ಕನ್ನಡದಲ್ಲಿ ತರಹೇವಾರಿ ಶೀರ್ಷಿಕೆಯುಳ್ಳ ಚಿತ್ರಗಳು ಬರುತ್ತಿವೆ. ಅದಕ್ಕೆ ತಕ್ಕಂತಹ ಕಥೆಗಳನ್ನೂ ಹೊತ್ತು ತರುತ್ತಿವೆ. ಈಗ ಆ ಸಾಲಿಗೆ “3 ಗಂಟೆ 30 ದಿನ 30 ಸೆಕೆಂಡ್’ ಚಿತ್ರವೂ ಸೇರಿದೆ. ಇತ್ತೀಚೆಗಷ್ಟೇ ಚಿತ್ರದ ಆಡಿಯೋ ಸಿಡಿ ಬಿಡುಗಡೆ ಮಾಡಿದ ಚಿತ್ರತಂಡ ಖುಷಿಯಾಗಿದೆ.
ಅದಕ್ಕೆ ಕಾರಣ, ಆಡಿಯೋ ಬಿಡುಗಡೆಯಾದ ಕೇವಲ ಮೂರೇ ದಿನದಲ್ಲಿ ಸುಮಾರು 70 ಸಾವಿರ ಮಂದಿ ಹಾಡುಗಳನ್ನು ವೀಕ್ಷಿಸಿ, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲ, ಆ ಚಿತ್ರದ “ಬಿಟ್ಟಿ ಬಿಲ್ಡಪ್ ಮಾಡಬೇಡ …’ ಎಂಬ ಹಾಡಿಗೆ ಹೆಚ್ಚು ಮೆಚ್ಚುಗೆ ವ್ಯಕ್ತವಾಗಿದೆ. “ಕಾಸ್ಟ್ಲಿ ವಾಚು ಕೈಲಿದ್ರೂ ಟೈಮು ನಿಲ್ಸೊಕ್ ಆಗೋಲ್ಲ..’ ಎಂಬ ಸಾಹಿತ್ಯ ಹೊಂದಿರುವ ಈ ಹಾಡಿಗೆ ಟಿಪ್ಪು ದನಿಯಾಗಿದ್ದಾರೆ.
ಈ ಹಾಡಿನ ಇನ್ನೊಂದು ವಿಶೇಷವೆಂದರೆ, ಈಗಾಗಲೇ ಈ ಹಾಡು ವೀಕ್ಷಿಸಿರುವ ವಿದ್ಯಾರ್ಥಿಗಳು ಮತ್ತು ಮಕ್ಕಳು ಈ ಹಾಡಿಗೆ ಹೆಜ್ಜೆ ಹಾಕಿ, ವೀಡಿಯೋಗಳನ್ನು ಸಾಮಾಜಿಕ ತಾಣಗಳಲ್ಲಿ ಅಪ್‌ಲೋಡ್ ಮಾಡುತ್ತಿದ್ದಾರೆ. ಆ ವೀಡಿಯೋ ಕೂಡ ವೈರಲ್ ಆಗಿರುವುದು ವಿಶೇಷತೆಗಳಲ್ಲೊಂದು. ನಿರ್ದೇಶಕ ಮಧುಸೂದನ್ ಅವರು ಹೊಸದೊಂದು ಆಲೋಚನೆ ಮಾಡಿದ್ದಾರೆ.
ಅದೇನೆಂದರೆ, ಅಭಿಮಾನಿಗಳು ಮಾಡಿದ ಹಾಡನ್ನು ಚಿತ್ರದಲ್ಲಿ ಬಳಸಿಕೊಂಡರೆ ಹೇಗೆ ಎಂಬ ಬಗ್ಗೆ ಚರ್ಚೆ ಮಾಡಿದ್ದಾರೆ. ಅಷ್ಟೇ ಅಲ್ಲ, ಅರಿ ಹೆಚ್ಚು ಸೃಜನಶೀಲವಾಗಿರುವ ಹಾಡಿಗೆ ಉತ್ತಮ ಬಹುಮಾನ ನೀಡಲು ನಿರ್ದೇಶಕರು ನಿರ್ಧರಿಸಿದ್ದಾರೆ. ಬ್ರೈನ್‌ಶೇರ್ ಕ್ರಿಯೇಷನ್ಸ್ ಬ್ಯಾನರ್‌ನಲ್ಲಿ ಜಿ.ಕೆ.ಮಧುಸೂದನ್ ಮೊದಲ ಸಲ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಈ ಚಿತ್ರವನ್ನು ಚಂದ್ರಶೇಖರ್ ಆರ್.ಪದ್ಮಶಾಲಿ ಮತ್ತು ಗೆಳೆಯರು ನಿರ್ಮಿಸಿದ್ದಾರೆ.
ಚಿತ್ರದಲ್ಲಿ ಜಯಂತ್ ಕಾಯ್ಕಿಣಿ ಒಂದು ಹಾಡು ಬರೆದಿದ್ದಾರೆ. ಮಿಕ್ಕಂತೆ ನಿರ್ದೇಶಕರು ಹಾಡುಗಳನ್ನು ರಚಿಸಿದ್ದಾರೆ. ಶ್ರೀಧರ್ ವಿ.ಸಂಭ್ರಮ್ ಇಲ್ಲಿ ಸಂಗೀತದ ಜತೆಗೆ ಒಂದು ಹಾಡನ್ನು ಮೊದಲ ಬಾರಿಗೆ ಹಾಡಿದ್ದಾರೆ. ಅರುಗೌಡ, ಕಾವ್ಯಾಶೆಟ್ಟಿ ಚಿತ್ರದ ನಾಯಕ, ನಾಯಕಿಯಾಗಿ ನಟಿಸಿದ್ದಾರೆ. ಸುಧಾರಾಣಿ, ದೇವರಾಜ್ ಸೇರಿದಂತೆ ಅನೇಕ ಕಲಾವಿದರು ನಟಿಸಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದರೆ, ನವೆಂಬರ್‌ನಲ್ಲಿ ಚಿತ್ರ ಬಿಡುಗಡೆಯಾಗಲಿದೆ.