ಬೆಂಗಳೂರು: ಗ್ರಾಹಕರ ಬೇಡಿಕೆಗೆ ತಕ್ಕಂತೆ ದ್ವಿಚಕ್ರ ವಾಹನಗಳನ್ನು ಕಳವು ಮಾಡಿ ಮಾರುತ್ತಿದ್ದ ಮೂವರು ಕಳ್ಳರನ್ನು ಸೋಲದೇವನಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಬಾಗಲಗುಂಟೆಯ ಕೆ.ಮಲ್ಲಿಕಾರ್ಜುನ ಅಲಿಯಾಸ್ ಮಲ್ಲಿ(31), ಕಿರಣ್ ಕುಮಾರ್ ಅಲಿಯಾಸ್ ಕಿರಣ್(27), ಅಂಜಿನಿ ಅಲಿಯಾಸ್ ಅಂಜಿನಿ(23) ಬಂಧಿತರು. ಆರೋಪಿಗಳಿಂದ 12.50 ಲಕ್ಷ ರೂ. ಮೌಲ್ಯದ ವಿವಿಧ ಕಂಪನಿಗಳ 16 ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಗಳ ಬಂಧನದಿಂದ ಸೋಲದೇವನಹಳ್ಳಿ ಠಾಣೆ 9, ಶಿರಾ, ತುಮಕೂರು ಟೌನ್, ನೆಲಮಂಗಲ ಗ್ರಾಮೀಣ, ಬಾಗಲಗುಂಟೆ ಠಾಣೆಯಲ್ಲಿ ತಲಾ ಒಂದು ಸೇರಿ ಒಟ್ಟು 13 ದ್ವಿಚಕ್ರ ವಾಹನ ಕಳ್ಳತನ ಪ್ರಕರಣ ಪತ್ತೆಯಾಗಿವೆ ಎಂದು ಪೊಲೀಸರು ಹೇಳಿದರು.
ಸೋಲದೇವನಹಳ್ಳಿ ಠಾಣಾ ವ್ಯಾಪ್ತಿಯ ಚಿಕ್ಕಸಂದ್ರ ನಿವಾಸಿ, ಗಾರೆ ಕೆಲಸ ಮಾಡುವ ಲೋಕೇಶ್ ಆ.13ರಂದು ತರಬನಹಳ್ಳಿ ಉಡುಪಿ ಹೋಟೆಲ್ ಕಟ್ಟಡದ ಸೆಲ್ಲಾರ್‌ನ ಪಾರ್ಕಿಂಗ್ ಸ್ಥಳದಲ್ಲಿ ತಮ್ಮ ಬಜಾಜ್ ಪಲ್ಸರ್ ನಿಲ್ಲಿಸಿ ಕೆಲಸಕ್ಕೆ ತೆರಳಿದ್ದರು. ಮರು ದಿನ ಬಂದು ನೋಡಿದಾಗ ವಾಹನ ಕಳ್ಳತನವಾಗಿತ್ತು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಲಾಗಿದೆ.
ಆರೋಪಿಗಳ ಪೈಕಿ ಮಲ್ಲಿಕಾರ್ಜುನ ಮತ್ತು ಅಂಜಿನಿ ಬಳ್ಳಾರಿ ಮೂಲದವರು. ಮಲ್ಲಿ 2009-10ನೇ ಸಾಲಿನಲ್ಲಿ ಸಂಡೂರಿನಲ್ಲಿ ಕಬ್ಬಿಣದ ಹ್ಯಾಂಗ್ಲರ್‌ಗಳನ್ನು ಕಳವು ಮಾಡಿ ಜೈಲು ಸೇರಿದ್ದ. ಬಳಿಕ ಜಾಮೀನು ಪಡೆದು ಹೊರಬಂದಿದು, 8 ವರ್ಷಗಳ ಹಿಂದೆ ಬೆಂಗಳೂರಿಗೆ ಬಂದು ಲಾರಿ ಚಾಲಕನಾಗಿದ್ದ. ಅಂಜಿನಿ 3 ವರ್ಷಗಳಿಂದ ಕೂಲಿ ಕಾರ್ಮಿಕ. ಹಾಸನ ಮೂಲದ ಕಿರಣ್ ಕುಮಾರ್ 9 ವರ್ಷಗಳಿಂದ ಬೆಂಗಳೂರಿನಲ್ಲಿದ್ದಾನೆ. ಕೆಲವು ವರ್ಷಗಳ ಹಿಂದೆ ಮೂವರು ಜತೆಯಾಗಿದ್ದು, ಬಾಗಲಗುಂಟೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಮೂವರು ಹಗಲಿನಲ್ಲಿ ಆಟೋ ಚಾಲನೆ ಮಾಡಿಕೊಂಡು ರಾತ್ರಿ ವೇಳೆ ದ್ವಿಚಕ್ರ ವಾಹನಗಳನ್ನು ಕಳವು ಮಾಡುತ್ತಿದ್ದರೆಂದು ಪೊಲಿಸರು ಹೇಳಿದರು.
ಗ್ರಾಹಕ ಕೇಳಿದ ಕಂಪನಿಯ ಬೈಕ್ ಕಳವು: ಆರೋಪಿಗಳು ಬಳ್ಳಾರಿ ಹಾಗೂ ಸಂಡೂರು ಕಡೆ ಗ್ರಾಹಕರ ಬೇಡಿಕೆಯ ಕಂಪನಿ ದ್ವಿಚಕ್ರ ವಾಹನಗಳನ್ನು ಬೆಂಗಳೂರಿನಲ್ಲಿ ಹುಡುಕಿ ಕಳ್ಳತನ ಮಾಡಿ ನೋಂದಣಿ ಫಲಕ ಬದಲಿಸಿ ಮಾರಾಟ ಮಾಡುತ್ತಿದ್ದರು. ಕೆಲ ದಿನಗಳಲ್ಲಿ ದ್ವಿಚಕ್ರ ವಾಹನದ ದಾಖಲೆ ತಲುಪಿಸುವುದಾಗಿ ಗ್ರಾಹಕರಿಗೆ ಹೇಳಿ ಪರಾರಿಯಾಗುತ್ತಿದ್ದರು. ಬಂದ ಹಣದಲ್ಲಿ ಮೋಜು-ಮಸ್ತಿ ಮಾಡುತ್ತಿದ್ದರೆಂದು ಪೊಲೀಸರು ಹೇಳಿದರು.