ಪಾಟ್ನಾ: ಅಕ್ರಮ ಮರಳು ಸಾಗಾಟವನ್ನು ತಡೆಯಲು ಹೋಗಿದ್ದ ಪೊಲೀಸ್ ಅಧಿಕಾರಿಯ ಮೇಲೆಯೇ ಟ್ರ್ಯಾಕ್ಟರ್ ಹರಿಸಿರುವ ಘಟನೆ ಬಿಹಾರದ ಜಮುಯಿಯ ಮಹುಲಿಯಾ ತಾಂಡ್ ಗ್ರಾಮದಲ್ಲಿ ಮಂಗಳವಾರ(ನ.14 ರಂದು) ನಡೆದಿದೆ.
ಮಂಗಳವಾರ ಬೆಳಗ್ಗೆ ಜಮುಯಿ ಜಿಲ್ಲೆಯ ಗರ್ಹಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮ ಮರಳು ಮಾಫಿಯಾ ನಡೆಯುತ್ತಿತ್ತು. ಈ ಸಂಬಂಧ ಮಾಹಿತಿ ಪಡೆದ ಪೊಲೀಸರು ಮರಳು ಮಾಫಿಯಾ ಅಡ್ಡೆಗೆ ದಾಳಿ ನಡೆಸಿದ್ದರು.
ಕಾರ್ಯಾಚರಣೆಯಲ್ಲಿ ಸಬ್ ಇನ್ಸ್ ಪೆಕ್ಟರ್ ಪ್ರಭಾತ್ ರಂಜನ್(28) ಕೂಡ ಇದ್ದರು. ಮರಳು ತುಂಬಿದ ಟ್ರ್ಯಾಕ್ಟರ್ ವೊಂದನ್ನು ತಡೆಯಲು ಹೋದಾಗ ಚಾಲಕ ಪ್ರಭಾತ್ ಅವರ ಮೇಲೆಯೇ ವಾಹನವನ್ನು ಹರಿಸಿ ಪರಾರಿ ಆಗಿದ್ದಾನೆ.
ಗಂಭೀರ ಗಾಯಗೊಂಡಿದ್ದ ಪ್ರಭಾತ್ ಅವರನ್ನು ಆಸ್ಪತ್ರೆಗೆ ದಾಖಲು ಮಾಡಿದ್ದರೂ, ಚಿಕಿತ್ಸೆ ಫಲಿಸದೆ ಅವರು ಮೃತಪಟ್ಟಿದ್ದಾರೆ. ಘಟನೆಯಲ್ಲಿ ಮತ್ತೊಬ್ಬ ಪೊಲೀಸ್ ಅಧಿಕಾರಿ ರಾಜೇಶ್ ಕುಮಾರ್ ಸಾವೋ ಗಾಯಗೊಂಡಿದ್ದಾರೆ.
ಮಂಗಳವಾರ ಮುಂಜಾನೆ ನಡೆಸಿದ ಕಾರ್ಯಾಚರಣೆ ವೇಳೆ ಈ ಘಟನೆ ನಡೆದಿದೆ. ಈ ಸಂಬಂಧ ಟ್ರ್ಯಾಕ್ಟರ್ ನ್ನು ವಶಪಡಿಸಿಕೊಂಡಿದ್ದು, ಚಾಲಕನನ್ನು ಗುರುತಿಸಲಾಗಿದೆ. ಶೀಘ್ರದಲ್ಲಿ ಆತನನ್ನು ಬಂಧಿಸಲು ವಿಶೇಷ ತಂಡವನ್ನು ರಚಿಸಲಾಗಿದೆ ಎಂದು ಜಮುಯಿ ಎಸ್ಪಿ, ಶೌರ್ಯ ಸುಮನ್ ಹೇಳಿದ್ದಾರೆ.