ನನ್ನ ಲಗೇಜುಗಳನ್ನೆಲ್ಲ ತುಂಬಿಕೊಂಡಿದ್ದ ಬಸ್ಸು ಹೋಗಿಬಿಟ್ಟಿತ್ತು. ಮುಂದೇನು ಮಾಡಬೇಕೆಂದು ತಿಳಿಯದೆ ನಾನು ಅಸಹಾಯಕನಾಗಿ ನಿಂತಿದ್ದೆ. ಆಗಲೇ ಬೈಕ್ ಏರಿ ರೊಯ್ಯನೆ ಬಂದ ಆ ಯುವಕ ಬೈಕ್ ಹತ್ಕೊಳ್ಳಿ ಅಂದ!
1982ರ ಮಾತಿದು. ಉಡುಪಿಯಲ್ಲಿ ನನ್ನ ಗೆಳೆಯನ ಮದುವೆ ಇತ್ತು. ಅವತ್ತು ಭಾನುವಾರವಾಗಿದ್ದರಿಂದ ನನ್ನ ಹೋಟೆಲ್‌ಗೆ ರಜೆ. ರಜೆ ಅಂದಮೇಲೆ ಮಜವಾಗಿರುವುದೇ ಅವತ್ತಿನ ಅಜೆಂಡಾ ಆಗಿರುತ್ತಿತ್ತು. ಮದುವೆಗೆ ಹೋಗಿ ಎಲ್ಲ ಗೆಳೆಯರನ್ನೂ ಭೇಟಿ ಮಾಡೋಣ ಎಂದುಕೊಂಡು, ಬೆಳಗ್ಗೆ 5ಕ್ಕೆ ಹೊರಟು 11ಕ್ಕೆ ಉಡುಪಿ ತಲುಪಿದೆ.
ಮದುವೆ ಮುಗಿದು ಗೆಳೆಯನ ಸ್ವಾತಂತ್ರಹರಣವಾಯಿತು ಎಂದು ವರನನ್ನು ರೇಗಿಸುವಿಕೆ, ಗೆಳೆಯರೊಂದಿಗೆ ಕಾಡು ಹರಟೆ, ಹೊಟ್ಟೆ ಬಿರಿಯ ಊಟ, ಅತ್ತಿಂದಿತ್ತ ಓಡಾಡುತ್ತಿದ್ದ ಹರಿಣಗಳಂಥ ಬೆಡಗಿಯರೆಡೆಗೆ ವಾರೆನೋಟ… ಎಲ್ಲಾ ಮುಗಿಸಿ ಬಸ್ ನಿಲ್ದಾಣಕ್ಕೆ ಬಂದಾಗ ಸಂಜೆ 5 ಗಂಟೆ. ಆಗುಂಬೆ ಮೂಲಕ ಶಿವಮೊಗ್ಗಕ್ಕೆ ಹೋಗುವ ಕೊನೆಯ ಮಿನಿಬಸ್ ನಿಂತಿತ್ತು. ಸೀಟಿನ ಮೇಲೆ ಅಕ್ಕ-ಪಕ್ಕ, ಬಾನೆಟ್ ಮೇಲೆ ಹೀಗೆ ಎಲ್ಲೆಡೆ ಭರ್ತಿ ಜನ.
ಆ ಕುರಿ ಮಂದೆಯಲ್ಲಿ ನಾನೂ ತೂರಿಕೊಂಡು ಒಂದೂವರೆ ಕಾಲಿನ ಮೇಲೆ ಕಂಬಿಗೆ ಜೋತುಬಿದ್ದೆ. ಬಸ್ ಹೊರಟಿತು, ಮಧ್ಯೆ ಸೋಮೇಶ್ವರದಲ್ಲಿ 10 ನಿಮಿಷಗಳ ಕಾಫಿ ಬ್ರೇಕ್. “ಚಾ ಕುಡೂಕೆ 10 ನಿಮಿಷ ಟೈಮ್ ಇತ್ ಕಾಣಿ’ ಎಂದು ಏರುಸ್ಥಾಯಿಯಲ್ಲಿ ಕೂಗಿದ ಕಂಡಕ್ಟರ್ ಪಕ್ಕದ ಪೊದೆಯ ಮರೆಗೆ ಓಡಿದ. ಎಲ್ಲರೊಂದಿಗೆ ನಾನೂ ಇಳಿದೆ. ಮೂತ್ರ ವಿಸರ್ಜಿಸಿ, ಹೋಟೆಲಿನ ಒಳ ಹೋದೆ.
