Advertisement

ಬಿಜೂರು: ಹೆದ್ದಾರಿ ಅವೈಜ್ಞಾನಿಕ ಕಾಮಗಾರಿ ಅವ್ಯವಸ್ಥೆ

01:49 AM Jun 25, 2019 | sudhir |

ಬೈಂದೂರು: ಮಳೆಯ ಅಭಾವ, ಕೂಲಿಯಾಳುಗಳ ಕೊರತೆಯಿಂದ ಸಾವಿರಾರು ಎಕರೆ ಕೃಷಿಭೂಮಿ ಹಡಿಲು ಬಿದ್ದಿದೆ. ಈ ಮಧ್ಯೆಯೂ ಕೃಷಿಯನ್ನೇ ನಂಬಿಕೊಂಡು ಜೀವನ ನಿರ್ವಹಿಸುತ್ತಿದ್ದ ಕುಟುಂಬಗಳು ಹೆದ್ದಾರಿ ಕಾಮಗಾರಿಯ ಅವ್ಯವಸ್ಥೆಯಿಂದ ಹತ್ತಾರು ಎಕರೆ ಭೂಮಿಯಲ್ಲಿನ ಕೃಷಿ ಕಳೆದುಕೊಂಡು ಕಂಗಾಲಾಗಿದ್ದಾರೆ.

Advertisement

ಬಿಜೂರು ಗ್ರಾಮದ 1ನೇ ವಾರ್ಡ್‌ ಹೊಳೆಬಾಗಿಲು ಬೈಲುಮನೆ ಸೇತುವೆ ಬಳಿ ಐ.ಆರ್‌.ಬಿ. ಕಂಪೆನಿಯ ಅವೈಜ್ಞಾನಿಕ ಹೆದ್ದಾರಿ ಕಾಮಗಾರಿಯ ಪರಿಣಾಮ ಕೃಷಿಕರು ಸಮಸ್ಯೆ ಎದುರಿಸುತ್ತಿದ್ದಾರೆ.

ಮರುಕಳಿಸುವ ಸಮಸ್ಯೆ

ಬಿಜೂರು ಸೇತುವೆ ಬಳಿ ನೀರು ನುಗ್ಗುವ ಸಮಸ್ಯೆ ಇಂದು ನಿನ್ನೆಯದಲ್ಲ. ಹೆದ್ದಾರಿ ಕಾಮಗಾರಿ ಆರಂಭವಾದಂದಿನಿಂದ ಈ ಸಮಸ್ಯೆ ಪ್ರಾರಂಭವಾಗಿದೆ.

ಬಿಜೂರು ಕ್ರಾಸ್‌ ಬಳಿ ಒಂದು ರಸ್ತೆ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಸಾಗುತ್ತದೆ. ಈ ತಿರುವಿನ ಚರಂಡಿಯಿಂದ ನೀರು ಬಿಜೂರು ಸೇತುವೆ ಬಳಿ ಹೊಳೆಗೆ ಹರಿಯುತ್ತದೆ. ಹೊಳೆ ಸಮೀಪ ಖಾಸಗಿ ಜಾಗದವರು ಸಣ್ಣ ಮೋರಿಯನ್ನು ಅಳವಡಿಸಿದ್ದಾರೆ.

Advertisement

ಈ ಸಣ್ಣ ಮೋರಿಯಿಂದ ನೀರು ಹರಿಯಲು ಸಾಧ್ಯವಾಗುತ್ತಿಲ್ಲ. ಬೇಸಗೆ ಅಂತ್ಯದಲ್ಲಿ ಹೆದ್ದಾರಿ ಕಾಮಗಾರಿ ನಡೆಸುವ ಕಂಪೆನಿ ಮಣ್ಣು ತುಂಬಿದುದರ ಪರಿಣಾಮ ಸಮಸ್ಯೆ ಆಗುತ್ತಿದೆ ಎಂದು ಸ್ಥಳೀಯರು ಕಂಪೆನಿಯ ಅಧಿಕಾರಿಗಳಿಗೆ ತಿಳಿಸಿದ್ದರು. ಆದರೆ ಅಧಿಕಾರಿಗಳು ಮಾತ್ರ ಈ ರೀತಿ ಸಮಸ್ಯೆಯಾದರೆ ತತ್‌ಕ್ಷಣ ಸರಿಪಡಿಸಿಕೊಡುತ್ತೇನೆ ಎಂದಿದ್ದರು.

