ಬೆಂಗಳೂರು: ಹೊರವರ್ತುಲ ರಸ್ತೆಗಳು ಹಾಗೂ ಜನಜಂಗುಳಿ ಪ್ರದೇಶಗಳಲ್ಲಿ ಬೈಕ್ ವೀಲ್ಹಿಂಗ್ ಮಾಡಿ ಸಾರ್ವಜನಿಕರಿಗೆ ತೊಂದರೆ ಕೊಡುತ್ತಿದ್ದ ಒಂಬತ್ತು ಮಂದಿಯನ್ನು ಬಾಣಸವಾಡಿ ಪೊಲೀಸರು ಬಂಧಿಸಿ, ಇದೇ ವೇಳೆ ಚಾಲನಾ ಪರವಾನಿಗೆ ಇಲ್ಲದೇ ವಾಹನ ನೀಡಿದ ಆರೋಪದ ಮೇಲೆ ಬೈಕ್ ಮಾಲೀಕರ ವಿರುದ್ಧವೂ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಹೀತೇಂದ್ರ ಮಾತನಾಡಿ, ಬಾಲಕರು ವೀಲ್ಹಿಂಗ್ ಮಾಡಲು ಬಳಸುತ್ತಿದ್ದ 9 ಬೈಕ್ ಹಾಗೂ 17 ಸೈಲೆನ್ಸರ್ ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಇತ್ತೀಚೆಗೆ ಬಾಣಸವಾಡಿ, ಇಂದಿರಾನಗರ, ದೊಮ್ಮಲೂರು ಸೇರಿದಂತೆ ನಗರದ ಪೂರ್ವ ವಿಭಾಗದ ಹೊರ ವರ್ತುಲ ರಸ್ತೆಗಳಲ್ಲಿ ಮುಂಜಾನೆ ಹಾಗೂ ರಾತ್ರಿ ವೇಳೆಯಲ್ಲಿ ಕೆಲ ಯುವಕರ ಗುಂಪೊಂದು ಬೈಕ್ ವೀಲ್ಹಿಂಗ್ ಮಾಡುವುದನ್ನು ರೂಡಿಸಿಕೊಂಡಿತ್ತು. ಈ ಬಗ್ಗೆ ಹಲವು ದೂರುಗಳು ಬಂದಿದ್ದರಿಂದ ವ್ಹೀಲಿಂಗ್ ಮಾಡುವವರ ಪತ್ತೆಗೆ ವಿಶೇಷ ಕಾರ್ಯಾಚರಣೆ ನಡೆಸಲಾಯಿತು ಎಂದರು.
ಸೆ.28ರಂದು ಕಲ್ಯಾಣನಗರ ಹೊರ ವರ್ತುಲ ರಸ್ತೆಯಲ್ಲಿ ಯುವಕರ ಗುಂಪೊಂದು ಬೈಕ್ ವೀಲ್ಹಿಂಗ್ ಮಾಡುತ್ತಿರುವ ಬಗ್ಗೆ ಮಾಹಿತಿ ಬಂದಿದ್ದು, ಕೂಡಲೇ ಕಾರ್ಯಾಚರಣೆ ನಡೆಸಿದ ತಂಡ ಇಬ್ಬರನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದರು. ನಂತರ ಇವರ ಹೇಳಿಕೆಯನ್ನಾಧರಿಸಿ ಇತರೆ ಯುವಕರನ್ನು ಬಂಧಿಸಲಾಯಿತು.
ಬಂಧಿತರು ವೀಲ್ಹಿಂಗ್ ಮಾಡುವ ಸಲುವಾಗಿಯೇ ತಮ್ಮ ಬೈಕ್‌ಗಳ ಸೈಲೆನ್ಸರ್‌ಗಳನ್ನು ಮಾರ್ಪಾಡು ಮಾಡಿಸಿಕೊಂಡಿದ್ದಾರೆ. ಅಲ್ಲದೇ ಚಾಲನಾ ಪರವಾನಿಗೆ ಕೂಡ ಇಲ್ಲ. ಈ ಆರೋಪಗಳ ಮೇಲೆ ಬಂಧಿಸಿರುವ ಕಾನೂನು ಸಂಘರ್ಷಕ್ಕೊಳಗಾದ ಯುವಕರನ್ನು ಬಾಲ ಪೊಲೀಸ್ ಘಟಕಕ್ಕೆ ಕಳುಹಿಸಲಾಗಿದೆ ಎಂದು ವಿವರಿಸಿದರು.
ಕರ್ಕಶ ಶಬ್ದ ಉಂಟು ಮಾಡುವ ರೀತಿಯಲ್ಲಿ ನಿಯಮ ಉಲ್ಲಂಘಿಸಿ ವಾಹನ ಸಂಚಾರ ನಡೆಸುತ್ತಿರುವವರ ಬಗ್ಗೆ ವಿಶೇಷ ಕಾರ್ಯಾಚರಣೆ ನಡೆಸುತ್ತಿದ್ದು, ಕಳೆದೊಂದು ವಾರದಲ್ಲಿ 600 ರಿಂದ 700 ವಾಹನಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಆಟೋ ಬೈಕ್, ಕಾರು ಸೇರಿದಂತೆ ಎಲ್ಲಾ ರೀತಿಯ ವಾಹನಗಳು ನಿಯಮದಂತೆ ಹಾರ್ನ್ ಮಾಡಬೇಕು. ಒಂದು ವೇಳೆ ನಿಯಮ ಪಾಲಿಸದಿದ್ದರೆ ಅಂತಹ ವಾಹನ ಸವಾರರ ಮೇಲೆ ದಂಡ ಹಾಕಲಾಗುವುದು ಎಂದು ಎಚ್ಚರಿಕೆ ನೀಡಿದರು.