Advertisement

ಡಕಾರ್‌ ಮಾಂತ್ರಿಕ ಸಂತೋಷ್‌

11:48 AM Feb 10, 2018 | Team Udayavani |

ಕೆಲವರಿಗೆ ಬೈಕ್‌ ಎಂದರೆ ಕ್ರೇಜ್‌. ಮತ್ತೆ ಕೆಲವರಿಗೆ ಹವ್ಯಾಸ, ಸೂಪರ್‌ ಸ್ಟಾರ್‌ ಆಗುವ ಕನಸು. 
ಬೆಂಗಳೂರಿನ ಖ್ಯಾತ ಬೈಕ್‌ ಚಾಲಕರಾದ ಸಿ.ಎಸ್‌.ಸಂತೋಷ್‌ ಕೂಡ ಆರಂಭದಲ್ಲಿ ಹವ್ಯಾಸಕ್ಕೆಂದೇ ಆರಂಭಿಸಿದರು. ನಂತರ ಬೈಕ್‌ ರೇಸರ್‌ ಆಗಿ ಬದಲಾದರು. ಇದೀಗ ಡಕಾರ್‌ ರ್ಯಾಲಿಯಲ್ಲಿ ಪಾಲ್ಗೊಂಡು ವಾಪಸ್‌ ಆಗಿದ್ದಾರೆ, ಒಟ್ಟಾರೆ ರೇಸ್‌ನಲ್ಲಿ 34ನೇ ಸ್ಥಾನ ಪಡೆರುವ ಅವರು ಅರ್ಜೆಂಟೀನಾದ ತಿರುವು-ಮುರುವಿನ ರಸ್ತೆಗಳಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ. ಹಲವಾರು ಸವಾಲುಗಳನ್ನು ಎದುರಿಸಿ, ಗಮನಾರ್ಹ ಪ್ರದರ್ಶನ ನೀಡಿದ್ದಾರೆ. ತಮ್ಮ ಅನುಭವವನ್ನು ಉದಯವಾಣಿ ಜತೆಗೆ ಹಂಚಿಕೊಂಡಿದ್ದಾರೆ. ಅವರ ಯಶೋಗಾಥೆಯನ್ನು ಅವರ ಮಾತುಗಳಲ್ಲೇ ವಿವರಿಸಲಾಗಿದೆ. 

Advertisement

ರೇಸರ್‌ ವಿಜಯ್‌ ಸ್ಪೂರ್ತಿ
ಮೂಲತಃ ನಾನು ಕೋಲಾರದವನು. ನನಗೆ ಖ್ಯಾತ ಬೈಕ್‌ ರೇಸರ್‌ ವಿಜಯ್‌ ಕುಮಾರ್‌ ಅಂದರೆ ಇಷ್ಟ. ನನ್ನ 17ರ ವಯಸ್ಸಿನಲ್ಲಿ ಬೆಂಗಳೂರಿನಲ್ಲಿ ನಡೆದ ಸೂಪರ್‌ಕ್ರಾಸ್‌ ಬೈಕ್‌ ರೇಸಿಂಗ್‌ ನೋಡಲು ಹೋಗಿದ್ದಾಗ ಅವರನ್ನು ನೋಡಿದ್ದೆ. ಅಂದು ವಿಜಯ್‌ ಕುಮಾರ್‌ ಚಾಂಪಿಯನ್‌ ಆಗಿದ್ದರು, ಮುಂದೊಂದು ದಿನ ಅವರಂತೆ ನಾನೂ ಬೈಕ್‌ ರೇಸರ್‌ ಆಗಿ ಬೆಳೆಯಬೇಕು ಎಂದು ಅಂದುಕೊಂಡೆ. ಆಫ್ ರೋಡ್‌ ರೇಸಿಂಗ್‌ನಲ್ಲಿ ಹಲವಾರು ಸ್ಪರ್ಧೆಗಳಲ್ಲಿ ಭಾಗವಹಿಸಲು ಆರಂಭಿಸಿದೆ. ಆರಂಭದಲ್ಲಿ ಕೆಲವೊಂದು ಅಡೆತಡೆಗಳು ಎದುರಾದವು. ಅವನ್ನೆಲ್ಲ ಮೆಟ್ಟಿನಿಂತು ಮುಂದಡಿ ಇಟ್ಟೆ. ಇಂದು ಇಲ್ಲಿಯವರೆಗೆ ಸಾಗಿ ಬಂದೆ. 