ಇದೀಗ ಶುಕ್ರವಾರದಿಂದ ಸುರಿದ ಮಳೆಗೆ ಬಿಜೂರು ಹೆದ್ದಾರಿಯಿಂದ ಹರಿಯುವ ನೀರು ಈ ರಸ್ತೆಯ ಎಡಭಾಗದಲ್ಲಿ ನುಗ್ಗಿದೆ. ಕಾಮಗಾರಿ ನಡೆಸುವ ಕಂಪೆನಿಯ ಯಂತ್ರಗಳು ಮಣ್ಣಿನಲ್ಲಿ ಹೂತು ಹೋಗುವುದರಿಂದ ಚರಂಡಿ ಸರಿಪಡಿಸಲು ಸಾಧ್ಯವಾಗಿಲ್ಲ. ಹೀಗಾಗಿ ನೀರು ಕೃಷಿ ಭೂಮಿಯನ್ನು ನುಗ್ಗಿದೆ.

ಇನ್ನೆರೆಡು ದಿನದಲ್ಲಿ ಬೇಸಾಯದ ಸಿದ್ಧತೆ ನಡೆಸಿದ್ದ ರೈತರು ಮನೆಯಂಗಳ ದಲ್ಲಿ ಚಾಪೆ ನೇಜಿ ಕೂಡ ಮಾಡಿದ್ದರು. ನಿಗದಿತ ಸಮಯದಲ್ಲಿ ಇವುಗಳನ್ನು ಗದ್ದೆಯಲ್ಲಿ ನಾಟಿ ಮಾಡದಿದ್ದರೆ ಉತ್ತಮ ಇಳುವರಿಯೂ ಅಸಾಧ್ಯ. ಅದರಲ್ಲೂ ಯಾಂತ್ರಿಕ ನಾಟಿ ಮಾಡ ಬೇಕೆಂದು ಯಂತ್ರಗಳನ್ನು ಕೂಡ ತರಿಸಿಕೊಳ್ಳಲಾಗಿತ್ತು.

ಗದ್ದೆಯಲ್ಲಿ ನೀರು ತುಂಬಿದ ಪರಿಣಾಮ ಯಾಂತ್ರಿಕ ನಾಟಿ ಸಾಧ್ಯವಿಲ್ಲ. ಹೆದ್ದಾರಿ ಕಾಮಗಾರಿ ಪರಿಣಾಮ ಕೃಷಿಯ ಮೂಲಕ ಬದುಕು ಕಟ್ಟಿಕೊಳ್ಳಬೇಕಾದ ಈ ಭಾಗದ ರೈತರು ಈ ವರ್ಷ ಬೇಸಾಯವನ್ನು ಕೈಬಿಟ್ಟಿದ್ದಾರೆ.

ಕೃಷಿಯನ್ನೇ ಕೈಬಿಟ್ಟಿದ್ದೇವೆ

ತಲೆತಲಾಂತರದಿಂದ ಕೃಷಿಯನ್ನೇ ಸಾಂಪ್ರದಾಯಿಕವಾಗಿ ಮುಂದುವರಿಸಿಕೊಂಡು ಬಂದಿದ್ದೇವೆ. ಹೆದ್ದಾರಿ ಬದಿಯಲ್ಲಿ ಮಣ್ಣು ಶೇಖರಿಸುವಾಗ ಅಧಿಕಾರಿಗಳಿಗೆ ನಾವು ತಿಳಿಸಿದ್ದೇವೆ.ಮಳೆಗಾಲದಲ್ಲಿ ತೊಂದರೆಯಾಗುತ್ತದೆ ಎಂದು ಹೇಳಿದ್ದರೂ ಸಹ ಗಂಭೀರವಾಗಿಲ್ಲ.ಬೇಸಾಯ ಮಾಡುವುದು ಮೊದಲೇ ಕಷ್ಟ ಅದರಲ್ಲೂ ಈ ರೀತಿಯ ಸಮಸ್ಯೆಯಾಗಿರುವುದು ಕೃಷಿಕರಾದ ನಮಗೆ ದಿಕ್ಕೇ ತೋಚುತ್ತಿಲ್ಲ.ಸಕಾಲದಲ್ಲಿ ನಾಟಿ ಮಾಡದಿದ್ದರೆ ಕಷ್ಟ.ಹೀಗಾಗಿ ಈ ವರ್ಷ ಕೃಷಿಯನ್ನೇ ಕೈಬಿಟ್ಟಿದ್ದೇವೆ. -ನಾರಾಯಣ ರಾಜು ಬಿಜೂರು, ಕೃಷಿಕರು

– ಅರುಣ ಕುಮಾರ ಶಿರೂರು

Advertisement

Udayavani is now on Telegram. Click here to join our channel and stay updated with the latest news.

Next