ಔರಾದ: ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಸರ್ಕಾರಿ, ಅರೆ ಸರ್ಕಾರಿ, ಸಂಘ-ಸಂಸ್ಥೆಗಳ ಕಚೇರಿಗಳ ಮೇಲೆ ಹಾಗೂ ಮನೆ ಹಾಗೂ ವಾಹನಗಳ ಮೇಲೆಯೂ ರಾಷ್ಟ್ರಧ್ವಜ ತಿರಂಗಾ ಶನಿವಾರ ಹಾರಾಡಿತು. ಸರ್ಕಾರಿ ಕಚೇರಿಗಳ ಮೇಲೆ ಅಧಿಕಾರಿಗಳು ಬಾವುಟ ಹಾರಿಸಿದರೆ, ಸಂಘ ಸಂಸ್ಥೆಗಳ ಕಚೇರಿಗಳ ಮೇಲೆ ಸಂಘಟನೆಯ ಪ್ರಮುಖರು ತಿರಂಗಾ ಹಾರಿಸಿದರು.
ಪಟ್ಟಣದ ಕನ್ನಡಾಂಬೆಯ ವೃತ್ತದಿಂದ ನ್ಯಾಯಾಲಯ ಆವರಣದ ತನಕ ವಕೀಲರ ಸಂಘದ ಅಧ್ಯಕ್ಷರು, ಸರ್ವ ಪದಾಧಿಕಾರಿಗಳು ಸೇರಿಕೊಂಡು ಬೈಕ್‌ಗೆ ತಿರಂಗಾ ಬಾವುಟ ಕಟ್ಟಿಕೊಂಡು ಜನರಲ್ಲಿ ಜಾಗೃತಿ ಮೂಡಿಸಿದರು.
ಅದರಂತೆ ಆಟೋ ಚಾಲಕರ ಸಂಘದ ಸದಸ್ಯರು ಕೂಡಾ ಬಸವೇಶ್ವರ ವೃತ್ತದಿಂದ ಕನ್ನಡಾಂಬೆಯ ವೃತ್ತದ ತನಕ ಆಟೋದ ಮೂಲಕ ರ‍್ಯಾಲಿ ಮಾಡಿ ಜನಮನ ಸೆಳೆದರು.
ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಡಾ| ಶಾಲಿವಾನ ಉದಗಿರೆ ಸರ್ಕಾರಿ ಶಾಲೆಯಲ್ಲಿನ ವಿದ್ಯಾರ್ಥಿಗಳಿಗೆ ಸಾವಿರ ಧ್ವಜವನ್ನು ವಿತರಣೆ ಮೂಲಕ ರಾಷ್ಟ್ರ ಪ್ರೇಮದಲ್ಲಿ ಮೆರೆದರು.
ಸಿದ್ದಿ ವಿನಾಯಕ ಚಾರಿಟೇಬಲ್ ಟ್ರಸ್ಟ್‌ನಿಂದ ಔರಾದ ಪಟ್ಟಣದಲ್ಲಿನ ಗುರೂಜಿ ಪಬ್ಲಿಕ್ ಸ್ಕೂಲ್ ಔರಾದ ಹಾಗೂ ಗುರೂಜಿ ಪಬ್ಲಿಕ್ ಸ್ಕೂಲ್ ಮಾಳೆಗಾಂವ ಗ್ರಾಮದಲ್ಲಿನ ಶಾಲೆಯ ವಿದ್ಯಾರ್ಥಿಗಳಿಗೆ ಬಾವುಟ ವಿತರಣೆಯ ಜೊತೆಗೆ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ವೀರ ಯೋಧರ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲಾಯಿತು.
ಜಿಲ್ಲಾ ಬಿಜೆಪಿ ಯುವ ಮೋರ್ಚಾ ಕಾರ್ಯದರ್ಶಿ ಬಸವರಾಜ ಹಳ್ಳೆ ನೇತೃತ್ವದಲ್ಲಿ ಪಟ್ಟಣದ ಮೂರು ಸಾವಿರ ಮನೆ-ಮನೆಗೆ ತೆರಳಿ ತಿರಂಗಾ ಬಾವುಟವನ್ನು ಕುಟುಂಬದ ಸದಸ್ಯರಿಗೆ ನೀಡಿ ಮೂರು ದಿನಗಳ ಕಾಲ ತಮ್ಮ ಮನೆಗಳ ಮೇಲೆ ಬಾವುಟ ಹಾರಾಡಬೇಕೆಂದು ಮನವಿ ಮಾಡಿಕೊಂಡರು.