Advertisement

ಸುವ್ಯವಸ್ಥೆ, ಸೌಹಾರ್ದತೆ ಕದಡಲು ಬೈಕ್‌ ರ್ಯಾಲಿ

12:36 PM Sep 06, 2017 | Team Udayavani |

ತಿ.ನರಸೀಪುರ: ಹಿಂದೂಪರ ಸಂಘಟನೆಗಳ ಮುಖಂಡರು ಹತ್ಯೆಯಾದ ಘಟನೆಗಳನ್ನು ಹೋರಾಟದ ನೆಪವಾಗಿಟ್ಟುಕೊಂಡು ಕಾನೂನು ಸುವ್ಯವಸ್ಥೆಯನ್ನು ಹಾಳುಗೆಡವಿ, ಶಾಂತಿ ಇರುವ ರಾಜ್ಯದಲ್ಲಿ ಸೌಹಾರ್ದತೆ ಕಡದಿ ಸಮುದಾಯಗಳ ನಡುವೆ ಕೋಮು ಸಂಘರ್ಷವನ್ನು ತಂದಿಡಲು ಬಿಜೆಪಿ ನಾಯಕರು ಮಂಗಳೂರು ಚಲೋ ಬೈಕ್‌ ರ್ಯಾಲಿಯನ್ನು ನಡೆಸುತ್ತಿದ್ದಾರೆ ಎಂದು ಮೈಸೂರು ಜಿಲ್ಲಾ (ಗ್ರಾಮಾಂತರ) ಕಾಂಗ್ರೆಸ್‌ ಸಮಿತಿಯ ಯುವ ಕಾಂಗ್ರೆಸ್‌ನ ಜಿಲ್ಲಾಧ್ಯಕ್ಷ ಮೋಸಿನ್‌ ಖಾನ್‌ ಟೀಕಿಸಿದರು.

Advertisement

ಪಟ್ಟಣದ ನಂಜನಗೂಡು ರಸ್ತೆಯಲ್ಲಿರುವ ಕಬಿನಿ ನೀರಾವರಿ ನಿಗಮದ ಅತಿಥಿ ಗೃಹದಲ್ಲಿ ಮಂಗಳವಾರ ಕರೆಯಲಾಗಿದ್ದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿ, ಸಂಕಷ್ಟದಲ್ಲಿರುವ ನಾಡಿನ ಅನ್ನದಾತರಾದ ರೈತರ ಪರವಾಗಿಯಾಗಲಿ, ಬಡವರ ಪರವಾಗಿಯಾಗಲಿ ಹೋರಾಟ ಮಾಡಲು ಭಾರತೀಯ ಜನತಾ ಪಕ್ಷದ ನಾಯಕರಿಗೆ ಪುರಸೋತ್ತಿಲ್ಲ. ಕೆಲವರ ಹತ್ಯೆ ಘಟನೆಗಳಿಗೆ ಅಲ್ಪಸಂಖ್ಯಾತ ಸಂಘಟನೆಗಳನ್ನು ಟಾಗೇಟ್‌ ಮಾಡಿ, ಶಾಂತಿ ಸುವ್ಯವಸ್ಥೆಯನ್ನು ಹಾಳು ಗೆಡುವಲು ಮಂಗಳೂರು ಚಲೋ ಬೈಕ್‌ ರ್ಯಾಲಿ ನಡೆಸಲಾಗುತ್ತಿದೆ ಎಂದು ಲೇವಡಿ ಮಾಡಿದರು.

ಕಾಳಜಿಯಿಲ್ಲ: ಕೇಂದ್ರದಲ್ಲಿ ಬಿಜೆಪಿಗೆ ಅಧಿಕಾರವನ್ನು ನೀಡಿದರೆ ಪ್ರತಿವರ್ಷ 2 ಕೋಟಿ ಉದ್ಯೋಗವನ್ನು ಸೃಷ್ಟಿಸಿ ದೇಶದಲ್ಲಿನ ಯುವಕರಿಗೆ ನೀಡುವುದಾಗಿ ಘೋಷಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮೂರೂವರೆ ವರ್ಷಗಳಾದ 6 ಲಕ್ಷ ಉದ್ಯೋಗಗಳನ್ನು ಸೃಷ್ಟಿಸಿ ಯುವಕರಿಗೆ ನೀಡಲು ಸಾಧ್ಯವಾಗಿಲ್ಲ. ಬಿಜೆಪಿ ಚುನಾವಣೆ ಪೂರ್ವದಲ್ಲಿ ನೀಡಿದ್ದ ಭರವಸೆಗಳನ್ನು ಈಡೇರಿಸುವಲ್ಲಿ ವಿಫ‌ಲವಾಗಿದೆ. ಗಡಿಯಲ್ಲಿ ಸಾವನ್ನಪ್ಪುತ್ತಿರುವ ಯೋಧರ ಬಗ್ಗೆ ಕೇಂದ್ರ ಸರ್ಕಾರ ಕಿಂಚಿತ್ತೂ ಕಾಳಜಿಯನ್ನು ವಹಿಸುತ್ತಿಲ್ಲ. ಇನ್ನು ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಅಧಿಕಾರದಲ್ಲಿದ್ದಾಗ ದಲಿತರು ನೆನಪಾಗಲೇ ಇಲ್ಲ ಎಂದು ಆರೋಪಿಸಿದರು.

