ಯಳಂದೂರು: ತಾಲೂಕಿನ ಬಿಳಿಗಿರಿರಂಗನಬೆಟ್ಟದ ರಂಗನಾಥಸ್ವಾಮಿ ದೇವಾಲಯದಲ್ಲಿ ದೊಡ್ಡ ಜಾತ್ರೆ ನಿಮಿತ್ತ ಸೋಮವಾರ ನಡೆದ ವಿವಿಧ ಧಾರ್ಮಿಕ ಕಾರ್ಯದಲ್ಲಿ ಸೋಲಿಗ ವ್ಯಕ್ತಿಯು ಉತ್ಸವ ಮೂರ್ತಿಗೆ ದೊಣ್ಣೆಯಿಂದ ಹೊಡೆಯುವ (ಸ್ಪರ್ಶಿಸುವ) ವಿಶಿಷ್ಟ ಆಚರಣೆ ನಡೆಯಿತು.
ಜಾತ್ರೆ ನಿಮಿತ್ತ ಬೆಳಗ್ಗೆ ಗರುಡೋತ್ಸವ, ಕುದುರೆ ವೈಯಾಳಿ ಉತ್ಸವ, ನಂತರ ಅವಭೃತ ಮಂಗಳಸ್ನಾನ, ಸಾಯಂಕಾಲ ಧ್ವಜಾ ಅವರೋಹಣ, ಅ ನಂತರ ನರಾಂದೋಳಿಕಾರೋಹಣ ಮಹೋತ್ಸವ ನಡೆಯಿತು. ಜತೆಗೆ ಶ್ರೀಬಿಳಿಗಿರಿರಂಗನಾಥಸ್ವಾಮಿ ಉತ್ಸವ ಮೂರ್ತಿಯನ್ನು ದೇಗುಲದ ಆವರಣದಲ್ಲಿ ಒಂದು ಸುತ್ತು ಪ್ರದಕ್ಷಿಣೆ ಮಾಡಿ, ನಂತರ ಸೋಲಿಗ ವ್ಯಕ್ತಿಯು ಮಡಕೆ ಹಾಗೂ ಒಂದು ದೊಣ್ಣೆ ಹಿಡಿದು ಮೊದಲು ಉತ್ಸವ ಮೂರ್ತಿಗೆ ಪೂಜಿಸಿ, ನಂತರ ಮೂರು ಬಾರಿ ದೊಣ್ಣೆಯಿಂದ ಸ್ಪರ್ಶಿಸುವ ಮೂಲಕ ದೇವರಿಗೆ ಹೊಡೆಯುವ ಸಾಂಪ್ರದಾಯವನ್ನು ಆಚರಿಸಿದರು.
ಜನಪದದ ಹಿನ್ನೆಲೆ: ಬಿಳಿಗಿರಿರಂಗಬೆಟ್ಟದ ಮೊಮ್ಮೇ ಗೌಡನ ಆರು ಹೆಣ್ಣು ಮಕ್ಕಳಲ್ಲಿ ಕೊನೆಯವಳಾದ ಕುಸುಮಾಲೆಯನ್ನು ನೋಡಿದ ಮೊದಲ ನೋಟದಲ್ಲಿ ರಂಗನಾಥಸ್ವಾಮಿಗೆ ಪ್ರೇಮಾಂಕುರ ವಾಗುತ್ತದೆ. ಕಾಡಿನಲ್ಲಿ ಗೆಡ್ಡೆ ಗೆಣಸು ಸಂಗ್ರಹಿಸಲು ಅಕ್ಕಂದಿರೊಂದಿಗೆ ಕುಸಮಾಲೆ ತೆರಳಿದ್ದಳು. ಕಾಡಿಗೆ ಹೋಗಿದ್ದವರೆಲ್ಲ ಮರಳಿದರೂ ಕುಸುಮಾಲೆಗೆ ಸ್ವಲ್ಪ ತಡವಾಗುತ್ತದೆ. ದಾಸಯ್ಯನ ವೇಷದಲ್ಲಿ ಅಲ್ಲಿಗೆ ಬಂದಿದ್ದ ಬಿಳಿಗಿರಿರಂಗನಾಥಸ್ವಾಮಿ ಆಕೆ ಸಂಗ್ರಹಿಸಿದ್ದ ಗೆಣಸು ಗುಡ್ಡೆಗಳನ್ನು ತಲೆಗೆತ್ತಿ ಕೊಡಲು ಹಿಂಜರಿ ಯುತ್ತಾನೆ. ಈ ವೇಳೆ ನಿನಗೇನು ಬೇಕು ಅದನ್ನು ಕೊಡುತ್ತೇನೆ ಗೆಡ್ಡೆಯನ್ನು ಎತ್ತಿಕೊಡು ಎನ್ನುತ್ತಾಳೆ ಕುಸುಮಾಲೆ. ಹಾಗಿದ್ದರೆ ನೀನು ನನ್ನ ಹೆಂಡತಿಯಾಗು ಎಂದು ದಾಸಯ್ಯ ಕೇಳುತ್ತಾನೆ. ನೀನು ನೋಡಿದರೆ ಹಲ್ಲು ಉದುರಿದ ಮುದುಕ. ನಾನು ನಿನ್ನ ಹೆಂಡತಿ ಯಾಗಲ್ಲ ಎಂದು ಹೀಯಾಳಿಸುತ್ತಾಳೆ.
