಿಆರ್‌ಐ ಉಳಿಸುವಲ್ಲಿ ಪ್ರಾಮಾಣಿಕ ಪ್ರಯತ್ನವನ್ನಂತೂ ಮಾಡಿಯೇ ಇಲ್ಲ. ಆಂಗ್ಲ ಭಾಷೆ ತಿಳಿಯದ ಸಂಸದರು ಈ ವಿಚಾರದಲ್ಲಿ ವಿಜ್ಞಾನಿಗಳಲ್ಲಿ ಅಥವಾ ಲೋಕಸಭೆಯಲ್ಲಿ ಹೇಗೆ ತಾನೇ ಸಮರ್ಥವಾಗಿ ವಾದ ಮಂಡಿಸಲು ಸಾಧ್ಯ. ಈ ಬಗ್ಗೆ ನಮ್ಮ ಪರವಾಗಿ ಮಾತನಾಡಬೇಕಾದ ಕ್ಷೇತ್ರದ ಶಾಸಕರಿಗೂ ತುಳು, ಕನ್ನಡ ಬಾಷೆ ಬಿಟ್ಟರೆ ಬೇರೆ ಭಾಷೆಯೇ ಬರುವುದಿಲ್ಲ. ಇಂತಹ ಜನಪ್ರತಿನಿಧಿಗಳಿಂದ ನಾವೇನು ನಿರೀಕ್ಷೆ ಮಾಡಬಹುದು ಎಂದು ಲೇವಡಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next