ಕೈ ಅಧಿಕಾರಕ್ಕೆ: ಜಿಲ್ಲೆಯಲ್ಲಿ ಕನಿಷ್ಠ 5 ಕ್ಷೇತ್ರಗಳಲ್ಲೂ ಕಮಲ ಗೆಲ್ಲಲಿಕ್ಕೆ ಸಾಧ್ಯವಿಲ್ಲ. ಚಾಮುಂಡೇಶ್ವರಿ, ಹೆಚ್‌.ಡಿ.ಕೋಟೆ ಹಾಗೂ ಕೆ.ಆರ್‌.ನಗರ ಈ ಬಾರಿ ಕೈವಶವಾಗಲಿವೆ. ರೈತಪರ ಮತ್ತು ಬಡವರ ಪರವಾದ ಯೋಜನೆಗಳನ್ನು ರೂಪಿಸಿ, ಉತ್ತಮ ಆಡಳಿತವನ್ನು ನೀಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಐದು ವರ್ಷ ಪೂರೈಸುತ್ತಿದೆ. ಸರ್ಕಾರದ ಸಾಧನೆಗಳನ್ನು ಗ್ರಾಪಂ ವ್ಯಾಪ್ತಿಯಲ್ಲಿ 6 ಯವಕರ ತಂಡವನ್ನು ರಚನೆ ಮಾಡಿ, ಮನೆ ಮನೆಗಳಿಗೆ ತಿಳಿಸಲಾಗುವುದು. ಒಟ್ಟಾರೆ ಮುಂದಿನ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲೂ ಕಾಂಗ್ರೆಸ್‌ ಅಧಿಕಾರಕ್ಕೆ ಬರುವುದು ಖಚಿತ ಎಂದರು.

ಶಾಶ್ವತ ಯೋಜನೆ: ಯುವಕ ಮೃಗಾಲಯ ಪ್ರಾಧಿಕಾರದ ನಿರ್ದೇಶಕ ಅಮ್ಜದ್‌ ಖಾನ್‌ ಮಾತನಾಡಿ, ಸಿಎಂ ಸಿದ್ದರಾಮಯ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್‌.ಸಿ.ಮಹದೇವಪ್ಪವಿಶೇಷ ಕಾಳಜಿಯನ್ನು ವಹಿಸಿ ಸಂಪರ್ಕದಲ್ಲಿ ಸುಧಾರಣೆ ತರಲು ಸುಸಜ್ಜಿತವಾದ ಸೇತುವೆಗಳನ್ನು, ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣವನ್ನು ನಿರ್ಮಾಣ ಮಾಡಿ, ಪಟ್ಟಣದ ಸೌಂದರೀಕರಣಕ್ಕೆ ಯೋಜನೆಗಳನ್ನು ರೂಪಿಸಿ, 500 ಕೋಟಿ ರೂಗಳ ಮೌಲ್ಯದಲ್ಲಿ ಶಾಶ್ವತ ಯೋಜನೆಗಳನ್ನು ರೂಪಿಸಿದ್ದಾರೆ. ಪುರಸಭೆಗೆ ಸಾರ್ವತ್ರಿಕ ಚುನಾವಣೆಯಾದ ನಂತರ ಎಲ್ಲಾ ಸಮಸ್ಯೆಗಳಿಗೂ ಶಾಶ್ವತ ಪರಿಹಾರ ಸಿಗಲಿದೆ ಎಂದು ತಿಳಿಸಿದರು.

Advertisement

ಸುದ್ಧಿಗೋಷ್ಠಿಯಲ್ಲಿ ನರಸೀಪುರ ಯುವ ಕಾಂಗ್ರೆಸ್‌ ಅಧ್ಯಕ್ಷ ಟಿ.ಎಸ್‌.ಲೋಕೇಶ್‌, ದರಖಾಸ್ತು ಸಮಿತಿ ಸದಸ್ಯ ಕೆ.ಮರಿಗೌಡ, ಜಿಲ್ಲಾ ಯುವ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಸುರೇಶ್‌, ಮರಡೀಪುರ ರಘು, ವರುಣ ಯುವ ಕಾಂಗ್ರೆಸ್‌ ಅಧ್ಯಕ್ಷ ಮಹೇಶ್‌, ಮುಖಂಡರಾದ ಹೆಚ್‌.ಡಿ.ಕೋಟೆ ದಿನೇಶ್‌ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next