Advertisement

ನಿತೀಶ್‌ ಅಂಗಳದಲ್ಲಿ ಚೆಂಡು ಕುತೂಹಲಕಾರಿ ಘಟ್ಟಕ್ಕೆ ಬಿಹಾರ ರಾಜಕೀಯ

03:50 AM Jul 13, 2017 | |

ಸ್ವಚ್ಛ ಆಡಳಿತದ ಭರವಸೆ ನೀಡಿ ಅಧಿಕಾರಕ್ಕೇರಿರುವ ಮುಖ್ಯಮಂತ್ರಿ ನಿತೀಶ್‌ಕುಮಾರ್‌ಗೆ ತನ್ನ ಸಂಪುಟದಲ್ಲೇ ಭ್ರಷ್ಟಾಚಾರ ಕಳಂಕಿತ ಸಚಿವನಿರುವುದು ಬಿಸಿ ತುಪ್ಪದಂತಾಗಿದೆ. 

Advertisement

ಸದಾ ಕೆಟ್ಟ ಕಾರಣಗಳಿಗಾಗಿಯೇ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗುವುದು ಬಿಹಾರದ ದುರಾದೃಷ್ಟವೆನ್ನಬೇಕು. ಕಳೆದ ಕೆಲವು ದಿನಗಳಿಂದ ಈ ರಾಜ್ಯ ರಾಜಕೀಯ ವಿಪ್ಲವಕ್ಕೆ ಸಿಲುಕಿ ಹೊಯ್ದಾಡುತ್ತಿದೆ. ಇದಕ್ಕೆ ಕಾರಣ ರಾಜ್ಯ ಸರಕಾರದ ಪ್ರಮುಖ ಪಾಲುದಾರನಾಗಿರುವ ಆರ್‌ಜೆಡಿ ಅಧ್ಯಕ್ಷ ಲಾಲೂ  ಕುಟುಂಬದ ವಿರುದ್ಧ ಕೇಳಿ ಬಂದಿರುವ ಬ್ರಹ್ಮಾಂಡ ಭ್ರಷ್ಟಾಚಾರದ ಆರೋಪ. 90ರ ದಶಕದ ಮೇವು ಹಗರಣದ ಮಾದರಿಯ ಪರಿಸ್ಥಿತಿ ಈಗ ಪುನರಾವರ್ತನೆಯಾಗಿದೆ. 

ಸಿಬಿಐ, ಜಾರಿ ನಿರ್ದೇಶನಾಲಯ, ಆದಾಯ ಕರ ಇಲಾಖೆ ಸೇರಿದಂತೆ ಹಲವು ಕೇಂದ್ರೀಯ ತನಿಖಾ ಸಂಸ್ಥೆಗಳು ಲಾಲೂ ಕುಟುಂಬದ ಹಿಂದೆ ಬಿದ್ದಿವೆ. ಪ್ರಸ್ತುತ ಲಾಲೂರ ಇಬ್ಬರು ಮಕ್ಕಳು ಬಿಹಾರ ಸರಕಾರದಲ್ಲಿ ಸಚಿವರಾಗಿದ್ದಾರೆ. ಈ ಪೈಕಿ ತೇಜಸ್ವಿ ಉಪಮುಖ್ಯಮಂತ್ರಿ ಹುದ್ದೆಯಲ್ಲಿದ್ದಾರೆ. ಇನ್ನೋರ್ವ ಪುತ್ರ ತೇಜ್‌ಪ್ರತಾಪ್‌  ಆರೋಗ್ಯ ಸಚಿವರಾಗಿದ್ದಾರೆ. ಪುತ್ರಿ ಮಿಸಾ ಭಾರತಿ ರಾಜ್ಯಸಭಾ ಸದಸ್ಯರಾಗಿದ್ದಾರೆ. ಈ ಪೈಕಿ ತೇಜ್‌ಪ್ರತಾಪ್‌ ಹೊರತು ಉಳಿದವರೆಲ್ಲ ಭ್ರಷ್ಟಾಚಾರದ ಆರೋಪ ಎದುರಿಸುತ್ತಿದ್ದಾರೆ. ಲಾಲೂ ರೈಲ್ವೇ ಸಚಿವರಾಗಿದ್ದ ಕಾಲದಲ್ಲಿ ನಿರ್ದಿಷ್ಟ ಕಂಪೆನಿಯೊಂದಕ್ಕೆ ರೈಲ್ವೇ ಕ್ಯಾಂಟೀನ್‌ಗಳನ್ನು ಗುತ್ತಿಗೆ ನೀಡಲು ಭೂಮಿಯ ರೂಪದಲ್ಲಿ ಲಂಚ ಪಡೆದಿದ್ದರು. ಅನಂತರ ಈ ಭೂಮಿಯನ್ನು ತೇಜಸ್ವಿಯ ಹೆಸರಿಗೆ ವರ್ಗಾಯಿಸಲಾಗಿದೆ. 

