ಲಾಕ್ ಡೌನ್ ನಲ್ಲಿ ಮನೆಯಲ್ಲಿ ಕೂತು ಜೀವನದ ಅತ್ಯಂತ ಉದಾಸೀನದ ದಿನಗಳನ್ನು ಕಳೆದು ಯಾವಾಗ ಲಾಕ್ ಡೌನ್ ಮುಗಿಯುತ್ತದೆ ಅನ್ನುವ ಮಟ್ಟಗೆ ಬಂದಿದ್ದೇವೆ. ಈ ನಡುವೆ ಎಲ್ಲವನ್ನೂ ಸಹಿಸಿಕೊಂಡು, ತಮ್ಮನ್ನು ತಾವು ತಾಳ್ಮೆಯಿಂದ ಇರಿಸಿ ನಮ್ಮೆಲ್ಲರ ಪ್ರಶಂಸೆಗೆ ಪಾತ್ರರಾಗಿರುವವರು ಅಂದ್ರೆ ಅವರು ಕೋವಿಡ್ ವಾರಿಯರ್ಸ್ ಗಳು. ಅವರ ಸೇವೆ, ಸಹಕಾರ, ಸಲಹೆಗಳಿಲ್ಲದಿದ್ರೆ ಇವತ್ತಿನವರೆಗೂ ಕೋವಿಡ್ ಮಹಾಮಾರಿಗೆ ತಲೆ ತಗ್ಗಿಸಿಕೊಂಡೇ ಕೂರಬೇಕಾಗಿತ್ತು.
ಲಾಕ್ ಡೌನ್ ಸಮಯದಲ್ಲಿ ಒಂದಿಷ್ಟು ಜನ ಮಾನವೀಯತೆಗೆ ಮಿಡಿದಿದ್ದಾರೆ. ಕಾರ್ಮಿಕರಿಗೆ, ನಿರ್ಗತಿಕರಿಗೆ, ಬಡ ಕುಟುಂಬಗಳಿಗೆ ಸೇವೆ ಮಾಡಿ ಸೈ ಎನ್ನಿಸಿಕೊಂಡ ಎಷ್ಟೋ ಜನರು ಕಷ್ಟ ಕಾಲದ ಅಪತ್ಭಾಂಧವರು.
ಶಾಲೆಗಳು ಯಾವಾಗ ಆರಂಭವಾಗುತ್ತವೆ ಎನ್ನುವುದು ಸದ್ಯ ಮಕ್ಕಳಲ್ಲಿ ಹಾಗೂ ಪೋಷಕರಲ್ಲಿ ಇರುವ ಪ್ರಶ್ನೆ. ಒಂದಿಷ್ಟು ಪೋಷಕರು ಎಲ್ಲವೂ ಸರಿಯಾದ್ಮೇಲೆ ಶುರುವಾಗಲಿ ಅನ್ನುವವರಾದ್ರೆ,ಇನ್ನೊಂದಿಷ್ಟು ಶಾಲೆಗಳು ಈಗಾಗಲೇ ಆನ್ಲೈನ್ ತರಗತಿಗಳನ್ನು ಪ್ರಾರಂಭಿಸಿದ್ದಾರೆ. ಈ ಆನ್ಲೈನ್ ಪಾಠ ಕೈ ಬಿಸಿ ಇರುವ ವರ್ಗಕ್ಕೆ ಮಾತ್ರ ಸುಲಭವಾಗಿ ದಕ್ಕುತ್ತದೆ. ಇಲ್ಲದವರು ಶಾಲಾ ಪ್ರಾರಂಭಕ್ಕೆ ಎದುರು ನೋಡುತ್ತಾ ಕೂರಬೇಕು.
ಲಾಕ್ ಡೌನ್ ಸಮಯದಲ್ಲಿ ಬಿಹಾರದ ಇಬ್ಬರು ಪೊಲೀಸ್ ಸಿಬ್ಬಂದಿಗಳಿಗೆ ರೈಲ್ವೇ ಕ್ಯಾಬಿನ್ ನಲ್ಲಿ ಕರ್ತವ್ಯ ಇತ್ತು. ಸಚಿನ್ ಬಿಸ್ವಾನ್ ಹಾಗೂ ಕೊಂಡನ್ ಇಬ್ಬರು ಪ್ರತಿ ದಿನ ಕೆಲಸ ನಿರ್ವಹಿಸುವಾಗ ಒಂದು ದಿನ ಅಲ್ಲೇ ಪಕ್ಕದ ಸ್ಲಂ ಒಂದರ ಒಂದಿಷ್ಟು ಮಕ್ಕಳು ಅಲೆದಾಡುವುದನ್ನು ನೋಡುತ್ತಾರೆ. ಒಂದು ದಿನ ಅದೇ ಮಕ್ಕಳು ಪೊಲೀಸರೊಂದಿಗೆ ಮಾತನಾಡಲು ಬರುತ್ತಾರೆ. ಆ ಮಾತು ಕೇಳಿ ಇಬ್ಬರು ಪೊಲೀಸ್ ಸಿಬ್ಬಂದಿಗಳ ಮನಸ್ಸು ಕರಗುತ್ತದೆ.
