ಚಾಮರಾಜನಗರ ಜಿಲ್ಲೆ : ತಾಲೂಕಿನ ಬಿಳಿಗಿರಿರಂಗನಬೆಟ್ಟದ ಐತಿಹಾಸಿಕ ಬಿಳಿಗಿರಿರಂಗನಾಥಸ್ವಾಮಿ ದೇಗುಲದ ಅರ್ಚಕರೂ ಸೇರಿದಂತೆ ಒಟ್ಟು 17 ಮಂದಿಗೆ ಕೋವಿಡ್ ದೃಢಪಟ್ಟ ಹಿನ್ನೆಲೆಯಲ್ಲಿ ಗುರುವಾರ ದೇಗುಲವನ್ನು ಬಂದ್ ಮಾಡಲಾಗಿದೆ.
ಏ. 2 ರಂದು ದೇಗುಲದ ಮಹಾಸಂಪ್ರೋಕ್ಷಣೆ ನಡೆದಿತ್ತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜಿಲ್ಲಾಧಿಕಾರಿ ರವಿ ಅವರಿಗೆ ಕೋವಿಡ್ ದೃಢಪಟ್ಟಿತ್ತು. ಹೀಗಾಗಿ ಅರ್ಚಕರು ಪರೀಕ್ಷೆ ಮಾಡಿಸಿದಾಗ ಏ. 6 ರಂದು ದೇಗುಲದ ಅರ್ಚಕ ಸೇರಿದಂತೆ ಇವರ ಕುಟುಂಬದ ಒಟ್ಟು ನಾಲ್ವರಿಗೆ ಕೋವಿಡ್ ಸೋಂಕು ಕಾಣಿಸಿಕೊಂಡಿತ್ತು. ಇದಾದ ಬಳಿಕ ದೇಗುಲವನ್ನು ಸ್ಯಾನಿಟೈಸ್ ಮಾಡಲಾಗಿತ್ತು.
ಈ ಹಿನ್ನೆಲೆಯಲ್ಲಿ ದೇಗುಲದ ಅರ್ಚಕರೂ ಸೇರಿದಂತೆ ಎಲ್ಲ 34 ಸಿಬ್ಬಂದಿಗೂ ಕೋವಿಡ್ ಪರೀಕ್ಷೆ ಮಾಡಿಸಲಾಗಿತ್ತು. ಇದರಲ್ಲಿ ಮತ್ತೆ 13 ಮಂದಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ಬಿಳಿಗಿರಿರಂಗನಾಥಸ್ವಾಮಿ ದೇಗುಲಕ್ಕೆ ಪೂಜೆ ಅರ್ಚಕರಿಗೆ ಸೋಂಕು ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಗುರುವಾರ ದೇಗುಲವನ್ನು ಬಂದ್ ಮಾಡಲಾಗಿದೆ. ಎಲ್ಲರೂ ಕೂಡ ಹೋಂ ಐಸೋಲೇಷನ್ ನಲ್ಲಿದ್ದಾರೆ.
ದೇಗುಲ ಬಂದ್ ಆಗಿರುವ ಹಿನ್ನೆಲೆಯಲ್ಲಿ ಗುರುವಾರ ಬೆಟ್ಟಕ್ಕೆ ಭಕ್ತರ ಸಂಖ್ಯೆ ಕಡಿಮೆ ಇತ್ತು. ಇದರ ಅರಿವಿಲ್ಲದೆ ದರ್ಶನಕ್ಕೆ ಬಂದಿದ್ದ ಕೆಲ ಭಕ್ತರು ದೇಗುಲ ಬಂದ್ ಆಗಿದ್ದರಿಂದ ದರ್ಶನವಿಲ್ಲದೆ ಹಿಂದಿರುಗಿದರು.
ದೇವಸ್ಥಾನದಲ್ಲಿ ಪೂಜೆ ಮಾಡುವ ಅರ್ಚಕರಿಗೆ ಕೋವಿಡ್ ಕಾಣಿಸಿಕೊಂಡಿದೆ. ದೇಗುಲದ ಅರ್ಚಕರು ಹಾಗೂ ಸಿಬ್ಬಂಧಿಗೆ ಕೋವಿಡ್ ಪರೀಕ್ಷೆ ಮಾಡಲಾಗಿದೆ. ಇದರಲ್ಲಿ 13 ಜನರಿಗೆ ಪಾಸಿಟಿವ್ ಬಂದಿದೆ. ಹಾಗಾಗಿ ತಾತ್ಕಾಲಿಕವಾಗಿ ದೇಗುಲವನ್ನು ಬಂದ್ ಮಾಡಲಾಗಿದೆ. ಈ ಬಗ್ಗೆ ಉಪವಿಭಾಗಾಧಿಕಾರಿಗಳ ಗಮನಕ್ಕೆ ಈ ವಿಷಯವನ್ನು ತಂದು ಮುಂದಿನ ಕ್ರಮ ವಹಿಸಲಾಗುವುದು ಎಂದು ಬಿಳಿಗಿರಿರಂಗನಾಥಸ್ವಾಮಿ ದೇವಸ್ಥಾನದ ಇಒ ಮೋಹನ್‌ಕುಮಾರ್ ತಿಳಿಸಿದ್ದಾರೆ.