2018ರ ಡಕಾರ್‌ ರ್ಯಾಲಿ ಅನುಭವ ಹೇಗಿತ್ತು?
ಅತ್ಯಂತ ಕಷ್ಟದ ರೇಸ್‌ ಅನ್ನಬಹುದು. ಸ್ಪರ್ಧೆ ಜಿದ್ದಾಜಿದ್ದಿನಿಂದ ಕೂಡಿತ್ತು. ನಾನು 34ನೇ ಸ್ಥಾನ ಪಡೆದುಕೊಂಡೆ. ಸುಮಾರು 400ಕ್ಕೂ ಹೆಚ್ಚು ವಿವಿಧ ದೇಶದ ಕ್ರೀಡಾಪಟುಗಳು ಪಾಲ್ಗೊಂಡಿದ್ದರು. ಈ ರ್ಯಾಲಿ 14 ಹಂತದ ರೇಸ್‌ ಒಳಗೊಂಡಿತ್ತು, ಆರಂಭದಿಂದಲೂ ಸ್ಪರ್ಧೆಯ ಮೇಲೆ ಎಷ್ಟೇ ನಿಗಾ ಇಟ್ಟರೂ ಹಿಡಿತ ಕಳೆದುಕೊಂಡೆ. ಪೆರು, ಬೊಲಿವಿಯಾ ಮೂಲಕ ರೇಸ್‌ ಆರಂಭವಾಯಿತು. ಒಟ್ಟಾರೆ 139 ಬೈಕ್‌ ಸ್ಪರ್ಧಿಗಳು ಇದ್ದರು. ರೆಡ್‌ಬುಲ್‌ ತಂಡವನ್ನು ನಾನು ಪ್ರತಿನಿಧಿಸಿದ್ದೆ. ಒಂದು ಕಡೆ ನನ್ನ ಬೈಕ್‌ ಪಲ್ಟಿಯಾಯಿತು. ಪ್ರಾಣಾಪಾಯದಿಂದ ಪಾರಾದೆ. ಮತ್ತೂಂದು ಕಡೆ ಬೈಕ್‌ ಹಾಳಾಯಿತು. ನೂರಾರು ಸಮಸ್ಯೆಗಳಿದ್ದರೂ ಕೊನೆಗೆ ನನಗೆ 34ನೇ ಸ್ಥಾನ ಸಿಕ್ಕಿರುವುದು ಸಂತಸದ ಸಂಗತಿ. ಡಕಾರ್‌ ರ್ಯಾಲಿಯಲ್ಲಿ 3ನೇ ಸಲ ಅತ್ಯುತ್ತಮ ಸಾಧನೆ ಮಾಡಿರುವುದು ನನಗೆ ಹೆಮ್ಮೆಯ ಸಂಗತಿ ಎಂದು ತಿಳಿಸಿದರು.

ಸಂತೋಷ್‌ ಸಾಗಿದ ದಾರಿ
2005 ಸಂತೋಷ್‌ ಎಂಆರ್‌ಎಫ್ ರಾಷ್ಟ್ರೀಯ ಸೂಪರ್‌ಕ್ರಾಸ್‌ ಮತ್ತು ಗಲ್ಫ್ ರಾಷ್ಟ್ರೀಯ ಡರ್ಟ್‌ ಟ್ರ್ಯಾಕ್‌ ಚಾಂಪಿಯನ್‌ ಆದರು. 

2006 ದುಬೈನಲ್ಲಿ ನಡೆದ ಅಲ್‌ ಎನ್‌ ಮೋಟಾರ್‌ ಕ್ರಾಸ್‌ನಲ್ಲಿ ಚಾಂಪಿಯನ್‌. ಒಟ್ಟಾರೆ ದುಬೈ ರಾಷ್ಟ್ರೀಯ ಎಂಎಕ್ಸ್‌ ಕೂಟದಲ್ಲಿ ಚಾಂಪಿಯನ್‌. 