ಹೀಗಾಗಿ ಭ್ರಷ್ಟಾಚಾರದಲ್ಲಿ ತೇಜಸ್ವಿ ಸಹಭಾಗಿಯಾದಂತಾಗಿದೆ ಎನ್ನುವುದು ಆರೋಪ. ಇದಕ್ಕೆ ಸಂಬಂಧಿಸಿದಂತೆ ಅವರ ವಿರುದ್ಧ ಎಫ್ಐಆರ್‌ ಕೂಡ ದಾಖಲಾಗಿದೆ. ಇಷ್ಟು ಮಾತ್ರವಲ್ಲದೆ ಇತ್ತೀಚೆಗೆ ಸಿಬಿಐ ಲಾಲೂ ಮತ್ತು ಅವರ ಕುಟುಂಬದವರ ಮನೆ, ಕಚೇರಿ ಮತ್ತಿತರ ಸ್ಥಾಪನೆಗಳ ಮೇಲೂ ದಾಳಿ ನಡೆಸಿದೆ. ಮಿಸಾ ಭಾರತಿ ಹಲವು ಸಲ ಜಾರಿ ನಿರ್ದೇಶನಾಲಯದಿಂದ ವಿಚಾರಣೆಗೆ ಗುರಿಯಾಗಿದ್ದಾರೆ.ಈ ಎಲ್ಲ ಬೆಳವಣಿಗೆಗಳಿಂದ ಇಕ್ಕಟ್ಟಿಗೆ ಸಿಲುಕಿರುವುದು ಮುಖ್ಯಮಂತ್ರಿ ನಿತೀಶ್‌ ಕುಮಾರ್‌. ಸ್ವತ್ಛ ಆಡಳಿತದ ಭರವಸೆ ನೀಡಿ ಅಧಿಕಾರಕ್ಕೇರಿರುವ ನಿತೀಶ್‌ಗೆ ತನ್ನ ಸಂಪುಟದಲ್ಲೇ ಭ್ರಷ್ಟಾಚಾರ ಕಳಂಕಿತ ಸಚಿವನಿರುವುದು ಬಿಸಿ ತುಪ್ಪದಂತಾಗಿದೆ. 

2019ರ ಲೋಕಸಭಾ ಚುನಾವಣೆಯಲ್ಲಿ ಮಹತ್ವದ ಪಾತ್ರ ನಿಭಾಯಿಸುವ ಆಕಾಂಕ್ಷೆ ಇಟ್ಟುಕೊಂಡಿರುವ ನಿತೀಶ್‌ ಮಿತ್ರಪಕ್ಷದ ಎಡವಟ್ಟುಗಳಿಂದ ಭ್ರಷ್ಟಾಚಾರವನ್ನು ಸಹಿಸಿಕೊಂಡ ಆರೋಪವನ್ನು ಹೊರಲು ತಯಾರಿಲ್ಲ. ಇದೇ ವೇಳೆ ಕಠಿಣ ಕ್ರಮ ಕೈಗೊಂಡರೆ ಸರಕಾರ ಪತನಗೊಳ್ಳುವ ಭೀತಿಯೂ ಇದೆ. ಏಕೆಂದರೆ ಸಂಖ್ಯಾಬಲದಲ್ಲಿ ಜೆಡಿ(ಯು)ಗಿಂತ ಆರ್‌ಜೆಡಿ ಬಲಿಷ್ಠವಾಗಿದೆ. ಆದರೆ ತನಗೆ ಅಧಿಕಾರಕ್ಕಿಂತಲೂ ಇಮೇಜ್‌ ಹೆಚ್ಚು ಎಂದು ತೀರ್ಮಾನಿಸಿರುವ ನಿತೀಶ್‌, ಆರ್‌ಜೆಡಿಗೆ ತೇಜಸ್ವಿ ಕುರಿತು ತೀರ್ಮಾನಿಸಲು ಮಂಗಳವಾರ ನಾಲ್ಕು ದಿನಗಳ ಸಮಯಾವಕಾಶ ನೀಡಿರುವುದು ಬಿಹಾರದ ಸದ್ಯದ ರಾಜಕೀಯ ತುಮುಲದ ಒಂದು ಹಂತದ ಕ್ಲೈಮ್ಯಾಕ್ಸ್‌ ಆಗುವ ನಿರೀಕ್ಷೆಯಿದೆ. ನಾಲ್ಕು ದಿನದ ಗಡು ಶುಕ್ರವಾರಕ್ಕೆ ಮುಗಿಯಲಿದೆ. ಇಷ್ಟರೊಳಗೆ ಆರ್‌ಜೆಡಿ ತೇಜಸ್ವಿಯನ್ನು ಸಂಪುಟದಿಂದ ಕೈಬಿಡುವ ಕುರಿತು ತೀರ್ಮಾನಿಸಬೇಕು. ಹೀಗಾಗದಿದ್ದರೆ ಮುಖ್ಯಮಂತ್ರಿಯ ಅಧಿಕಾರದಿಂದ ತೇಜಸ್ವಿಯನ್ನು ಸಂಪುಟದಿಂದ ಕೈಬಿಡಬೇಕು. ಸದ್ಯಕ್ಕೆ ಇದು ಎರಡೂ ಆಗುವ ಸಾಧ್ಯತೆ ಕಾಣಿಸುತ್ತಿಲ್ಲ. ಏಕೆಂದರೆ ರಾಜೀನಾಮೆ ನೀಡುವುದಿಲ್ಲ ಎಂದು ತೇಜಸ್ವಿ ಸ್ಪಷ್ಟವಾಗಿ ಹೇಳಿದ್ದಾರೆ. 

