ಬೆಂಗಳೂರು: ವ್ಹೀಲಿಂಗ್ ಮಾಡಲು ಯಮಹಾ ಬೈಕ್‌ಗಳನ್ನೇ ಕಳವು ಮಾಡುತ್ತಿದ್ದ ಪದವಿ ವಿದ್ಯಾರ್ಥಿ ಸೇರಿ ಇಬ್ಬರನ್ನು ಹೈಗ್ರೌಂಡ್ಸ್ ಪೊಲೀಸರು ಬಂಧಿಸಿದ್ದಾರೆ.
ದೊಮ್ಮಲೂರಿನ ಬಿಡಿಎ ಕ್ವಾಟ್ರರ್ಸ್ ನಿವಾಸಿ ರಿತೀಕ್(19) ಮತ್ತು ನೀಲಸಂದ್ರ ನಿವಾಸಿ ಪವನ್(19) ಬಂಧಿತರು.
ಮೂರು ಯಮಹಾ ಬೈಕ್, ಒಂದು ಡಿಯೋ ದ್ವಿಚಕ್ರ ವಾಹನ ವಶಕ್ಕೆ ಪಡೆಯಲಾಗಿದೆ. ಆರೋಪಿ ಗಳ ಪೈಕಿ ರಿತೀಕ್ ಗ್ಯಾರೇಜ್‌ನಲ್ಲಿ ಕೆಲಸ ಮಾಡಿಕೊಂಡಿದ್ದು, ಪವನ್ ಖಾಸಗಿ ಕಾಲೇಜಿನಲ್ಲಿ ಬಿಎಸ್ಸಿ ವ್ಯಾಸಂಗ ಮಾಡುತ್ತಿದ್ದ. ಆರೋಪಿಗಳು ಇತ್ತೀಚೆಗೆ ಠಾಣೆ ವ್ಯಾಪ್ತಿಯ ಹರೇಕೃಷ್ಣ ರಸ್ತೆಯಲ್ಲಿ ಯಮಹಾ ಬೈಕ್ ಕದ್ದು ವ್ಹೀಲಿಂಗ್ ಮಾಡುತ್ತಿದ್ದರು. ಈ ಬಗ್ಗೆ ಪ್ರಕರಣ ದಾಖಲಿಸಿ ಕೊಂಡು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.
ನಿರ್ಜನ ಪ್ರದೇಶದಲ್ಲಿ ಬಿಟ್ಟು ಪರಾರಿ: ಯಮಹಾ ಬೈಕ್ ಕಳವು ಮಾಡುತ್ತಿದ್ದ ಆರೋಪಿಗಳು, ತಿಂಗಳು ಗಟ್ಟಲೇ ವ್ಹೀಲಿಂಗ್‌ಮಾಡುತ್ತಿದ್ದರು. ಒಂದು ವೇಳೆ ಅದು ಕೆಟ್ಟು ಹೋದರೆ, ನಿರ್ಜನ ಪ್ರದೇಶ ಅಥವಾ ಯಾವುದಾದರೂ ಪ್ರದೇಶದಲ್ಲಿ ಬಿಟ್ಟು ಪರಾರಿಯಾಗುತ್ತಿದ್ದರು.
ಯಮಹಾ ಬೈಕ್ ಸಿಗದಿದ್ದರೆ ಡಿಯೋ ದ್ವಿಚಕ್ರ ವಾಹನ ಕಳವು ಮಾಡುತ್ತಿದ್ದರು ಎಂಬುದು ಗೊತ್ತಾಗಿದೆ. ಇತ್ತೀಚೆಗೆ ಕದ್ದ ಯಮಹಾ ಬೈಕ್‌ನಲ್ಲಿ ವ್ಹೀಲಿಂಗ್‌ಮಾಡಿ, ಅದರ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು. ಈ ಮಾಹಿತಿ ಮೇರೆಗೆ ಆರೋಪಿಗಳನ್ನು ಬಂಧಿಸಿದಾಗ ಬೇರೆಡೆ ಬೈಕ್‌ಗಳ ಕಳವು ಪ್ರಕರಣಗಳು ಪತ್ತೆಯಾಗಿವೆ ಎಂದು ಪೊಲೀಸರು ಹೇಳಿದರು.