ನವದೆಹಲಿ: ನೆಟ್‌ಫ್ಲಿಕ್ಸ್ ನಲ್ಲಿ ಇತ್ತೀಚೆಗೆ ತೆರೆಗೆ ಬಂದಿರುವ ʼಖಾಕಿʼ ವೆಬ್ ಸೀರಿಸ್ ಗಮನ ಸೆಳೆಯುತ್ತಿದೆ. ಐಪಿಎಸ್ ಅಧಿಕಾರಿ ಅಮಿತ್ ಲೋಧಾ ಅವರು ಬರೆದಿರುವ ʼಬಿಹಾರ್ ಡೈರಿಸ್ʼ ಕೃತಿಯಿಂದ ಪ್ರೇರಣೆಗೊಂಡು ʼಖಾಕಿʼ ವೆಬ್ ಸಿರೀಸನ್ನು ಮಾಡಲಾಗಿದ್ದು, ಮತ್ತೊಂದು ವಿಚಾರಕ್ಕೆ ಅಮಿತ್ ಲೋಧಾ ಅವರು ಸುದ್ದಿಯಾಗಿದ್ದಾರೆ.
ಬಿಹಾರ ಪೊಲೀಸ್‌ನ ಆರ್ಥಿಕ ಅಪರಾಧ ವಿಭಾಗ ದೂರು ದಾಖಲಿಸಿ, ಲೋಧಾ ಅವರು ಐಪಿಎಸ್ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವಾಗ ನೆಟ್‌ಫ್ಲಿಕ್ಸ್ ಮತ್ತು ಪ್ರೊಡಕ್ಷನ್ ಹೌಸ್ ಫ್ರೈಡೇ ಸ್ಟೋರಿ ಟೆಲ್ಲರ್ ಜೊತೆ ಒಪ್ಪಂದ ಮಾಡಿಕೊಂಡಿದ್ದಾರೆ. ಪ್ರೂಡಕ್ಷನ್ ಹೌಸ್ ನೊಂದಿಗೆ ಲೋಧಾ ಅವರು 1 ರೂ. ಗೆ ಮಾತ್ರ ಡೀಲ್ ಮಾಡಿಕೊಂಡಿದ್ದಾರೆ. ಆದರೆ ಲೋಧಾ ಅವರ ಪತ್ನಿ ಖಾತೆಯಲ್ಲಿ 49 ಲಕ್ಷ ರೂ. ವ್ಯವಹಾರ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ.
ಪೊಲೀಸ್ ಸೇವೆಯಲ್ಲಿ ಇರುವಾಗಲೇ ಅಮಿತ್ ಲೋಧಾ ತಮ್ಮ ಲಾಭಕ್ಕಾಗಿ ಪ್ರೂಡಕ್ಷನ್ ಹೌಸ್ ನೊಂದಿಗೆ ಲಕ್ಷಾಂತರ ರೂ. ಡೀಲ್ ಮಾಡಿಕೊಂಡು ಹಣ ಪಡೆದುಕೊಂಡಿದ್ದಾರೆಂದು ಐಪಿಸಿ ಸೆಕ್ಷನ್ 120(ಬಿ) ಸೇರಿದಂತೆ ಹಲವು ಸೆಕ್ಷನ್ ಗಳ ಅಡಿಯಲ್ಲಿ ಭ್ರಷ್ಟಾಚಾರ ಹಾಗೂ ಇತರ ದೂರು ದಾಖಲಿಸಿದ್ದಾರೆ.
ಒಪ್ಪಂದ ಅಂತಿಮಗೊಳಿಸುವ ಮುನ್ನವೇ ಲೋಧಾ ಪತ್ನಿ ಖಾತೆಯಲ್ಲಿನ ಹಣವನ್ನು ವಿಥ್ ಡ್ರಾ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ʼಖಾಕಿ ದಿ ಬಿಹಾರ್ ಚಾಪ್ಟರ್ʼ ಪೊಲೀಸರು ನಟೋರಿಯಸ್ ಗ್ಯಾಂಗ್‌ಸ್ಟರ್ ವೊಬ್ಬನನ್ನು ಪತ್ತೆ ಹಚ್ಚುವ ಕಥೆಯನ್ನು ಒಳಗೊಂಡಿದೆ.