Advertisement

ಹೀಗಾಗಿ ಚೆಂಡು ಈಗ ನಿತೀಶ್‌ ಅಂಗಳದಲ್ಲಿದೆ. ಒಂದು ವೇಳೆ ಅವರು ತೇಜಸ್ವಿಯನ್ನು ಉಚ್ಛಾಟಿಸುವ ದಿಟ್ಟತನ ತೋರಿಸಿದರೆ ಆರ್‌ಜೆಡಿ ಬೆಂಬಲ ಹಿಂದೆಗೆಕೊಳ್ಳಬಹುದು. ಹೀಗಾದರೆ ಬಿಜೆಪಿ ಈಗಾಗಲೇ ಬಾಹ್ಯ ಬೆಂಬಲ ನೀಡುವ ಕೊಡುಗೆಯಿತ್ತಿರುವುದರಿಂದ ನಿತೀಶ್‌ ಸರಕಾರಕ್ಕೇನೂ ಅಪಾಯವಾಗುವುದಿಲ್ಲ. ಇದಲ್ಲದೆ ಸಿಎಂ ಸ್ಥಾನದಿಂದ ತುಸು ಸಮಯ ದೂರವಿರುವ ಇನ್ನೊಂದು ಮಾರ್ಗವೂ ನಿತೀಶ್‌ ಮುಂದಿದೆ. ಭ್ರಷ್ಟಾಚಾರ ಆರೋಪ ಹೊತ್ತಿರುವ ಸಚಿವನನ್ನು ಪಕ್ಕದಲ್ಲಿಟ್ಟುಕೊಂಡು ಆಡಳಿತ ನಡೆಸಲಾಗುವುದಿಲ್ಲ ಎಂಬ ನೆಪ ಕೊಟ್ಟು ರಾಜೀನಾಮೆ ಕೊಟ್ಟರೆ ಅತ್ತ ಇಮೇಜೂ ಉಳಿಯುತ್ತದೆ, ಇತ್ತ ಸರಕಾರವೂ ಉಳಿಯುತ್ತದೆ. 2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆದ್ದಾಗ ನಿತೀಶ್‌ ಇದೇ ತಂತ್ರವನ್ನು ಅನುಸರಿಸಿದ್ದರು. ಇದರ ಪರಿಣಾಮವಾಗಿ ಜೀತನ್‌ ರಾಮ್‌ ಮಾಂಜಿ ಎಂಬ ಅಪರಿಚಿತ ನಾಯಕ ಮುಖ್ಯಮಂತ್ರಿಯಾಗಿದ್ದರು. 

ಆರ್‌ಜೆಡಿಗೆ ತೇಜಸ್ವಿಯನ್ನು ಕೆಳಗಿಳಿಸಿ ಭ್ರಷ್ಟಾಚಾರ ಆರೋಪ ಅಂಟಿಕೊಳ್ಳದ ತೇಜ್‌ಪ್ರತಾಪ್‌ರನ್ನು ಉಪಮುಖ್ಯಮಂತ್ರಿ ಸ್ಥಾನಕ್ಕೇರಿಸಿ ಸದ್ಯದ ಸಂಕಷ್ಟದಿಂದ ಪಾರಾಗುವ ದಾರಿಯೂ ಇದೆ. ಆದರೆ ಹೀಗೆ ಮಾಡಿದರೆ ಭ್ರಷ್ಟಾಚಾರ ಒಪ್ಪಿಕೊಂಡಂತಾಗುತ್ತದೆೆ.  ವಿಪಕ್ಷಗಳನ್ನು ಒಗ್ಗೂಡಿಸುವ ಪ್ರಯತ್ನದಲ್ಲಿ ಲಾಲೂ ನಿರತರಾಗಿದ್ದಾರೆ. 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಎದುರಾಗಿ ಮುಖ್ಯ ಪಾತ್ರ ನಿಭಾಯಿಸಬೇಕೆನ್ನುವುದು ಅವರ ಅಪೇಕ್ಷೆ. ಈ ಹಿನ್ನೆಲೆಯಲ್ಲೇ ಕೇಂದ್ರ ಸರಕಾರ ಸಿಬಿಐಯನ್ನು ಬಳಸಿಕೊಂಡು ಅವರನ್ನು ಹಣಿಯುತ್ತಿದೆ ಎನ್ನುವುದು ವಿಪಕ್ಷಗಳ ಆರೋಪ. ಬಿಹಾರದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಬಿಹಾರಕ್ಕೆ ಮಾತ್ರ ಸೀಮಿತವಾಗಿಲ್ಲ,ಇಡೀ ರಾಷ್ಟ್ರ ಕುತೂಹಲದಿಂದ ಗಮನಿಸುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next