ಬೆಂಗಳೂರು: ರಸ್ತೆಯಲ್ಲಿ ಬೈಕ್ ವ್ಹೀಲಿಂಗ್ ಮಾಡಿ ಜನರಿಗೆ ತೊಂದರೆ ಕೊಡುತ್ತಿದ್ದ ಸವಾರರ ವಿರುದ್ಧ ಕಾಮಾಕ್ಷಿಪಾಳ್ಯ ಸಂಚಾರ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ 6 ಮಂದಿಯನ್ನು ಬಂಧಿಸಿದ್ದಾರೆ.
ನಾಗರಬಾವಿ ಹೊರ ವರ್ತುಲ ರಸ್ತೆ ಗಳಲ್ಲಿ ವ್ಹೀಲಿಂಗ್ ಮತ್ತು ಕರ್ಕಶ ಶಬ್ದ ಮಾಡುತ್ತಾ ಸುಮನಹಳ್ಳಿ ಮೇಲು ಸೇತುವೆ ಮೇಲೆ ಸಾರ್ವಜನಿಕರಿಗೆ ತೊಂದರೆ ಕೊಡುತ್ತಿದ್ದರು. ಪ್ರತಿನಿತ್ಯ ತಡರಾತ್ರಿ 11 ರಿಂದ ತಡರಾತ್ರಿ 2 ಗಂಟೆ ಅವಧಿಯಲೇಲೇ ವ್ಹೀಲಿಂಗ್ ಮಾಡುತ್ತಿದ್ದರು. ಅದರಿಂದ ಇತರ ವಾಹನ ಚಾಲಕ, ಅಕ್ಕಪಕ್ಕದವರಿಗೆ ತೊಂದರೆ ಉಂಟಾಗುತ್ತಿತ್ತು. ಈ ಕುರಿತು ಸಾಕಷ್ಟು ದೂರುಗಳು ಬಂದಿದ್ದವು. ಈ ಹಿನ್ನೆಲೆಯಲ್ಲಿ ವಿಜಯನಗರ ಸಂಚಾರ ಉಪ ವಿಭಾಗ ಎಸಿಪಿ ಜಿ.ಆರ್. ರಮೇಶ್, ಕಾಮಾಕ್ಷಿಪಾಳ್ಯ ಸಂಚಾರ ಠಾಣೆ ಇನ್ ಸ್ಪೆಕ್ಟರ್ ಎಸ್.ಟಿ. ಯೋಗೇಶ್ ನೇತೃತ್ವದ ತಂಡ ಮಂಗಳವಾರ ವಿಶೇಷ ಕಾರ್ಯಾಚರಣೆ ನಡೆಸಿ 10 ಪ್ರಕರಣಗಳಲ್ಲಿ 15 ಮಂದಿ ಯನ್ನು ಬಂಧಿಸಿದೆ.
ಆರೋಪಿಗಳ ಮಾಹಿತಿ ಮೇರೆಗೆ ಇತರೆ ವ್ಹೀಲಿಂಗ್ ಮಾಡುವವರ ಬಂಧನಕ್ಕೆ ಶೋಧ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು.
ವ್ಹೀಲಿಂಗ್ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುವರ ಮೇಲೆ ನಿಗಾ ವಹಿಸಲಾಗಿತ್ತು. ಜತೆಗೆ ಸ್ಥಳೀಯರು ಸಹ ಬೈಕ್‌ಗಳ ನಂಬರ್ ಕೊಡುತ್ತಿದ್ದಾರೆ. ಅವುಗಳ ಆಧಾರದ ಮೇಲೆ ಸಂಚಾರ ಪೊಲೀಸರು ಮಫ್ತಿಯಲ್ಲಿ ಎಲ್ಲೆಡೆ ಕಾರ್ಯಾಚರಣೆ ನಡೆಸುತ್ತಿದ್ದಾರೆ. ವ್ಹೀಲಿಂಗ್ ಮಾಡುವ ಸವಾರರ ಜತೆಗೆ ವಿಡಿಯೋ ಮಾಡುವರು, ಸ್ಕೂಟರ್ ಮಾರ್ಪಾಡಿಸಿ ಕೊಡುವ ಗ್ಯಾರೇಜ್ ಮೆಕಾನಿಕ್, ವಾಹನ ಮಾಲೀಕರು, ಪಾಲಕರು ಸೇರಿ ಸಂಬಂಧಪಟ್ಟ ಎಲ್ಲರನ್ನು ಬಂಧಿಸಲಾಗುತ್ತದೆ ಎಂದು ಪೊಲೀಸರು ಹೇಳಿದರು.
ದಂಡ ವಿಧಿಸಿದ ಪೊಲೀಸರು: 10 ಪ್ರಕರಣಗಳ ಪೈಕಿ 2 ಪ್ರಕರಣಗಳಲ್ಲಿ ತಲಾ 25 ಸಾವಿರ ರೂ. ದಂಡ ವಿಧಿಸಲಾಗಿದೆ. ವ್ಹೀಲಿಂಗ್ ಮಾಡಿದ ಯುವಕ ಪೋಷಕರ ಮೇಲೆ ದಂಡ ವಿಧಿಸಲಾಗಿದೆ ಎಂದು ಸಂಚಾರ ಪೊಲೀಸರು ಹೇಳಿದರು.