ಮಣಿಪಾಲ/ಪಾಟ್ನಾ: ಬಿಹಾರ ವಿಧಾನಸಭಾ ಚುನಾವಣೆಯ ಪ್ರಚಾರದ ಸಂದರ್ಭದಲ್ಲಿಯೇ ಮುಖ್ಯಮಂತ್ರಿ ನಿತೀಶ್ ಕುಮಾರ್ ಪ್ರತ್ಯೇಕವಾಗಿ ಜೆಡಿಯು ಸಮಾವೇಶದಲ್ಲಿ ಪಾಲ್ಗೊಳ್ಳುತ್ತಿದ್ದು, ಎನ್ ಡಿಎ ವತಿಯಿಂದ ನಡೆದ ಬಿಜೆಪಿಯ ರಾಲಿಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿದ್ದು, ಇದೀಗ ಫಲಿತಾಂಶದಲ್ಲಿಯೂ ಅದರ ಪರಿಣಾಮ ಬೀರಿದೆ ಎಂಬುದು ಸಾಬೀತಾಗಿದೆ.
ಮಂಗಳವಾರ(ನವೆಂಬರ್ 10, 2020) ಬೆಳಗ್ಗೆ ಬಿಹಾರ ವಿಧಾನಸಭೆಗೆ ನಡೆದ ಚುನಾವಣೆಯ ಮತಎಣಿಕೆ ಆರಂಭಗೊಂಡಿದೆ. ಆರಂಭಿಕ ಹಂತದಲ್ಲಿಯೇ ಭಾರತೀಯ ಜನತಾ ಪಕ್ಷ ಮೇಲುಗೈ ಸಾಧಿಸಿದ್ದು, ಆಡಳಿತಾರೂಢ ಎನ್ ಡಿಎ ಮೈತ್ರಿಕೂಟದ ಜೆಡಿಯು 47 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ.
2015ರಲ್ಲಿ ನಡೆದ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ 53 ಕ್ಷೇತ್ರಗಳಲ್ಲಿ ಗೆಲುವು ಪಡೆದಿತ್ತು. ಆದರೆ ಈ ಬಾರಿ ಹೆಚ್ಚು ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ನಿರೀಕ್ಷೆ ಹೊಂದಿದೆ. ಆದರೆ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಪಕ್ಷ 2015ರಲ್ಲಿ 71 ಕ್ಷೇತ್ರಗಳಲ್ಲಿ ಸ್ಥಾನಪಡೆದು ಎನ್ ಡಿಎ ಮೈತ್ರಿಯೊಂದಿಗೆ ಮುಖ್ಯಮಂತ್ರಿ ಹುದ್ದೆ ಏರಿದ್ದರು.
ಇದನ್ನೂ ಓದಿ:LIVE ಮಿನಿಸಮರ ಫಲಿತಾಂಶ:R.R.ನಗರದಲ್ಲಿ ಮುನಿರತ್ನಗೆ ಭಾರಿ ಮುನ್ನಡೆ; ಶಿರಾದಲ್ಲಿ ನೇರ ಹಣಾಹಣಿ
ಸತತ ಹದಿನೈದು ವರ್ಷಗಳ ಕಾಲ ಬಿಹಾರದ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ್ದ ನಿತೀಶ್ ಕುಮಾರ್ ಅವರ ಜನಪ್ರಿಯತೆ ಕಡಿಮೆಯಾಗಿದೆ ಎಂಬುದಕ್ಕೆ ಈ ಬಾರಿಯ ಚುನಾವಣಾ ಫಲಿತಾಂಶವೇ ಸಾಕ್ಷಿಯಾಗಿದೆ. 2015ರ ಚುನಾವಣೆಗಿಂತ ಕಡಿಮೆ ಸ್ಥಾನ ಪಡೆಯುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಕೋವಿಡ್ 19 ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ದೇಶಾದ್ಯಂತ ಲಾಕ್ ಡೌನ್ ಘೋಷಿಸಿದ್ದ ವೇಳೆ, ದೇಶದ ಎಲ್ಲಾ ಭಾಗಗಳಲ್ಲಿ ವಾಸವಾಗಿದ್ದ ವಲಸೆ ಕಾರ್ಮಿಕರು ಬಿಹಾರಕ್ಕೆ ವಾಪಸ್ ಆಗಿದ್ದರು. ಸುಮಾರು 30ಲಕ್ಷಕ್ಕೂ ಅಧಿಕ ವಲಸೆ ಕಾರ್ಮಿಕರು ಬಂದಿದ್ದು, ಅವರಿಗೆ ನಿತೀಶ್ ಕುಮಾರ್ ನೇತೃತ್ವದ ಸರ್ಕಾರ ಹೆಚ್ಚಿನ ಆದ್ಯತೆ ನೀಡಿಲ್ಲವಾಗಿತ್ತು ಎಂದು ಮೈತ್ರಿಕೂಟದ ಬಿಜೆಪಿ ಅಸಮಾಧಾನವ್ಯಕ್ತಪಡಿಸಿತ್ತು.