Advertisement

ಬೆಂಗಳೂರು ದಾಳಿಗೆ ಬಿಜಾಪುರ ಬುಲ್ಸ್‌ ತಬ್ಬಿಬ್ಬು

06:25 AM Sep 16, 2017 | |

ಹುಬ್ಬಳ್ಳಿ: ಬೆಂಗಳೂರು ಬ್ಲಾಸ್ಟರ್ ಬೌಲರ್‌ಗಳ ಮಾರಕ ದಾಳಿಗೆ ಸಿಲುಕಿದ ಬಿಜಾಪುರ ಬುಲ್ಸ್‌ ಕೆಪಿಎಲ್‌ನಲ್ಲಿ ಕೇವಲ 126 ಸವಾಲು ನೀಡಿದೆ.

Advertisement

ಇಲ್ಲಿನ ರಾಜನಗರ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಬಿಜಾಪುರ ಬುಲ್ಸ್‌ 20 ಓವರ್‌ಗೆ 9 ವಿಕೆಟ್‌ ಕಳೆದುಕೊಂಡು 125 ರನ್‌ ಬಾರಿಸಿತು. ಪಂದ್ಯದುದ್ದಕ್ಕೂ ಬೆಂಗಳೂರು ಬೌಲರ್‌ಗಳೇ ಮೇಲುಗೈ ಸಾಧಿಸಿದರು. ಒಬ್ಬರ ಹಿಂದೆ ಒಬ್ಬರಂತೆ ಬ್ಯಾಟ್ಸ್‌ಮನ್‌ಗಳು ಪೆವಿಲಿಯನ್‌ ಅತ್ತ ಹೆಜ್ಜೆ ಹಾಕಿದರು.

ಆರಂಭಿಕರಾಗಿ ಕಣಕ್ಕೆ ಇಳಿದ ಮೊಹಮ್ಮದ್‌ ತಾಹ ಮತ್ತು ಭರತ್‌ ಚಿಪ್ಲಿ ಜೋಡಿ 9 ರನ್‌ ದಾಖಲಿಸುತ್ತಿದ್ದಂತೆ ಮೊದಲ ಆಘಾತ ಎದುರಾಯಿತು. ಈ ಹಂತದಲ್ಲಿ ಸ್ಫೋಟಕ ಬ್ಯಾಟ್ಸ್‌ಮನ್‌ ತಾಹ ರನೌಟ್‌ಗೆ ಬಲಿಯಾದರು. ತಂಡದ ಮೊತ್ತ 3.5 ಓವರ್‌ಗೆ 22 ರನ್‌ ಆಗುತ್ತಿದ್ದಂತೆ ಚಿಪ್ಲಿ ಕೂಡ ವಿಕೆಟ್‌ ಕಳೆದುಕೊಂಡರು.

ಈ ಹಂತದಲ್ಲಿ 3ನೇ ವಿಕೆಟ್‌ಗೆ ಜತೆಯಾದ ಎಂ.ಜಿ.ನವೀನ್‌ ಮತ್ತು ನೇಗಿ ದೊಡ್ಡ ಮೊತ್ತ ಕಲೆ ಹಾಕುವ ಭರವಸೆ ನೀಡಿದ್ದರು. ಆದರೆ ಇನಿಂಗ್ಸ್‌ನ 8ನೇ ಓವರ್‌ಗೆ 2ನೇ ಎಸೆತದಲ್ಲಿ ನವೀನ್‌ ವಿಕೆಟ್‌ ಕಳೆದುಕೊಂಡರು. ಇವರ ಹಿಂದೆಯೇ ಅನುಭವಿ ಆಟಗಾರ ಎಚ್‌.ಎಸ್‌. ಶರತ್‌ ಕೂಡ ಪೆವಿಲಿಯನ್‌ ಸೇರಿದರು.

