ಪಾಟ್ನಾ: ವಿಜಯ್ ಮರ್ಚಂಟ್ ಅಂಡರ್-16 ಪಂದ್ಯಾವಳಿಯ ಬಿಹಾರ-ಅರುಣಾಚಲ ನಡುವಿನ ಪಂದ್ಯ ದೊಡ್ಡ ದೊಡ್ಡ ದಾಖಲೆಗಳೊಂದಿಗೆ ಸುದ್ದಿಯಾಗಿದೆ.
ಪಾಟ್ನಾದಲ್ಲಿ ಮುಗಿದ ಈ ಪಂದ್ಯವನ್ನು ಬಿಹಾರ ಇನ್ನಿಂಗ್ಸ್ ಹಾಗೂ 870 ರನ್ನುಗಳ ಭಾರೀ ಅಂತರದಿಂದ ಗೆದ್ದಿತು. ಇದು ಕ್ರಿಕೆಟ್ ಚರಿತ್ರೆಯ ಅತಿ ದೊಡ್ಡ ವಿಜಯಗಳಲ್ಲಿ ಒಂದಾಗಿದೆ.
ಅಂದಮೇಲೆ ಸ್ಕೋರ್ ಕೂಡ ದೊಡ್ಡದೇ ಆಗಿರಬೇಕಲ್ಲ? ಹೌದು, ಮೊದಲು ಬ್ಯಾಟ್ ಮಾಡಿದ ಅರುಣಾಚಲ ಪ್ರದೇಶ ಕೇವಲ 83 ರನ್ನಿಗೆ ಆಲೌಟಾಯಿತು. ಇದಕ್ಕುತ್ತರವಾಗಿ ಬಿಹಾರ ಪೇರಿಸಿದ ಮೊತ್ತವೆಷ್ಟು ಗೊತ್ತೇ? ಬರೋಬ್ಬರಿ 1,007 ರನ್! ಅದೂ 7 ವಿಕೆಟಿಗೆ ಡಿಕ್ಲೇರ್.
ಬಿಹಾರದ ಈ ಇನ್ನಿಂಗ್ಸ್ ವೇಳೆ ಬಿನ್ನಿ 358 ರನ್, ಪ್ರಕಾಶ್ 220 ರನ್ ಹಾಗೂ ಅರ್ಣವ್ ಕಿಶೋರ್ 161 ರನ್ ಬಾರಿಸಿದರು. 924 ರನ್ನುಗಳ ಭಾರೀ ಹಿನ್ನಡೆಗೆ ಸಿಲುಕಿದ ಅರುಣಾಚಲ ಪ್ರದೇಶ ದ್ವಿತೀಯ ಇನ್ನಿಂಗ್ಸ್‌ನಲ್ಲೂ ಕಳಪೆ ಬ್ಯಾಟಿಂಗ್ ಮುಂದುವರಿಸಿ 54 ರನ್ನಿಗೆ ಸರ್ವಪತನ ಕಂಡಿತು; ಇನ್ನಿಂಗ್ಸ್ ಹಾಗೂ 270 ರನ್ ಅಂತರದ ಸೋಲನ್ನು ಹೊತ್ತುಕೊಂಡಿತು!
ಈ ಪಂದ್ಯದಲ್ಲಿ ಬಿಹಾರದ ರೇಶು ರಾಜ್ 37 ರನ್ನಿತ್ತು ಒಟ್ಟು 13 ವಿಕೆಟ್ ಉರುಳಿಸಿದರು.