ಬೆಂಗಳೂರು: ಮಾದಕ ವಸ್ತು ಖರೀದಿಸಲು ದ್ವಿಚಕ್ರ ವಾಹನ ಹಾಗೂ ಮೊಬೈಲ್ ಕಳ್ಳತನಕ್ಕಿಳಿದ ಪಾಗಲ್ ಪ್ರೇಮಿಗಳು ಮಲ್ಲೇಶ್ವರ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಶ್ರೀರಾಮಪುರದ ನಿವಾಸಿ ಮುರುಗನ್ (25), ಥಣಿಸಂದ್ರದ ಯಾಸ್ಮಿನ್ (18) ಬಂಧಿತರು.
1 ಲಕ್ಷ ರೂ. ಮೌಲ್ಯದ ಮೊಬೈಲ್, ದ್ವಿಚಕ್ರವಾಹನ ಜಪ್ತಿ ಮಾಡಿದ್ದಾರೆ. ಮುರುಗನ್ 2021ರಲ್ಲಿ ದ್ವಿಚಕ್ರವಾಹನ ಕಳ್ಳತನ ಪ್ರಕರಣದಲ್ಲಿ ಜೈಲಿಗೆ ಹೋಗಿ ಜಾಮೀನಿನ ಮೇಲೆ ಹೊರ ಬಂದಿದ್ದ. 2022ರಲ್ಲಿ ಉಪ್ಪಾರ ಪೇಟೆ ಪೊಲೀಸರಿಗೆ ಮತ್ತೆ ಸಿಕ್ಕಿ ಬಿದ್ದಿದ್ದ. ಇದಾದ ಬಳಿಕ ಜೀವನ ನಿರ್ವಹಣೆಗೆ ದ್ವಿಚಕ್ರವಾಹನ ಕಳ್ಳತನದ ಹಾದಿ ಹಿಡಿದಿದ್ದ. ಯಾಸ್ಮಿನ್ ಸಹ ಕೆಲ ವರ್ಷಗಳಿಂದ ಒಂಟಿಯಾಗಿ ಹೋಗಿ ರಸ್ತೆ ಬದಿ ನಿಲುಗಡೆ ಮಾಡಿದ್ದ ದ್ವಿಚಕ್ರವಾಹನ ಕಳ್ಳತನ ಮಾಡುತ್ತಿದ್ದಳು. ಕೆಲ ತಿಂಗಳ ಹಿಂದೆ ಯಾಸ್ಮಿನ್‌ಗೆ ಸಹೋದರ ಸಂಬಂಧಿ ಮೂಲಕ ಮುರುಗನ್ ಪರಿಚಯವಾಗಿತ್ತು. ಇಬ್ಬರೂ ದ್ವಿಚಕ್ರವಾಹನ ಕಳ್ಳತನ ನಡೆಸುತ್ತಿದ್ದ ಹಿನ್ನೆಲೆಯಲ್ಲಿ ಜೊತೆಯಾಗಿ ದ್ವಿಚಕ್ರವಾಹನ ಕಳ್ಳತನ, ಮೊಬೈಲ್ ಕಳ್ಳತನಕ್ಕಿಳಿ ದಿದ್ದರು. ಕ್ರಮೇಣ ಇಬ್ಬರೂ ಪ್ರೀತಿಸಲು ಆರಂಭಿಸಿದ್ದರು.
ಕದ್ದ ಸ್ಕೂಟರ್‌ಗಳು 10-15 ಸಾವಿರಕ್ಕೆ ಬಿಕರಿ: ಇಬ್ಬರು ಆರೋಪಿ ಗಳು ಎಂಡಿಎಂಎ, ಗಾಂಜಾ ದಂತಹ ಮಾದಕ ವಸ್ತುಗಳ ವ್ಯಸನಿ ಗಳಾಗಿದ್ದರು. ಡ್ರಗ್ಸ್ ಖರೀದಿಸಲು ದುಡ್ಡು ಖಾಲಿಯಾಗುತ್ತಿದ್ದಂತೆ ಮತ್ತೆ ಕಳ್ಳತನಕ್ಕೆ ಇಳಿಯುತ್ತಿದ್ದರು. ಕದ್ದ ದ್ವಿಚಕ್ರ ವಾಹನಗಳನ್ನು ಶಿವಾಜಿನಗರ, ಪಾದರಾಯನಪುರದಲ್ಲಿರುವ ಪರಿಚಿತ ಗ್ಯಾರೇಜ್‌ಗೆ ಕೇವಲ 10 ರಿಂದ 15 ರೂ.