ಹೀಗೆ ಬೆಂಗಳೂರು ಬೌಲರ್‌ಗಳ ದಾಳಿಗೆ ಸಿಲುಕಿ ಬುಲ್ಸ್‌ ಬ್ಯಾಟ್ಸ್‌ಮನ್‌ಗಳು ನಿರಂತರವಾಗಿ ವಿಕೆಟ್‌ ಕಳೆದುಕೊಳ್ಳುತ್ತಾ ಸಾಗಿದರು. ಯಾರೂ ಕೂಡ ಕ್ರೀಸ್‌ನಲ್ಲಿ ಹೆಚ್ಚು ಹೊತ್ತು ನಿಲ್ಲಲಿಲ್ಲ. ತಂಡದ ಪರ ದಿಕ್ಷಾಂಶು ನೇಗಿ 28 ಎಸೆತದಲ್ಲಿ 5 ಬೌಂಡರಿ ಸೇರಿದಂತೆ 36 ರನ್‌ ಬಾರಿಸಿ ಔಟ್‌ ಆದರು. ಇದು ಬುಲ್ಸ್‌ ಪರ ದಾಖಲಾದ ವೈಯಕ್ತಿಕ ಗರಿಷ್ಠ ಮೊತ್ತವಾಗಿದೆ. ಉಳಿದಂತೆ ಎಲ್ಲಾ ಬ್ಯಾಟ್ಸ್‌ಮನ್‌ಗಳು ವೈಫ‌ಲ್ಯ ಎದುರಿಸಿದರು. ರೋನಿತ್‌ ಮೋರೆ ಮತ್ತು ಕೆ.ಸಿ.ಕಾರಿಯಪ್ಪ ಅಜೇಯರಾಗಿ ಉಳಿಯುವ ಮೂಲಕ ತಂಡ ಆಲೌಟ್‌ ಆಗುವುದನ್ನು ತಪ್ಪಿಸಿದರು.

Advertisement

ಚುರುಕಿನ ದಾಳಿ:
ಬೆಂಗಳೂರು ಪರ ಪ್ರಸಿದ್ಧ್ ಕೃಷ್ಣ, ಕೌಶಿಕ್‌, ಪ್ರಣವ್‌ ಭಾಟಿಯಾ ಭರ್ಜರಿ ದಾಳಿ ನಡೆಸಿದರು. ಇದರಿಂದಾಗಿ ಬುಲ್ಸ್‌ ತಂಡವನ್ನು ಆಲೌಟ್‌ ಮಾಡಲು ಸಾಧ್ಯವಾಗದಿದ್ದರೂ ಅಲ್ಪ ಮೊತ್ತಕ್ಕೆ ಕಟ್ಟಿಹಾಕುವಲ್ಲಿ ಯಶಸ್ವಿಯಾದರು. ಕೌಶಿಕ್‌ ಮತ್ತು ಭಾಟಿಯಾ ತಲಾ 2 ವಿಕೆಟ್‌ ಪಡೆದರು. ಪ್ರಸಿದ್ಧ್, ಅಭಿಷೇಕ್‌, ಯಾದವ್‌ ತಲಾ 1 ವಿಕೆಟ್‌ ಪಡೆದರು. ಯಾವುದೇ ಹಂತದಲ್ಲಿಯೂ ಎದುರಾಳಿ ಬ್ಯಾಟ್ಸ್‌ಮನ್‌ಗಳಿಗೆ ಕ್ರೀಸ್‌ನಲ್ಲಿ ಹೆಚ್ಚು ಹೊತ್ತು ನಿಲ್ಲಲು ಅವಕಾಶ ನೀಡಲಿಲ್ಲ. ಕ್ಷೇತ್ರ ರಕ್ಷಣೆಯಲ್ಲಿಯೂ ಬೆಂಗಳೂರು ತಂಡ ಉತ್ತಮ ಪ್ರದರ್ಶನ ನೀಡಿತು.

ಸಂಕ್ಷಿಪ್ತ ಸ್ಕೋರ್‌:
ಬಿಜಾಪುರ ಬುಲ್ಸ್‌ 20 ಓವರ್‌ಗೆ 125/9(ನೇಗಿ 36, ಭರತ್‌ ಚಿಪ್ಲಿ 14, ಕೌಶಿಕ್‌ 23ಕ್ಕೆ 2, ಪ್ರಣವ್‌ ಭಾಟಿಯಾ 25ಕ್ಕೆ 2)

– ವಿಶ್ವನಾಥ ಕೋಟಿ

Advertisement

Udayavani is now on Telegram. Click here to join our channel and stay updated with the latest news.

Next