Advertisement

ಬಿಹಾರ ಚುನಾವಣೆ: 71 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ, ಕಣದಲ್ಲಿ 1066 ಅಭ್ಯರ್ಥಿಗಳು

08:40 AM Oct 28, 2020 | Mithun PG |

ಬಿಹಾರ: ಬಿಹಾರ ವಿಧಾನಸಭೆ ಚುನಾವಣೆಯ ಪ್ರಥಮ ಹಂತದ ಮತದಾನ ಇಂದು ನಡೆಯುತ್ತಿದ್ದು,  ಬೆಳಗ್ಗೆ 7 ಗಂಟೆಯಿಂದ 71 ಕ್ಷೇತ್ರಗಳಲ್ಲಿ ಮತದಾನ ಪ್ರಕ್ರಿಯೆ ಆರಂಭಗೊಂಡಿದೆ.  ಮೊದಲ ಹಂತದಲ್ಲಿ ಸುಮಾರು 1,066 ಅಭ್ಯರ್ಥಿಗಳು ಕಣದಲ್ಲಿದ್ದು, 2 ಕೋಟಿಗೂ ಅಧಿಕ ಮಂದಿ ಇಂದು ಮತ ಚಲಾಯಿಸಲಿದ್ದಾರೆ.

Advertisement

ಮೊದಲ ಹಂತದಲ್ಲಿ ಸುಮಾರು 1.01 ಕೋಟಿ ಮಹಿಳಾ ಮತದಾರರಿದ್ದು, 599 ತೃತೀಯ ಲಿಂಗಿಗಳಿದ್ದಾರೆಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ. 71 ವಿಧಾನಸಭಾ ಕ್ಷೇತ್ರಗಳಲ್ಲಿ 952 ಮಂದಿ ಪುರುಷ ಮತ್ತು 114 ಮಹಿಳಾ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಗಯಾ ಕ್ಷೇತ್ರದಲ್ಲಿ ಅತೀ ಹೆಚ್ಚು ಎಂದರೆ, 27 ಅಭ್ಯರ್ಥಿಗಳು ಸ್ಪರ್ಧಿಸಿದ್ದರೆ ಕಾಟೋರಿಯಾ ಕ್ಷೇತ್ರದಲ್ಲಿ ಅತಿ ಕಡಿಮೆ ಎಂದರೆ ಐವರು ಅಭ್ಯರ್ಥಿಗಳು ಸ್ಪರ್ಧೆಗಿಳಿದಿದ್ದಾರೆಂದು ತಿಳಿದುಬಂದಿದೆ.

ಚುನಾವಣೆಗೆ ಕೋವಿಡ್ ಭೀತಿಯೂ ಕಾಡುತ್ತಿದ್ದು, ಮತದಾನ ಮತ್ತು ಮತ ಎಣಿಕೆಯ ಸಮಯದಲ್ಲಿ ಕೋವಿಡ್ -19 ಮಾರ್ಗಸೂಚಿಗಳನ್ನು ಅನುಸರಿಸುವಂತೆ ಚುನಾವಣಾ ಆಯೋಗವು ಎಲ್ಲಾ ಮತಗಟ್ಟೆಗಳಿಗೆ ನಿರ್ದೇಶನ ನೀಡಿದೆ.  ಒಂದು ಮತಗಟ್ಟೆಯಲ್ಲಿ ಗರಿಷ್ಠ ಸಂಖ್ಯೆಯ ಮತದಾರರ ಸಂಖ್ಯೆಯನ್ನು 1,600 ರಿಂದ 1,000ಕ್ಕೆ ಇಳಿಸಲಾಗಿದೆ, 80 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಪೋಸ್ಟರ್ ಕಾರ್ಡ್ ಮೂಲಕ ಮತದಾನ ಮಾಡುವುದಕ್ಕೆ ಅನುಮತಿ ನೀಡಲಾಗಿದೆ.