ಗೆ ಸಾವಿರಕ್ಕೆ ಮಾರಾಟ ಮಾಡುತ್ತಿದ್ದರು. ಇನ್ನು ಯಾಸ್ಮಿನ್ ರಾತ್ರಿ ಹೊತ್ತಿನಲ್ಲಿ ಹಲವು ನಕಲಿ ಕೀ ತೆಗೆದುಕೊಂಡು ರಸ್ತೆ ಬದಿ ನಿಲುಗಡೆ ಮಾಡಿರುವ ದ್ವಿಚಕ್ರ ವಾಹನಗಳನ್ನು ಗುರುತಿಸುತ್ತಿದ್ದಳು. ಬಳಿಕ ಯಾರೂ ಇಲ್ಲದಿರುವ ಪ್ರದೇಶಗಳಲ್ಲಿ ನಿಲುಗಡೆ ಮಾಡಿರುವ ಸ್ಕೂಟರ್ ಸ್ಟಾರ್ಟ್ ಮಾಡಿಕೊಂಡು ಕ್ಷಣ ಮಾತ್ರದಲ್ಲಿ ಕದ್ದೊಯ್ಯುವ ಚಾಣಾಕ್ಷತನ ರೂಢಿಸಿಕೊಂಡಿದ್ದಳು. ಇತ್ತ ಮುರುಗನ್ ಹ್ಯಾಂಡ್ ಲಾಕ್ ಮುರಿದು ದ್ವಿಚಕ್ರವಾನಹ ಕದ್ದೊಯ್ಯುವುದರಲ್ಲಿ ನಿಪುಣನಾಗಿದ್ದ. ಅನುಮಾನ ಬಾರದಂತೆ ಇಬ್ಬರೂ ಪ್ರತ್ಯೇಕವಾಗಿ ಕಳ್ಳತನ ನಡೆಸುತ್ತಿದ್ದರು. ಇದರ ಜೊತೆಗೆ ಒಂಟಿಯಾಗಿರುವ ಅಮಾಯಕ ವ್ಯಕ್ತಿಗಳನ್ನು ಟಾರ್ಗೆಟ್ ಮಾಡಿ ತುರ್ತು ಕರೆ ಮಾಡುವ ನೆಪದಲ್ಲಿ ಮೊಬೈಲ್ ಪಡೆದುಕೊಂಡು ಸ್ಕೂಟರ್ ಏರಿ ಪರಾರಿಯಾಗುತ್ತಿದ್ದರು.
ಖತರ್ನಾಕ್ ಜೋಡಿ ಸಿಕ್ಕಿ ಬಿದ್ದಿದ್ದು ಹೇಗೆ?: ಮಲ್ಲೇಶ್ವರ ನಿವಾಸಿ ಜಯಚಂದ್ರ ಪುತ್ರ ಕೌಶಿಕ್ ಪ್ರತಿಷ್ಠಿತ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ. ಏ.10ರಂದು ಮಧ್ಯಾಹ್ನ 2.30ಕ್ಕೆ ಕಾಲೇಜು ಮುಗಿಸಿಕೊಂಡು ಮನೆಗೆ ವಾಪಸ್ಸಾಗುತ್ತಿದ್ದಾಗ ಆರೋಪಿಗಳು ಈತನನ್ನು ಹಿಂಬಾಲಿಸಿಕೊಂಡು ಬಂದಿದ್ದರು. ಮಾರ್ಗಮಧ್ಯೆ ಮಲ್ಲೇಶ್ವರ ಹೈಪರ್ ಮಾರುಕಟ್ಟೆ ಮುಂಭಾಗ ಹಿಂಬದಿಯಿಂದ ಮೊಬೈಲ್ ಕಸಿದುಕೊಂಡು ಆರೋಪಿಗಳು ಪರಾರಿಯಾಗಿದ್ದರು. ಇತ್ತ ಕೌಶಿಕ್ ತಂದೆ ಜಯಚಂದ್ರ ಮಲ್ಲೇಶ್ವರ ಪೊಲೀಸರಿಗೆ ದೂರು ಕೊಟ್ಟಿದ್ದರು.
ಎಫ್ಐಆರ್ ದಾಖಲಿಸಿಕೊಂಡು ತನಿಖೆಗಿಳಿದ ಪೊಲೀಸರು ಕೃತ್ಯ ನಡೆದ ಆಸು-ಪಾಸಿನಲ್ಲಿದ್ದ ಸಿಸಿ ಕ್ಯಾಮೆರಾ ದೃಶ್ಯ ಪರಿಶೀಲನೆ ಸೇರಿದಂತೆ ವಿವಿಧ ತಾಂತ್ರಿಕ ಕಾರ್ಯಾಚರಣೆ ನಡೆಸಿದಾಗ ಮುರುಗನ್ ಸುಳಿವು ಸಿಕ್ಕಿತ್ತು. ಆತನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಪ್ರೇಯಸಿ ಯಾಸ್ಮಿನ್ ಬಗ್ಗೆ ಮಾಹಿತಿ ನೀಡಿದ್ದ. ಇಬ್ಬರನ್ನೂ ವಿಚಾರಣೆ ನಡೆಸಿದಾಗ ಮಾದಕ ವ್ಯಸನಕ್ಕೆ ದಾಸರಾಗಿ ಡ್ರಗ್ಸ್ ಖರೀದಿಸಲು ಹಾಗೂ ಐಷಾರಾಮಿ ಜೀವನ ನಡೆಸಲು ದ್ವಿಚಕ್ರವಾಹನ ಕಳ್ಳತನಕ್ಕೆ ಇಳಿದಿದ್ದರು. ಇದೀಗ ಪಾಗಲ್ ಪ್ರೇಮಿಗಳಿಬ್ಬರೂ ಪೊಲೀಸರ ಅತಿಥಿಯಾಗಿದ್ದಾರೆ.