ಈ ವೇಳೆ ದಟ್ಟಡವಿಯಲ್ಲಿ ಕತ್ತಲು ಆವರಿಸುತ್ತದೆ. ಇದರಿಂದ ಹೆದರಿದ ಕುಸುಮಾಲೆ ಮಡದಿಯಾಗಲು ಒಲ್ಲದ ಮನಸ್ಸಿನಿಂದ ಒಪ್ಪುತ್ತಾಳೆ. ಬಿಳಿಗಿರಿರಂಗನು ನಿಜರೂಪ ಪ್ರದರ್ಶಿಸಿ ಆಕರ್ಷಿಸುತ್ತಾನೆ. ಆ ರಾತ್ರಿ ಕಾಡಿನಲ್ಲಿಯೇ ಇದ್ದ ಈರ್ವರೂ ಒಂದಾಗುತ್ತಾರೆ. ಪೋಡಿನ ಸೋಲಿಗರು ಕುಡುಗೋಲು, ಕೊಡಲಿ ಹಿಡಿದು ದಾಸಯ್ಯನ ಮೇಲೆ ಹಲ್ಲೆ ಮಾಡುವುದಕ್ಕೆ ಯತ್ನಿಸುತ್ತಾರೆ. ಆಗ ನಿಜರೂಪ ತೋರಿದ ಬಿಳಿಗಿರಿರಂಗ ಕುಸುಮಾಲೆಯನ್ನು ಲಗ್ನವಾಗುತ್ತಾನೆ. ಲಕ್ಷ್ಮೀದೇವಿ ಮತ್ತು ತುಳುಸಮ್ಮ ಎಂಬುವರಿಬ್ಬರ ಜೊತೆಗೆ ಮೂರನೇ ಮಡದಿಯಾಗಿ ಕುಸುಮಾಲೆ ಸೇರ್ಪಡೆಯಾದಳು ಎಂಬ ಜನಪದೀಯ ರಮ್ಯಕತೆ ಜನಜನಿತವಾಗಿದೆ.
ಸೋಲಿಗರಿಗೆ ಕಾಣಕೆ: ಸೋಲಿಗ ಜನಾಂಗದ ಕುಸುಮಾಲೆಯನ್ನು ಮದುವೆಯಾದ ಹಿನ್ನೆಲೆಯಲ್ಲಿ ರಥೋತ್ಸವ ಜರುಗಿದ ಎರಡು ದಿನದ ನಂತರ ಬಿಳಿಗಿರಿರಂಗ ನಾಥಸ್ವಾಮಿ ಉತ್ಸವ ಮೂರ್ತಿಗೆ ಪೂಜಿಸಿ ದೊಣ್ಣೆಯಿಂದ ಹೊಡೆದು (ಸ್ಪರ್ಶಿಸಿ) ನಂತರ ಕಾಣಿಕೆ ಹಣವನ್ನು ಭಕ್ತರು ದೇಗುಲದ ಮಡಿಕೆಗೆ ಹಾಕುತ್ತಾರೆ. ಆ ಹಣವನ್ನು ಸೋಲಿಗರು ಪಡೆದುಕೊಂಡು ಹೋಗುತ್ತಾರೆ. ಈ ರೀತಿಯಲ್ಲಿ ಮದುವೆಯಾದ ತಪ್ಪಿಗೆ ತಪ್ಪು ಕಾಣಿಕೆ ನೀಡುತ್ತಾರೆ. ಸೋಲಿಗರು ಬಿಳಿಗಿರಿರಂಗಪ್ಪನನ್ನು ತಮ್ಮ ಭಾವನೆಂದು ಸಂಬೋಧಿಸಿ ಪೂಜಿಸಿ ಆರಾಧಿಸುತ್ತಾರೆ. ಇದರಿಂದ ರಂಗ ಭಾವನಿಗೆ ರಥೋತ್ಸವದ ಸಮಯದಲ್ಲಿ ಉಚಿತವಾಗಿ ಸೇವೆ ಸಲ್ಲಿಸಿ ವಿಶೇಷವಾಗಿ ಈ ಉತ್ಸವ ಆಚರಿಸುವ ರೂಢಿ ಇಲ್ಲಿದೆ.