ದೂರ ತೀರಕೆ ನಿನ್ನನು
ಹಾಡು ಕಿವಿಗೆ ಹಾಕಿಕೊಂಡಿರುವ ಇಯರ್ ಫೋನ್‌ನಲ್ಲಿ ಗುನುಗುಡುತ್ತಿತ್ತು. ಪಾಂಗ್ ಹೋಗುವ ನಯ-ನಾಜೂಕಾದ ರಸ್ತೆಯಲ್ಲಿ ಬುಲೆಟ್‌ನ ಮೀಟರ್ ಮುಳ್ಳು 100 ದಾಟಿತ್ತು. ಬೆಳಿಗ್ಗೆ ಎದ್ದು ಸ್ನಾನ ಮಾಡಿ, ಲಗೇಜ್‌ಗಳನ್ನು ಪ್ಯಾಕ್ ಮಾಡಿಕೊಂಡು 7 ಘಂಟೆಗೆ ರೆಸಿಡೆನ್ಸಿಗೆ ಅಲ್ವಿದಾ ಹೇಳಿ ಹೊರಟೆವು. ಲೇಹ್‌ನಿಂದ ಸುಮಾರು 365 ಕಿಮೀವರೆಗೂ ಪೆಟ್ರೋಲ್ ಬಂಕ್ ಇಲ್ಲದಿರುವುದರಿಂದಾಗಿ, ಮುಂಚಿತವಾಗಿಯೇ ಬುಲ್ಲೆಟ್‌ಗಳು ಫುಲ್ ಟ್ಯಾಂಕ್ ಆಗಿದ್ದವು. ಅದರೊಂದಿಗೆ ಮುಂಜಾಗ್ರತೆಯಾಗಿ ತಲಾ 10-10 ಲೀಟರ್‌ಗಳಷ್ಟು ಪೆಟ್ರೋಲ್ ನಮ್ಮಿಬ್ಬರ ಬುಲ್ಲೆಟ್ ಕರಿಯರ್‌ನಲ್ಲಿರುವ ಕ್ಯಾನ್‌ಗಳಲ್ಲಿ ತುಂಬಿಸಿ ಇಟ್ಟುಕೊಂಡಿದ್ದೆವು.
Advertisement
ರಸ್ತೆಗಳು ದಿನಕ್ಕೊಂದು ಹೊಸ ಅನುಭವ ಕೊಡುವಂತೆ ಬೇರೆ ಬೇರೆಯಾಗಿದ್ದವು. ಲೇಹ್‌ನಿಂದ ಪಾಂಗ್‌ವರೆಗೂ ರಸ್ತೆ ಚೆನ್ನಾಗಿದೆ. ಅಲ್ಲಿಂದ ಮುಂದೆ ಅಷ್ಟಕ್ಕಷ್ಟೇ ಎಂದು ಕೇಳಿ ತಿಳಿದಿದ್ದೆವು. ರಾಷ್ಟ್ರೀಯ ಹೆದ್ದಾರಿ 1 ಎಂದಾಗ ಮೊದಲು ಬಾರ್ಡರ್ ರೋಡ್ ಆರ್ಗನೈಸೇಶನ್ ಬಗ್ಗೆ ಹೇಳಬೇಕು. ಗುಡ್ಡಗಳನ್ನು ಕೊರೆದು ನಿರ್ಮಿಸಿದ ಸುಸಜ್ಜಿತ ರಸ್ತೆಗಳಲ್ಲಿ ಪ್ರತಿಯೊಬ್ಬ ಪಯಣಿಗನಿಗೂ ಮನದಲ್ಲಿ ಅಚ್ಚಾಗುವ ಆ ಹೆಸರು ಬೀ.ಆರ್.ಒ.
– ನನ್ನ ತಿರುವುಗಳನ್ನು ಅನುಭವಿಸು. ಪರೀಕ್ಷಿಸಬೇಡ.
– ವಿಸ್ಕಿಯ ನಂತರ ಡ್ರೆ„ವಿಂಗ್ ರಿಸ್ಕಿ.
– ಗಾಸಿಪ್ ಮಾಡಬೇಡ… ಅವನು ಡ್ರೆ„ವ್ ಮಾಡಲಿ.