ಸ್ಲಂ ನಲ್ಲಿ ವಾಸವಾಗುವ ಮಕ್ಕಳು ಲಾಕ್ ಡೌನ್ ಕಾರಣದಿಂದ ಶಾಲೆಯ ಶಿಕ್ಷಣದಿಂದ ವಂಚಿತರಾಗಿ ಮನೆಯಲ್ಲೇ ಕೂರುವ ಪರಿಸ್ಥಿತಿ ಬರುತ್ತದೆ. ಆನ್ಲೈನ್ ಶಿಕ್ಷಣವನ್ನು ಪಡೆಯಲು ಅರ್ಹರಾಗದ ಕುಟುಂಬ ಪರಿಸ್ಥಿತಿಯಿಂದ ಬಂದ ಮಕ್ಕಳು ನೇರವಾಗಿ ಪೊಲೀಸ್ ಸಿಬ್ಬಂದಿಗಳ ಜೊತೆ ” ನಮಗೆ ಕಲಿಯುವ ಮನಸ್ಸು ಇದೆ, ಕಲಿಸಿ ಕೊಡುವ ಜನರಿಲ್ಲ, ನೀವು ನಮಗೆ ದಯವಿಟ್ಟು ಕಲಿಸುತ್ತೀರ” ಎಂದು ಮನವಿ ಮಾಡುತ್ತಾರೆ. ಬಡ ಮಕ್ಕಳ ಮನವಿಗೆ ಇಬ್ಬರು ಸಿಬ್ಬಂದಿಗಳು ಏನಾದ್ರು ಮಾಡಬೇಕೆನ್ನುವ ನಿರ್ಧಾರ ಮಾಡುತ್ತಾರೆ.
ಮಕ್ಕಳ ಮನವಿಗೆ ಒಪ್ಪಿದ ಸಿಬ್ಬಂದಿಗಳು, ಮರು ದಿನದಿಂದಲೇ ರೈಲ್ವೇ ಹಳಿ ಪಕ್ಕದಲ್ಲಿರುವ ಖಾಲಿ ಜಾಗದಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ತಮ್ಮ ಖರ್ಚಿನಿಂದ ಪೆನ್, ಪೆನ್ಸಿಲ್,ಪುಸ್ತಕವನ್ನು ಕೊಟ್ಟು ಅಕ್ಷರಾಭ್ಯಾಸ ಮಾಡಿಸಲು ಶುರು ಮಾಡುತ್ತಾರೆ. ದಿನದ ಎಂಟು ಗಂಟೆಯ ತಮ್ಮ ಕಾಯಕದಲ್ಲಿ ಮಕ್ಕಳಿಗಾಗಿ ಒಂದೆರೆಡು ಗಂಟೆ ಕೆಲಸದೊಟ್ಟಿಗೆ ಬಡ ಮಕ್ಕಳಿಗೆ ಶಿಕ್ಷಣವನ್ನು ನೀಡುತ್ತಾರೆ. ಮಕ್ಕಳಿಗೆ ಪಾಠ ಹೇಳಿ ಕೊಡುವ ವಿಡಿಯೋ ಇತ್ತೀಚೆಗೆ ವೈರಲ್ ಆಗಿತ್ತು.
ವಿಡಿಯೋ ವೈರಲ್ ಆದ ಕೂಡಲೇ ಉನ್ನತ ಅಧಿಕಾರಿ ಸ್ವತಃ ಎರಡು ಸಿಬ್ಬಂದಿಗಳಿಗೆ ಕರೆ ಮಾಡಿ ಮಾನವೀಯ ಕಾರ್ಯವನ್ನು ಶ್ಲಾಘಿಸಿದ್ದಾರೆ. ಜೊತೆಗೆ ಉನ್ನತ ಅಧಿಕಾರಿ ಮಕ್ಕಳ ಸರ್ವ ಖರ್ಚನ್ನು ನಿಭಾಯಿಸುವ ಭರವಸೆ ನೀಡಿದ್ದಾರೆ..
ಸದ್ಯ ಬಿಹಾರದ ಬಾಗ್ಲಾಪುರದ ನಾತ್ ನಗರ ಠಾಣಾ ವ್ಯಾಪ್ತಿಯ ರೈಲ್ವೆ ಕ್ಯಾಬಿನ್ ಪಕ್ಕದ ಜಾಗ ಸಣ್ಣ ಶಾಲೆಯಂತೆ ಸೃಷ್ಟಿಯಾಗಿದೆ. ಪ್ರಾರಂಭದಲ್ಲಿ ಮೂರು ಜನರಿದ್ದ ಮಕ್ಕಳ ಸಂಖ್ಯೆ ಈಗ ಹದಿನೈದು ಜನರವರೆಗೆ ತಲುಪಿದೆ. ಇವರಿಗೆಲ್ಲಾ ಕರ್ತವ್ಯದೊಟ್ಟಿಗೆ ಪಾಠವನ್ನು ಹೇಳಿಕೊಡುತ್ತಿರುವ ಪೊಲೀಸ್ ಸಿಬ್ಬಂದಿಗಳ ಸೇವೆ ನಿಜಕ್ಕೂ ಶ್ಲಾಘನೀಯ..
– ಸುಹಾನ್ ಶೇಕ್