Advertisement

2007 ರಾಷ್ಟ್ರೀಯ ಸೂಪರ್‌ಕ್ರಾಸ್‌ ಚಾಂಪಿಯನ್‌ 

2008 ಮೊದಲ ಬಾರಿಗೆ ಭಾರತೀಯನೊಬ್ಬ ಏಷ್ಯನ್‌ ಮೋಟಾರ್‌ ಕ್ರಾಸ್‌ ರೇಸ್‌ಗೆ ಆಯ್ಕೆ. ಅದೇ ವರ್ಷ ಎಂಆರ್‌ಎಫ್ ಏಷ್ಯನ್‌ ಮೋಟಾರ್‌ ಕ್ರಾಸ್‌ ರೇಸ್‌ನಲ್ಲಿ ಪ್ರಶಸ್ತಿ. 2ನೇ ಸಲ ಗಲ್ಫ್ ಡರ್ಟ್‌ ಟ್ರ್ಯಾಕ್‌ ಚಾಂಪಿಯನ್‌. 

2009 ಶ್ರೀಲಂಕಾದಲ್ಲಿ ನಡೆದ ಮೋಟಾರ್‌ ಕ್ರಾಸ್‌ ರೇಸಿಂಗ್‌ನಲ್ಲಿ ಪ್ರಶಸ್ತಿ.
ಎಂಆರ್‌ಎಫ್ ರಾಷ್ಟ್ರೀಯ ಸೂಪರ್‌ಕ್ರಾಸ್‌, ರೊಲನ್‌ ರಾಷ್ಟ್ರೀಯ ಡರ್ಟ್‌ ಟ್ರ್ಯಾಕ್‌ ಪ್ರಶಸ್ತಿ.

2010 ಶ್ರೀಲಂಕಾದಲ್ಲಿ ನಡೆದ ಪ್ರಮುಖ 2 ರೇಸ್‌ನಲ್ಲಿ ಗೆಲುವು. ಅಲ್ಲದೇ ಅದೇ ವರ್ಷ ಸಿಗಿರಿ ರ್ಯಾಲಿನಲ್ಲಿ ಪಾಲ್ಗೊಂಡು 2ನೇ ಸ್ಥಾನ. 

2011 ರೈಡ್‌ ಡಿ ಹಿಮಾಲದಲ್ಲಿ ಪಾಲ್ಗೊಂಡು ಮೊದಲ ಭಾರತೀಯ ಎನ್ನುವ ಸಾಧನೆ ಮಾಡಿದರು. ಅತ್ಯಂತ ಕಷ್ಟದ ರೇಸ್‌ನಲ್ಲಿ ಭಾಗವಹಿಸಿರುವುದು ಅಚ್ಚರಿಯ ಸಂಗತಿ. 

2013 ವಿಶ್ವ ಕ್ರಾಸ್‌ ಕಂಟ್ರಿ ರ್ಯಾಲಿನಲ್ಲಿ ಪಾಲ್ಗೊಂಡ ಮೊದಲ ಭಾರತೀಯ ಎನ್ನುವ ದಾಖಲೆ. 

2014 ವಿಶ್ವ ರೇಸ್‌ನಲ್ಲಿ 9ನೇ ಸ್ಥಾನ.

2015 ಮೊದಲ ಬಾರಿಗೆ ವಿಶ್ವದ ಅತ್ಯಂತ ಕಷ್ಟದ ರ್ಯಾಲಿನಲ್ಲಿ ಭಾಗಿ. 36ನೇ ಸ್ಥಾನ ಪಡೆದುಕೊಂಡರು. 

2016ರಲ್ಲಿ ಮತ್ತೆ ಡಕಾರ್‌ ರ್ಯಾಲಿನಲ್ಲಿ ಭಾಗಿ. ನಿರೀಕ್ಷಿತ ಪ್ರದರ್ಶನ ಸಿಕ್ಕಿಲ್ಲ. 

2017 ಡಕಾರ್‌ನಲ್ಲಿ ಸಂತೋಷ್‌ಗೆ 47ನೇ ಸ್ಥಾನ.

2018 ಡಕಾರ್‌ನಲ್ಲಿ ಜೀವಮಾನ ಶ್ರೇಷ್ಠ ಸಾಧನೆ. 34ನೇ ಸ್ಥಾನ. 

Advertisement

Udayavani is now on Telegram. Click here to join our channel and stay updated with the latest news.

Next