– ಡಾರ್ಲಿಂಗ್ ಐ ಲವ್ ಯೂ.. ಆದರೆ ಇಷ್ಟು ವೇಗವಲ್ಲ.
– ನನ್ನ ತಿರುವುಗಳಲ್ಲಿ ಮೃದುವಾಗಿರು.
– ನೀನು ಮದುವೆಯಾಗಿದ್ದರೆ, ವೇಗಕ್ಕೆ ವಿಚ್ಛೇದನ ಕೊಡು.
– ಗೇರ್ ಕಡಿಮೆ ಮಾಡು, ತಿರುವು ಹತ್ತಿರವಿದೆ.
– ನರಕದಂತೆ ವಾಹನ ಚಲಾಯಿಸಿದರೆ ನೀನು ಅಲ್ಲಿ ತಲುಪುವೆ.
– ಬೀ ಮಿಸ್ಟರ್ ಲೇಟ್ ದ್ಯಾನ್ ಲೇಟ್ ಮಿಸ್ಟರ್.
– ಉ..ಹಾ..ಔಚ್..ಗಳಿಗೆ ಕ್ಷಮೆಯಿರಲಿ. ಸಮಸ್ಯೆಗಾಗಿ ವಿಷಾದಿಸುತ್ತೇವೆ.
ಹೀಗೆ ಬೋರ್ಡ್‌ಗಳನ್ನು ಓದುತ್ತಲೇ ಪಾಂಗ್ ತಲುಪಿದ್ದು ಗೊತ್ತಾಗಲಿಲ್ಲ. ಗುಡ್ಡಗಳ ಆಚೆ ಬಾಗಿರುವ ಹಿಮಶಿಖರ. ಮನಾಲಿ ಕಡೆಯಿಂದ ಲೇಹ್ ಕಡೆಗೆ ಬರುತ್ತಿರುವ ನೂರಾರು ಬೈಕರ್‌ಗಳ ಗುಂಪುಗಳು. ಎಲ್ಲೋ ಮಳೆ ಬರುವ ಸೂಚನೆ ದೂರದಲ್ಲಿ. ಹಾವಿನಂತೆ ಸುತ್ತಿರುವ ರಸ್ತೆಗಳ ಹೇರ್ ಪಿನ್ ಕರ್ವ್‌ಗಳನ್ನು ದಾಟಿಕೊಂಡು ಬಂದು ಮೇಲೆ ನಿಂತು, ಕೆಳಗಿನ ರಸ್ತೆಯ ಚಿತ್ತಾರವನ್ನು ವೀಕ್ಷಿಸಿದಾಗ ಸಿಗುವ ಮಜವೇ ಬೇರೆ. ಇದೇ.. ಬೈಕರ್‌ಗಳ ಸ್ವರ್ಗ… ದೀರ್ಘ ಧ್ಯಾನ… ಮ್ಯಾಗಿ ಮ್ಯಾಟರ್ ಮತ್ತು ಪಸಂಗ್
ಕೆಲವು ಕ್ಷಣಗಳ ಆಫ್ ರೋಡಿಂಗ್ ನಂತರ ಡೇಬರಿಂಗ್ ಎಂಬ ಸ್ಥಳ ತಲುಪಿದೆವು. ಮನೆಯಂತಹ ಆ ಚಿಕ್ಕ ಹೋಟೆಲ್‌ನಲ್ಲಿ ಬ್ರೆಡ್ ಆಮ್ಲೆಟ್ ಹಾಗೂ ಮ್ಯಾಗಿ ಆರ್ಡರ್ ಮಾಡಿದೆವು. ಅಡಿಗೆ ಮಾಡುವ ಮಹಿಳೆ ಉಪ್ಪುಹೇಗಿರಬೇಕು? ಖಾರ ಹೇಗಿರಬೇಕು? ತರಕಾರಿಗಳು ಎಷ್ಟಿರಬೇಕು? ಎಂದೆಲ್ಲ ವಿವರವಾಗಿ ಕೇಳಿಕೊಂಡು ಹೋಗಿ ಒಂದು ಸ್ವಾದಿಷ್ಟ ಮ್ಯಾಗಿ ತಂದು ನಮ್ಮ ಮುಂದಿಟ್ಟಳು.
