ನವದೆಹಲಿ: 2018ರ ಸಾಲಿನ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ(ನೀಟ್)ಯ ಫಲಿತಾಂಶ ಸೋಮವಾರ ಪ್ರಕಟವಾಗಿದ್ದು, ಬಿಹಾರ ಮೂಲದ ಕಲ್ಪನಾ ಕುಮಾರಿ ಮೊದಲ ರಾಂಕ್ ಪಡೆದಿದ್ದಾರೆ.
ಕಲ್ಪನಾ ಕುಮಾರಿ ಅವರು 720ರಲ್ಲಿ 691 ಅಂಕ ( ಶೇ.99.99) ಪಡೆಯುವ ಮೂಲಕ ಸಿಬಿಎಸ್ ಇ ನೀಟ್ ಪರೀಕ್ಷೆಯಲ್ಲಿ ಟಾಪರ್ ಆಗಿ ಹೊರಹೊಮ್ಮಿದ್ದಾರೆ. ಭೌತಶಾಸ್ತ್ರದಲ್ಲಿ 171(180ರಲ್ಲಿ) ಅಂಕ, ರಸಾಯನ ಶಾಸ್ತ್ರ 160(180ರಲ್ಲಿ), ಜೀವಶಾಸ್ತ್ರ ಮತ್ತು ಪ್ರಾಣಿಶಾಸ್ತ್ರದಲ್ಲಿ 360ರಲ್ಲಿ 360 ಅಂಕ ಗಳಿಸಿದ್ದಾರೆ.
ತೆಲಂಗಾಣದ ರೋಹನ್ ಪುರೋಹಿತ್ ಹಾಗೂ ದೆಹಲಿಯ ಹಿಮಾಂಶು ಶರ್ಮಾ 690 ಅಂಕ ಗಳಿಸಿ ದ್ವಿತೀಯ ರಾಂಕ್ ಪಡೆದಿದ್ದು, ದೆಹಲಿಯ ಆರೋಷ್ ಧಾಮಿಜಾ ಹಾಗೂ ರಾಜಸ್ಥಾನದ ಪ್ರಿನ್ಸ್ ಚೌಧರಿ 686 ಅಂಕ ಪಡೆದು ತೃತೀಯ ರಾಂಕ್ ಗಳಿಸಿದ್ದಾರೆ. ವರುಣ್ ಮುಪ್ಪಿಡಿ 685 ಅಂಕ ಗಳಿಸಿ ನಾಲ್ಕನೇ ರಾಂಕ್ ಪಡೆದಿದ್ದಾರೆ.
ಪ್ರಸಕ್ತ ಸಾಲಿನಲ್ಲಿ ಒಟ್ಟು 13.36 ಲಕ್ಷ ಅಭ್ಯರ್ಥಿಗಳು ಯುಪಿಎಸ್ ಸಿ ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದರು. ಇದು ಕಳೆದ ವರ್ಷಕ್ಕಿಂತ ಶೇ.16.49ರಷ್ಟು ಹೆಚ್ಚಳ. ಇದರಲ್ಲಿ 12.69 ಲಕ್ಷ ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. 7.14 ಲಕ್ಷ ಅಭ್ಯರ್ಥಿಗಳು ತೇರ್ಗಡೆ ಹೊಂದಿದ್ದಾರೆ.
ಉತ್ತರಪ್ರದೇಶದ 76,778 ಅಭ್ಯರ್ಥಿಗಳು ಪರೀಕ್ಷೆಯಲ್ಲಿ ಪಾಸ್ ಆಗಿದ್ದಾರೆ. ಅದೇ ರೀತಿ ಕೇರಳದ 72 ಸಾವಿರ ಹಾಗೂ ಮಹಾರಾಷ್ಟ್ರದ 70 ಸಾವಿರ ಅಭ್ಯರ್ಥಿಗಳು ತೇರ್ಗಡೆಯಾಗಿದ್ದಾರೆ.
ಸೆಂಟ್ರಲ್ ಬೋರ್ಡ್ ಸೆಕೆಂಡರಿ ಎಜುಕೇಷನ್(ಸಿಬಿಎಸ್ ಇ) ಮೇ 6ರಂದು 136 ನಗರಗಳಲ್ಲಿ ಒಟ್ಟು 11 ಭಾಷೆಯಲ್ಲಿ ಪರೀಕ್ಷೆ ನಡೆಸಿತ್ತು. ಸರ್ಕಾರಿ ಅಥವಾ ಖಾಸಗಿ ವೈದ್ಯಕೀಯ ಕಾಲೇಜ್‍ಗಳಲ್ಲಿ ಯಾವುದೇ ಪದವಿ ವೈದ್ಯಕೀಯ ಕೋರ್ಸ್ (ಎಮ್‍ಬಿಬಿಎಸ್/ದಂತವೈದ್ಯಕೀಯ ಕೋರ್ಸ್ ಬಿಡಿಎಸ್) ಅಥವಾ ಸ್ನಾತಕೋತ್ತರ ಕೋರ್ಸ್ (ಎಮ್‍ಡಿ, ಎಮ್‌ಎಸ್) ಅಭ್ಯಸಿಸಲು ಬಯಸುವ ವಿದ್ಯಾರ್ಥಿಗಳಿಗೆ ನಡೆಸುವ ಪರೀಕ್ಷೆ ಇದಾಗಿದೆ.