ಚಿಕ್ಕಮಗಳೂರು: ದಿ. ಮೋಟಾರ್ ನ್ಪೋರ್ಟ್ಸ್ ಕ್ಲಬ್ ಚಿಕ್ಕಮಗಳೂರು ಸಹಯೋಗದಲ್ಲಿ ವಿವಿಧ ಸಂಸ್ಥೆಗಳ ಪ್ರಾಯೋಜಕತ್ವದಲ್ಲಿ 4ನೇ ಸುತ್ತಿನ ದ್ವಿಚಕ್ರ ವಾಹನಗಳ ರಾಷ್ಟ್ರೀಯ ರ್ಯಾಲಿ ಚಾಂಪಿಯನ್‌ಶಿಪ್ 2ಡಬ್ಲ್ಯೂಎಂಆರ್‌ಎಫ್ ಮೋಗ್ರೀಪ್ ಸ್ಟೆಕ್ಟೇಟರ್ ಸ್ಪೆಶಲ್ ಸ್ಟೇಜ್‌ನ ಪ್ರದರ್ಶನಕ್ಕೆ ಶನಿವಾರ ನಗರದ ಮೌಂಟೆನ್ ವ್ಯೂ ಶಾಲಾ ಆವರಣದಲ್ಲಿ ಚಾಲನೆ ನೀಡಲಾಯಿತು.
ಜಿಟಿ ಜಿಟಿ ಮಳೆಯ ನಡುವೆಯೇ ಬೈಕ್ ಸವಾರರು ಕಣಕ್ಕಿಳಿದು ನೆರೆದಿದ್ದ ಪ್ರೇಕ್ಷಕರನ್ನು ರಂಜಿಸಿದರು. ಇಡೀ ಟ್ರ್ಯಾಕ್ ಪೂರ್ತಿ ಬೈಕ್ ಓಡಾಟದಿಂದ ಕೆಸರುಗದ್ದೆಯಂತಾಗಿತ್ತು. ಇದರ ನಡುವೆಯೇ ಛಲ ಬಿಡದ ಸವಾರರು ತಮ್ಮ ಗುರಿಯತ್ತ ಮುನ್ನಡೆದರು.
ನೆರೆದಿದ್ದ ಪ್ರೇಕ್ಷಕರಿಂದ ಚಪ್ಪಾಳೆ, ಶಿಳ್ಳೆ, ಕೇಕೆ ಮುಗಿಲು ಮುಟ್ಟಿತ್ತು. ಪುಣೆ, ತ್ರಿಶೂರ್, ತಮಿಳುನಾಡು, ಸತಾರ, ಬೆಂಗಳೂರು, ಕೊಯಮತ್ತೂರು, ಮೈಸೂರು, ಶಿವಮೊಗ್ಗ ಇನ್ನಿತರೆಡೆಯಿಂದ ಸುಮಾರು 50 ಸ್ಪರ್ಧಿಗಳು ಭಾಗವಹಿಸಿದ್ದರು. ಒಟ್ಟು 1.83 ಕಿ.ಮೀ ಸ್ಪೆಕ್ಟೇಟರ್ ಸ್ಪೆಶಲ್ ಸ್ಟೇಜ್‌ನಲ್ಲಿ ಶನಿವಾರ ಸವಾರರು ಮಿಂಚಿದ್ದು, ಭಾನುವಾರ ಬೆಳಗ್ಗೆ 8 ಗಂಟೆಯಿಂದ ವಸಂತ್ ಕೂಲ್ ಎಸ್ಟೇಟ್, ಸಾಣೆಹಡ್ಲು ಎಸ್ಟೇಟ್ ಹಾಗೂ ತಿಪ್ಪನಹಳ್ಳಿ ಎಸ್ಟೇಟ್‌ಗಳಲ್ಲಿ ಸುಮಾರು 20 ಕಿ.ಮೀ.ರ್ಯಾಲಿಯಲ್ಲಿ ಪಾಲ್ಗೊಂಡರು.
ಶನಿವಾರ ಮಧ್ಯಾಹ್ನ ಮೌಂಟೆನ್ ವ್ಯೂ ಕಾಲೇಜು ಆವರಣದಲ್ಲಿ ಸ್ಪೆಕ್ಟೇಟರ್ ಸ್ಪೆಷಲ್ ಸುತ್ತಿನ ರ್ಯಾಲಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎಚ್. ಅಕ್ಷಯ್ ಚಾಲನೆ ನೀಡಿದರು. ದಿ ಮೋಟಾರ್ ನ್ಪೋರ್ಟ್ಸ್ ಕ್ಲಬ್ ಚಿಕ್ಕಮಗಳೂರುನ ಅಧ್ಯಕ್ಷ ಜಯಂತ್ ಪೈ ಸೇರಿದಂತೆ ಅನೇಕರು ಇದ್ದರು