ಮಾತ್ರವಲ್ಲದೆ ಮತ ಯಂತ್ರವನ್ನು ಸ್ಯಾನಿಟೈಸ್ ಮಾಡುವುದು, ಕಡ್ಡಾಯವಾಗಿ ಮಾಸ್ಕ್ ಧರಿಸುವುದು, ಥರ್ಮಲ್ ಸ್ಕ್ರೀನಿಂಗ್  ಮತ್ತು ಮತಗಟ್ಟೆಯಲ್ಲಿ ನೀರಿನ ವ್ಯವಸ್ಥೆ ಕಲ್ಪಿಸಲು ಸೂಚಿಸಿದೆ. ಪ್ರಮುಖವಾಗಿ ಮತದಾನ ಸಂದರ್ಭದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಕಡ್ಡಾಯವಾಗಿ ಸೂಚಿಸಿದೆ.

Advertisement

ಈ ಚುನಾವಣೆಯಲ್ಲಿ  ಆರ್‌ಜೆಡಿ, ಕಾಂಗ್ರೆಸ್, ಸಿಪಿಐ, ಸಿಪಿಐ (ಎಂ) ಮತ್ತು ಸಿಪಿಐ (ಎಂಎಲ್) ಗಳನ್ನು ಒಳಗೊಂಡ ಪ್ರತಿಪಕ್ಷದ ಮಹಾ ಮೈತ್ರಿಕೂಟವು ಜೆಡಿಯು, ಬಿಜೆಪಿ, ವಿಕಾಸ್ಸೀಲ್ ಇನ್ಸಾನ್ ಪಾರ್ಟಿ ಮತ್ತು ಹಿಂದೂಸ್ತಾನಿ ಅವಮ್ ಮೋರ್ಚಾ ಒಳಗೊಂಡ ಆಡಳಿತಾರೂಢ ಎನ್‌ಡಿಎಯನ್ನು ಎದುರಿಸಲಿದೆ. ಆರ್‌ಜೆಡಿಯ ತೇಜಶ್ವಿ ಯಾದವ್ ಪ್ರತಿಪಕ್ಷದ ಮಹಾಘಟಬಂಧನ್ ಮುಖ್ಯಮಂತ್ರಿ ಅಭ್ಯರ್ಥಿಯಾಗಿದ್ದರೆ, ಮುಖ್ಯಮಂತ್ರಿ ಮತ್ತು ಜೆಡಿಯು ಅಧ್ಯಕ್ಷ ನಿತೀಶ್ ಕುಮಾರ್ ಅವರು ತಮ್ಮ ಹುದ್ದೆಯನ್ನು ಉಳಿಸಿಕೊಳ್ಳಲು ಆಡಳಿತ ಮೈತ್ರಿಕೂಟಕ್ಕಾಗಿ ಹೋರಾಡಲಿದ್ದಾರೆ.

ಮತದಾನಕ್ಕೆ ಮುಂಚಿತವಾಗಿ ರಂಗಾಬಾದ್‌ನ ಧಿಬ್ರಾ ಪ್ರದೇಶದಲ್ಲಿ  ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಸುಧಾರಿತ ಎರಡು ಸ್ಫೋಟಕಗಳನ್ನು (ಐಇಡಿ)  ವಶಪಡಿಸಿಕೊಂಡು ನಿಷ್ಕ್ರಿಯಗೊಳಿಸಿದೆ.

ಚುನಾವಣೆ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿದ ಪ್ರಧಾನಿ ನರೇಂದ್ರ ಮೋದಿ, ಬಿಹಾರ ವಿಧಾನಸಭಾ ಚುನಾವಣೆಯ ಮೊದಲ ಸುತ್ತಿನ ಮತದಾನ ಆರಂಭವಾಗಿದ್ದು, ಕ್ಷೇತ್ರದ ಪ್ರತಿಯೊಬ್ಬರು ಕೂಡ ತಮ್ಮ ಹಕ್ಕು ಚಲಾಯಿಸಬೇಕು. ಎಲ್ಲಾ ಮತದಾರರು ಕೋವಿಡ್‌ಗೆ ಸಂಬಂಧಿಸಿದ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡು ಈ ಪ್ರಜಾಪ್ರಭುತ್ವದ ಉತ್ಸವದಲ್ಲಿ ಭಾಗಿಯಾಗಬೇಕು.  ಮತದಾನದ ಸಂದರ್ಭದಲ್ಲಿ ಜನರು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಕಡ್ಡಾಯವಾಗಿ ಮಾಸ್ಕ್ ಧರಿಸಬೇಕೆಂದು ಕೋರಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next