Related Articles
Advertisement
ಪರಸ್ಪರ ಮೊಬೈಲ್ ನಂಬರ್ ಚೇಂಜ್ ಮಾಡಿಕೊಂಡು ಅವರೊಂದಿಗೆ ಸೆಲ್ಫಿ ತೆಗೆಸಿಕೊಂಡು ಅಲ್ಲಿಂದ ಹೊರಟೆವು. ಆದಷ್ಟು ಬೇಗ ಮನಾಲಿ ತಲುಪಬೇಕು ಎಂದುಕೊಂಡು ಹೊರಟರೆ, ರಸ್ತೆ ಅಷ್ಟು ಚೆನ್ನಾಗಿರಲಿಲ್ಲ. ಮುಂಚೆ ಇದ್ದ ಪ್ಲಾನ್ ಪ್ರಕಾರವಾಗಿ ನಾವು ಸರ್ಚುವಿನಲ್ಲಿ ಒಂದು ದಿನ ಉಳಿದುಕೊಂಡು ಮರುದಿನ ಮನಾಲಿ ತಲುಪಬೇಕಿತ್ತು. ಕೆಲವೊಮ್ಮೆ ಸಂಜೆಯ ಹೊತ್ತು ತಾಪಮಾನ ತೀರಾ ಕಡಿಮೆಗೆ ಹೋಗುತ್ತದೆ ಎಂದು, ಅಲ್ಲಿ ತಂಗುವುದು ಸೂಕ್ತವಲ್ಲ ಎಂದು ನಮ್ಮ ಹಳೆಯ ಹೋಟೆಲ್‌ನಲ್ಲಿ ಸಿಕ್ಕ ಗೆಳೆಯರೊಬ್ಬರು ಹೇಳಿರುವುದರಿಂದ ನೇರವಾಗಿ ಮನಾಲಿಗೆ ಹೋಗುವುದು ಒಳ್ಳೆಯದೆಂದು ನಿರ್ಧರಿಸಿದ್ದೆವು.
ಅನಿರೀಕ್ಷಿತವಾಗಿ ಸಿಕ್ಕ ಹಿಮಹಾದಿಮನಾಲಿ ಇನ್ನೂ 150 ಕಿಮೀ ದೂರವಿತ್ತು. ನಮ್ಮ ದೈನಂದಿನ ಎಣಿಕೆಯ ಪ್ರಕಾರ ಅಬ್ಬಬ್ಟಾ ಎಂದರೆ 3 ರಿಂದ 4 ಘಂಟೆ. ಆದರೆ ಅಂದುಕೊಂಡಂತೆ ಯಾವುದೂ ಆಗಲಿಲ್ಲ. ಸಂಜೆ ಆಗುತ್ತಿದ್ದಂತೆ ಸೂರ್ಯ ಕೆಂಪಾದಂತೆ, ಬೆಳಿಗ್ಗೆಯಿಂದ ಬಿಸಿಲಿನ ಬೇಗೆಗೆ ಕಾದು, ಹಿಮಗಳು ನೀರಾಗಿ ರಸ್ತೆಯಲ್ಲೆಲ್ಲಾ ಹರಿಯುತ್ತಿದ್ದವು. ಅಲ್ಲಲ್ಲಿ ಸಿಗುವ ಚಿಕ್ಕ ತೊರೆಗಳನ್ನು ದಾಟಿ ಹೋಗುವುದೇ ದೊಡ್ಡ ಸಮಸ್ಯೆಯಾಗಿತ್ತು. ನಮಗೆ ಇದರ ಬಗ್ಗೆ ಅರಿವು ಇರಲಿಲ್ಲ. ಯಾರೂ ಕೂಡ ಹೇಳಿರಲಿಲ್ಲ. ಯಾವುದೇ ಬ್ಲಾಗ್‌ಗಳಲ್ಲಿ ಓದಿರಲಿಲ್ಲ. ಅಲ್ಲಿಗೆ ಹಿಮಾಚಲದ ಗಡಿ ದಾಟಿದ್ದೆವು. ಲಡಾಖೀನ ಮಣ್ಣಿನ ಗುಡ್ಡ ಹಾಗೂ ಹಿಮಗಡ್ಡೆ ಯ ಅಲಂಕಾರ ಹಿಮಾಚಲದಲ್ಲಿ ಹಸಿರು ಹೊದ್ದಿತ್ತು. ಹಿಮಾಚಲದ ಗಡಿಯಿಂದ ಶುರುವಾದ ಹಸಿರು-ಮಣ್ಣು – ಹಿಮದ ರಾಶಿಗಳು, ಹಿಮಾಚಲ ಪ್ರದೇಶವನ್ನು ವಿಭಿನ್ನವಾಗಿ ತೋರಿಸಿದವು. ಒಂದು ಕಡೆಯಂತೂ ನನ್ನ ಬುಲೆಟ್‌ನ ಟೈಯರ್ ನೀರಿನ ಮಧ್ಯದಲ್ಲಿ ಯಾವುದೋ ಕಲ್ಲಿಗೆ ಸಿಕ್ಕಿ ಹಾಕಿಕೊಂಡಿದ್ದರಿಂದ ಇಳಿದು ಅದನ್ನು ಗೇರ್‌ನಲ್ಲಿ ನಡೆಸಿಕೊಂಡು ದಾಟಿಸಿದಾಗ ಸುಸ್ತಾಗಿತ್ತು. ಶೂಸ್, ಸಾಕ್ಸ್ ಎಲ್ಲಾ ಒದ್ದೆಯಾಗಿ ಸ್ವಲ್ಪ$ಸಮಯ ವ್ಯರ್ಥವಾಯಿತು. ಕೊನೆಗೂ 105ಕಿಮೀ ದೂರವಿರುವ ಕೇಯ್ಲೊಂಗ್ ತಲುಪಲು ನಮಗೆ 4 ಘಂಟೆ ಬೇಕಾಯಿತು. ಸ್ಪಿತಿಯಲ್ಲಿ ಬ್ರಿಡ್ಜ್ ದಾಟಿದ ಮೇಲೆ ಚಹಾ ಕುಡಿಯಲು ನಿಲ್ಲಿಸಿದೆವು. ಧಾಬಾಗಳಂತೆ ಇರುವ ಎಲ್ಲಾ ಹೋಟೆಲ್‌ಗಳಲ್ಲೂ ಉಳಿಯುವ ವ್ಯವಸ್ಥೆ ಇತ್ತು. ತಲಾ 100 ರೂ.ನಂತೆ ಚಾರ್ಜ್ ಮಾಡುತ್ತಿದ್ದರು. ಪಾರ್ಕಿಂಗ್ ವ್ಯವಸ್ಥೆ ಸರಿಯಾಗಿ ಇಲ್ಲದಿದ್ದ ಕಾರಣ ಹಾಗೂ ಲಗೇಜ್ ತುಂಬಾ ಇರುವುದರಿಂದ ಕೇಯ್ಲೊಂಗ್ ನಗರದ ಒಳಗೆ ಹೋಗಿ ಯಾವುದಾದರೂ ಹೋಟೆಲ್‌ಗಳನ್ನು ಹುಡುಕೋಣ ಎಂದು ನಿರ್ಧರಿಸಿದೆವು. ಮುಖ್ಯ ರಸ್ತೆಯಿಂದ ಒಳಗಡೆ ಹೊರಟು, ಕೇಯ್ಲೊಂಗ್ ಶಹರದಲ್ಲಿ ಹೋಗಿ ನೋಡಿದರೆ ಅದಿಂದು ಪುಟ್ಟ ಗುಡ್ಡಗಾಡು ಪ್ರದೇಶ. ಇರುವ ಎರಡು ಹೋಟೆಲ್‌ಗಳು ಫುಲ್ ಆಗಿದ್ದವು. ಮೊಬೈಲ್ ನೆಟ್‌ವರ್ಕ್ ಕೂಡ ಸಿಗುತ್ತಿರಲಿಲ್ಲ. (ಮುಂದುವರೆಯುವುದು) – ವಿಶ್ವಜಿತ್ ನಾಯಕ್