ಇಸ್ಲಾಮಾಬಾದ್: “ಪಂದ್ಯ ಸೋಲುತ್ತೇನೆ ಎಂಬ ಭಯದಿಂದ ವಿಕೆಟ್‌ನೊಂದಿಗೆ ಪಿಚ್‌ನಿಂದ ಪರಾರಿಯಾಗುತ್ತಿರುವ ಮೊತ್ತ ಮೊದಲ ಕ್ಯಾಪ್ಟನ್ ಎಂದರೆ ಅದು ಇಮ್ರಾನ್ ಖಾನ್.’ ಹೀಗೆಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ವಿರುದ್ಧ ಕ್ರಿಕೆಟ್ ಭಾಷೆಯಲ್ಲೇ ವಾಗ್ಧಾಳಿ ನಡೆಸಿದ್ದು ಪಾಕಿಸ್ಥಾನ ಪೀಪಲ್ಸ್ ಪಾರ್ಟಿ ಮುಖ್ಯಸ್ಥ ಬಿಲಾವಲ್ ಭುಟ್ಟೋ ಜರ್ದಾರಿ.
ಶನಿವಾರ ನ್ಯಾಶನಲ್ ಅಸೆಂಬ್ಲಿಯಲ್ಲಿ ಮಾತ ನಾಡಿದ ಭುಟ್ಟೋ, “ಅಧಿಕಾರ ಬಿಟ್ಟು ತೆರಳುವ ಮುನ್ನ ಸ್ವಲ್ಪವಾದರೂ ಕ್ರೀಡಾ ಸ್ಫೂರ್ತಿ ತೋರಿಸಿ’ ಎಂದು ಕೇಳಿಕೊಂಡಿದ್ದಾರೆ.
ಅವಿಶ್ವಾಸ ಗೊತ್ತುವಳಿಯ ಮತದಾನದ ದಿನವಾದ ಶನಿವಾರ ಅಸೆಂಬ್ಲಿಗೆ ಹಾಜ ರಾಗದೇ ದೂರವುಳಿದಿದ್ದ ಇಮ್ರಾನ್ ಖಾನ್ ವಿರುದ್ಧ ಕಿಡಿಕಾರಿದ ಭುಟ್ಟೋ, “ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಸಾಧ್ಯವಿಲ್ಲ ಎಂಬು ದನ್ನು ಅರಿತೇ ಅವರು ಇಂದು ಇಲ್ಲಿಗೆ ಬಂದಿಲ್ಲ. ಸಂವಿಧಾನದ ವಿರುದ್ಧದ ಸಂಚು ಎಂದಿಗೂ ಸಫಲವಾಗದು’ ಎಂದಿದ್ದಾರೆ.
ಶನಿವಾರ ಸಂಸತ್‌ನಲ್ಲಿ ಇಮ್ರಾನ್ ಖಾನ್ ವಿರು ದ್ಧದ ಅವಿಶ್ವಾಸ ಗೊತ್ತುವಳಿಯ ಮತ ದಾನ ನಡೆಯಬೇಕು ಎಂದು ಸುಪ್ರೀಂ ಕೋರ್ಟ್ ಆದೇಶಿಸಿದ್ದರೂ, ಸ್ಪೀಕರ್ ಮಾತ್ರ ಬೇರೆ ಬೇರೆ ನೆಪ ಹೇಳಿ ಕಲಾಪವನ್ನು ದೀರ್ಘಾ ವಧಿಗೆ ಮುಂದೂಡಿಕೆ ಮಾಡು ತ್ತಿದ್ದರು. ಈ ಮೂಲಕ ಪ್ರಕ್ರಿಯೆಯನ್ನು ಸುಖಾಸುಮ್ಮನೆ ವಿಳಂಬ ಮಾಡುತ್ತಿದ್ದ ಸ್ಪೀಕರ್ ವಿರುದ್ಧ ವಿಪಕ್ಷಗಳ ಸದಸ್ಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಈ ವೇಳೆ ಭುಟ್ಟೋ ಕೂಡ ಖಾನ್ ಮತ್ತು ಸ್ಪೀಕರ್ ವಿರುದ್ಧ ಹರಿಹಾಯ್ದರು.
