ಪಟ್ನಾ : ಅತ್ಯಂತ ನಿರ್ಲಜ್ಜ ಹಾಗೂ ಆಘಾತಕಾರಿ ಪ್ರಕರಣವೊಂದರಲ್ಲಿ ಬಿಹಾರದ ಜಹಾನಾಬಾದ್ ಜಿಲ್ಲೆಯ ಶಾಲೆಯೊಂದರ ಹೆಡ್ ಮಾಸ್ಟರ್ ಮತ್ತು ಮೂವರು ಶಿಕ್ಷಕರು ಶಾಲೆಯಲ್ಲಿ ಓದುತ್ತಿರುವ 12ರ ಹರೆಯದ ಮಾನಸಿಕ ಅಸ್ವಸ್ಥ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವುದು ವರದಿಯಾಗಿದೆ.
ಕಳೆದ ಭಾನುವಾರ ನಡೆದ ಈ ಘಟನೆಯು ತಡವಾಗಿ ವರದಿಯಾಗಿದೆ. ಮಾನಸಿಕವಾಗಿ ಅಸ್ವಸ್ಥಳಾಗಿರುವ ಬಾಲಕಿಯು ಕಾಕೋ ಎಂಬಲ್ಲಿನ ಸರಕಾರಿ ಉರ್ದು ಮಾಧ್ಯಮಿಕ ಶಾಲೆಯ ವಿದ್ಯಾರ್ಥಿನಿಯಾಗಿದ್ದಾಳೆ. ಭಾನುವಾರ ಮಧ್ಯಾಹ್ನ ಶಾಲೆಯ ಟೆರೇಸ್‌ನಲ್ಲಿ ಹೆಡ್ ಮಾಸ್ಟರ್ ಹಾಗೂ ಇತರ ಮೂವರು ಶಿಕ್ಷಕರು ಸೇರಿ ಸರದಿ ಪ್ರಕಾರ ಬಾಲಕಿಯ ಮೇಲೆ ಗ್ಯಾಂಗ್ ರೇಪ್ ನಡೆಸಿದ್ದಾರೆ.
ಭಾನುವಾರ ಶಾಲೆಗೆ ರಜೆ ಇತ್ತಾದರೂ ಹೆಡ್ ಮಾಸ್ಟರ್ ಆದೇಶದ ಮೇರೆಗೆ ಶಾಲೆಯನ್ನು ತೆರೆಯಲಾಗಿತ್ತು. ವಿಶೇಷವೆಂದರೆ ಬಾಲಕಿಯ ತಾಯಿ ಕೂಡ ಇದೇ ಶಾಲೆಯಲ್ಲಿ ಶಿಕ್ಷಕಿಯಾಗಿದ್ದಾರೆ. ಆಕೆಗೆ ತನ್ನ ಮಗಳು ಶಾಲೆಯ ಟರೇಸ್ ಮೇಲೆ ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಕಂಡಾಗಲೇ ಈ ಆಘಾತಕಾರಿ, ನಿರ್ಲಜ್ಜ ಘಟನೆ ಅರಿವಿಗೆ ಬಂದಿದೆ.
ಒಡನೆಯೇ ಆಕೆ (ರೇಪ್ ಸಂತ್ರಸ್ತ ಬಾಲಕಿಯ ತಾಯಿ, ಶಿಕ್ಷಕಿ) ಪೊಲೀಸರಿಗೆ ದೂರು ನೀಡಿ ಎಫ್ ಐ ಆರ್ ದಾಖಲಿಸಿದ್ದಾಳೆ. ಎಫ್ಐಆರ್‌ನಲ್ಲಿ ಆಕೆ ಶಾಲೆಯ ಹೆಡ್ ಮಾಸ್ಟರ್ ಮತ್ತು ಮೂವರು ಶಿಕ್ಷಕರನ್ನು ಆರೋಪಿಗಳನ್ನಾಗಿ ಹೆಸರಿಸಿದ್ದಾಳೆ.
ರೇಪ್ ಸಂತ್ರಸ್ತ ಬಾಲಕಿಯನ್ನು ಕೂಡಲೇ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಜೆಹಾನಾಬಾದ್ ಡಿಎಸ್‌ಪಿ ಪ್ರಭಾತ್ ಕುಮಾರ್ ಶ್ರೀವಾಸ್ತ ತಿಳಿಸಿದ್ದಾರೆ.
ಎಲ್ಲ ನಾಲ್ವರು ರೇಪ್ ಆರೋಪಿಗಳಾಗಿರುವ ಹೆಡ್ ಮಾಸ್ಟರ್ ಅಜ್ಜು ಅಹ್ಮದ್ ಹಾಗೂ ಶಿಕ್ಷಕರಾದ ಅತಾವುರ್ ರೆಹಮಾನ್, ಅಬ್ದುಲ್ ಬಾರಿ ಮತ್ತು ಮೊಹಮ್ಮದ್ ಶಕಾವೂತ್ ಈಗ ತಲೆಮರೆಸಿಕೊಂಡಿದ್ದಾರೆ. ಪೊಲೀಸರು ಅವರಿಗಾಗಿ ಶೋಧ ಕಾರ್ಯ ನಡೆಸಿದ್ದಾರೆ.
ಈ ವರ್ಷ ಜನವರಿ 8ರಂದು ಬಿಹಾರ ವೈಶಾಲಿಯಯಲ್ಲಿನ ಸರಕಾರಿ ಶಾಲೆಯ ದಲಿತ ಬಾಲಕಿಯನ್ನು ಗ್ಯಾಂಗ್ ರೇಪ್ ನೆಡಸಿ ಬಳಿಕ ಅತ್ಯಮಾನುಷವಾಗಿ ಕೊಲ್ಲಲಾಗಿತ್ತು. ಆ ಬಳಿಕ ನಡೆದಿರುವ ಘೋರ ಅತ್ಯಾಚಾರ ಪ್ರಕರಣ ಇದಾಗಿದೆ.