ಕಾಫಿ ಕುಡಿದು ಹೊರಬಂದು ನೋಡುತ್ತೇನೆ: ಮಿನಿಬಸ್ ಆಗಲೇ ಅರ್ಧ ಕಿ.ಮೀ ದೂರದಲ್ಲಿ ಹೋಗುತ್ತಿದೆ! ಎದೆ ಧಸಕ್ಕೆಂದಿತು. ತಂದಿದ್ದ ಬ್ರಿàಫ್ಕೇಸನ್ನು ಬಸ್ ಸೀಟ್‌ನ ಪಕ್ಕದ ಕ್ಯಾರಿಯರ್‌ನಲ್ಲಿಟ್ಟಿದ್ದೆ. ಅದರಲ್ಲಿ ಮರುದಿನ ಬೆಳಗ್ಗೆ 6 ಗಂಟೆಗೆ ಆರಂಭಿಸಲೇಬೇಕಾದ ಹೋಟೆಲಿನ ಎಲ್ಲಾ ಬೀಗದ ಕೀಗಳ ಗೊಂಚಲು ಬೇರೆ ಇದೆ. ಏನಪ್ಪಾ ಮಾಡುವುದು? ದಿಕ್ಕೇ ತೋಚುತ್ತಿಲ್ಲ. ಮುಂದಿನ ಬಸ್‌ಗೆ ಕಾಯೋಣವೆಂದರೆ ಇದೇ ಕೊನೆಯ ಬಸ್.
ಮುಂದಿನ ಬಸ್ ನಾಳೆ ಬೆಳಗ್ಗೆ 7ಕ್ಕೆ ಅಂದರು. ಅಯ್ಯೋ, ಉಡುಪಿ ಕೃಷ್ಣ , ಇದೊಳ್ಳೆ ಸಂಕಷ್ಟಕ್ಕೆ ಬಂತಲ್ಲ. ಮುಂದೇನು ಗತಿ ಎಂದು ಕೈ ಕೈ ಹಿಸುಕಿಕೊಂಡೆ. ಅಷ್ಟರಲ್ಲಿ, ನನ್ನನ್ನೇ ಗಮನಿಸುತ್ತಿದ್ದ ಪಕ್ಕದ ಬೀಡಾ ಅಂಗಡಿಯ ಮುಂದೆ ನಿಂತಿದ್ದ ಕಟ್ಟುಮಸ್ತಾದ ಯುವಕನೊಬ್ಬ ತನ್ನ ಬುಲೆಟ್ ಏರಿ ಬಳಿ ಬಂದು “ಬಸ್ ತಪ್ಪಿತಾ? ಚಿಂತೆ ಮಾಡಬೇಡಿ. ಬೇಗ ಬೈಕ್ ಹತ್ತಿ, ಕೂರಿ’ ಎಂದವನೇ ನನ್ನನ್ನು ಕೂರಿಸಿಕೊಂಡು ಶರವೇಗದ ಸರದಾರನಂತೆ ಬಸ್ಸನ್ನು ಹಿಂಬಾಲಿಸಿದ.
ಅಂತೂ ನಾಲ್ಕನೇ ತಿರುವಿನಲ್ಲಿ ಬಸ್ಸಿನ ಮುಂದೆ ಹೋಗಿ ಕೈ ಮಾಡಿ ನಿಲ್ಲಿಸಿದ ಅವನಿಗೆ ಥ್ಯಾಂಕ್ಸ್ ಹೇಳಿ ಬಸ್ ಹತ್ತಿದೆ. “10 ನಿಮಿಷ ಮಾತ್ರ ನಿಲ್ಲೋದು ಅಂತ ಹೇಳಿರಲಿಲ್ಲವೇನ್ರೀ? ಯಾಕೆ ನಮ್ಮ ಜೀವ ತಿಂತೀರಾ?’ ಎಂದು ಕಂಡಕ್ಟರ್ ಕುಂಕುಮಾರ್ಚನೆ ಮಾಡಿದ. ನನ್ನ ಮನಸ್ಸು ಮಾತ್ರ ಆ ಅಪವೇಳೆಯಲ್ಲಿಯೂ ನನಗೆ ಸಹಾಯ ಮಾಡಿದ ಆ ಮನುಷ್ಯನ ಕುರಿತೇ ಯೋಚಿಸುತ್ತಿತ್ತು.
* ಕೆ.ಶ್ರೀನಿವಾಸರಾವ್