ಪಟ್ನಾ : “ನನ್ನ ಟೀಕಾಕಾರರಿಗೆ ನಾನು ಸರಿಯಾದ ಸಮಯದಲ್ಲಿ ಉತ್ತರ ನೀಡುತ್ತೇನೆ’ ಎಂದು ಬಿಹಾರದಲ್ಲಿನ ಜೆಡಿಯು-ಬಿಜೆಪಿ ಮೈತ್ರಿ ಕೂಟದ ನೂತನ ಮುಖ್ಯಮಂತ್ರಿಯಾಗಿ ಇಂದು ಗುರುವಾರ ಬೆಳಗ್ಗೆ ಪ್ರಮಾಣ ವಚನ ಸ್ವೀಕರಿಸಿದ ನಿತೀಶ್ ಕುಮಾರ್ ಹೇಳಿದ್ದಾರೆ.
ಈ ನಡುವೆ ಪ್ರಧಾನಿ ನರೇಂದ್ರ ಮೋದಿ ಅವರು ಬಿಹಾರದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿರುವ ನಿತೀಶ್ ಕುಮಾರ್ ಅವರನ್ನು ಅಭಿನಂದಿಸಿ ಬಿಹಾರದಲ್ಲಿ ಮಹತ್ತರ ಅಭಿವೃದ್ಧಿಯನ್ನು ಜೆಡಿಯ-ಬಿಜೆಪಿ ಮೈತ್ರಿಕೂಟ ಸಾಧಿಸಲಿದೆ ಎಂದು ಹೇಳಿದ್ದಾರೆ.
“ಬಿಹಾರ ಮಹಾಜನತೆಯ ಹಿತಾಸಕ್ತಿಯಲ್ಲಿ ನಾನು ಬಿಜೆಪಿ ಜತೆಗೂಡಿ ಸರಕಾರ ರೂಪಿಸುವ ನಿರ್ಧಾರವನ್ನು ಕೈಗೊಂಡೆ’ ಎಂದಿರುವ ನಿತೀಶ್ ಕುಮಾರ್, “ಸೂಕ್ತ ಕಾಲ ಒದಗಿದಾಗ ನಾನು ನನ್ನ ಎಲ್ಲ ಟೀಕಾಕಾರರಿಗೆ ಸರಿಯಾದ ಉತ್ತರ ನೀಡುತ್ತೇನೆ’ ಎಂದು ಹೇಳಿದರು.
ಇದೇ ವೇಳೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು “ವಿರೋಧ ಪಕ್ಷಗಳ ಸರಕಾರ ಇರುವ ರಾಜ್ಯಗಳನ್ನೆಲ್ಲ ಬುಡಮೇಲು ಮಾಡುವ ಎಲ್ಲ ತಂತ್ರಗಳನ್ನು ಬಿಜೆಪಿ ಯತ್ನಿಸುತ್ತಿದೆ’ ಎಂದು ಆರೋಪಿಸಿದರು.
ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು “ನಿತೀಶ್ ಅವರ ಈ ನಡೆಯ ಬಗ್ಗೆ ನಮಗೆ ಕಳೆದ ಮೂರು – ನಾಲ್ಕು ತಿಂಗಳಿಂದಲೇ ಸಂಶಯ ಇತ್ತು; ಅದೀಗ ನಿಜವಾಗಿದೆ’ ಎಂದು ಹೇಳಿದ್ದಾರೆ.
ರಾಂಚಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಲಾಲು ಪ್ರಸಾದ್ ಯಾವ್ ಅವರು “ಮೇವು ಹಗರಣದ ವಿಚಾರಣೆಯ ಬಳಿಕ ನಾನು ಮಾತನಾಡುತ್ತೇನೆ’ ಎಂದು ಹೇಳಿದರು.
ಬಿಹಾರದಲ್ಲಿ ಮಹಾ ಘಟಬಂಧನಕ್ಕೆ ಜನಾದೇಶ ಸಂದಿರುವುದು ಕೋಮು ಶಕ್ತಿಗಳ ವಿರುದ್ಧ ಹೋರಾಡುವುದಕ್ಕೆ; ಬಿಜೆಪಿ ಜತೆ ಸೇರಿ ಸರಕಾರ ರಚಿಸುವ ಮೂಲಕ ನಿತೀಶ್ ಕುಮಾರ್ ಈಗ ಅದನ್ನು ನಿರಸನಗೊಳಿಸಿದ್ದಾರೆ ಎಂದು ಆರ್‌ಜೆಡಿ ಹೇಳಿದೆ.