ಸ್ಪೀಕರ್ ವಿರುದ್ಧ ಗರಂ: ವಿಪಕ್ಷ ನಾಯಕ ಶೆಹಬಾಜ್ ಷರೀಫ್ ಮಾತನಾಡಿ, “ಆಗಿ ದ್ದೆಲ್ಲಾ ಆಗಿ ಹೋಯಿತು. ಈಗಲಾದರೂ ನೀವು ಕಾನೂನು ಮತ್ತು ಸಂವಿಧಾನದ ಪರ ನಿಲ್ಲಿ. ನಿಮ್ಮ ಪಾತ್ರವನ್ನು ಪ್ರಾಮಾಣಿಕವಾಗಿ ನಿಭಾಯಿಸಿ. ಆಗ ನಿಮ್ಮ ಹೆಸರನ್ನು ಪಾಕ್ ಇತಿಹಾಸದ ಸ್ವರ್ಣ ಅಕ್ಷರಗಳಲ್ಲಿ ಬರೆಯ ಲಾಗುತ್ತದೆ’ ಎಂದು ಸ್ಪೀಕರ್ ಖೈಸರ್‌ರನ್ನು ಉದ್ದೇಶಿಸಿ ಹೇಳಿದರು.
ಖಾನ್ ಭಾರತಕ್ಕೆ ಹೋಗಲಿ: ಭಾರತವನ್ನು ಹೊಗಳಿದ ಪಾಕ್ ಪ್ರಧಾನಿ ಇಮ್ರಾನ್ ಖಾನ್‌ರನ್ನು ಪ್ರತಿಪಕ್ಷ ನಾಯಕಿ ಮರ್ಯಮ್ ನವಾಜ್ ಷರೀಫ್ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಇಮ್ರಾನ್‌ಗೆ ಭಾರತ ಅಷ್ಟು ಇಷ್ಟವಾಗಿದ್ದರೆ, ಆ ದೇಶಕ್ಕೇ ಹೋಗಿ ನೆಲೆಸಲಿ. ಪಾಕಿಸ್ಥಾನವನ್ನು ಪೂರ್ಣವಾಗಿ ತೊರೆಯಲಿ. ಇಮ್ರಾನ್‌ಗೆ ತಮ್ಮ ಅಧಿಕಾರ ಕೈತಪ್ಪಿಹೋಗಿ ರುವ ಅರಿವಾಗಿದೆ. ಅದರಿಂದ ಹುಚ್ಚರಂತೆ ಬಡಬಡಿಸುತ್ತಿದ್ದಾರೆ. ಬೇರೆ ಯಾರೂ ಬೇಡ, ಅವರನ್ನು ಅವರ ಪಕ್ಷದಿಂದಲೇ ಉಚ್ಚಾಟಿಸಲಾಗುತ್ತದೆ’ ಎಂದು ಮರ್ಯಮ್ ಷರೀಫ್ ಕುಟುಕಿದ್ದಾರೆ.
ಸುಪ್ರೀಂಗೆ ಮೇಲ್ಮನವಿ
ಅವಿಶ್ವಾಸ ಗೊತ್ತುವಳಿಯ ಮತ ದಾನದ ದಿನವಾದ ಶನಿವಾರ ಕೊನೇ ಕ್ಷಣದಲ್ಲಿ ಇಮ್ರಾನ್ ಖಾನ್ ನೇತೃತ್ವದ ತೆಹ್ರೀಕ್-ಇ-ಇನ್ಸಾಫ್ ಸರಕಾರವು ಶನಿವಾರ ಮತ್ತೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ಪ್ರಧಾನಿ ವಿರುದ್ಧದ ಅವಿಶ್ವಾಸ ನಿರ್ಣಯವನ್ನು ರದ್ದು ಮಾಡಿ ಉಪಸ್ಪೀಕರ್ ಹೊರಡಿಸಿದ್ದ ಆದೇಶವನ್ನು ಅಸಾಂವಿಧಾನಿಕ ಎಂದು ಘೋಷಿಸಿದ್ದ ಸುಪ್ರೀಂ ಆದೇಶವನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲಾಗಿದೆ.