ನವದೆಹಲಿ: ಕೋವಿಡ್ 19 ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಜೂನ್ 8ರವರೆಗೆ ಲಾಕ್ ಡೌನ್ ವಿಸ್ತರಿಸಲಾಗುವುದು ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಸೋಮವಾರ(ಮೇ 31) ಘೋಷಿಸಿದ್ದಾರೆ.
ಇದನ್ನೂ ಓದಿ:ಸದ್ದಿಲ್ಲದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ಪ್ರಣಿತಾ..ಕನ್ನಡತಿಯ ವರಿಸಿದ ವರ ಯಾರು ?
ಕೋವಿಡ್ ಸೋಂಕು ಪ್ರಮಾಣವನ್ನು ಪರಿಶೀಲಿಸಿದ ನಂತರ ರಾಜ್ಯದಲ್ಲಿ ಇನ್ನೂ ಒಂದು ವಾರ ಲಾಕ್ ಡೌನ್ ವಿಸ್ತರಿಸಲು ನಿರ್ಧರಿಸಲಾಗಿದೆ ಎಂದು ನಿತೀಶ್ ಕುಮಾರ್ ಅವರು ಟ್ವೀಟರ್ ನಲ್ಲಿ ತಿಳಿಸಿದ್ದಾರೆ. ಆದರೆ ವ್ಯಾಪಾರಕ್ಕೆ ಹೆಚ್ಚುವರಿ ವಿನಾಯ್ತಿ ನೀಡಲಾಗಿದ್ದು, ಪ್ರತಿಯೊಬ್ಬರು ಮಾಸ್ಕ್ ಧರಿಸಬೇಕು ಮತ್ತು ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು ಎಂದು ಸೂಚಿಸಿದ್ದಾರೆ.
ಕೋವಿಡ್ 19 ಸೋಂಕು ಎರಡನೇ ಅಲೆ ಕ್ಷಿಪ್ರವಾಗಿ ಹರಡುವುದನ್ನು ತಡೆಯಲು ಮೇ 5ರಿಂದ ಬಿಹಾರದಲ್ಲಿ ಕೋವಿಡ್ 19 ನಿರ್ಬಂಧಗಳನ್ನು ಜಾರಿ ಮಾಡಲಾಗಿತ್ತು. ನಂತರ ಮೇ 13 ಮತ್ತು 24ರಂದು ನಿರ್ಬಂಧ ವಿಸ್ತರಿಸಿರುವುದಾಗಿ ವರದಿ ತಿಳಿಸಿದೆ.
ಭಾನುವಾರ ಬಿಹಾರದಲ್ಲಿ 1,475 ಕೋವಿಡ್ 19 ಪ್ರಕರಣಗಳು ಪತ್ತೆಯಾಗಿದ್ದು, 52 ಸಾವು ಸಂಭವಿಸಿತ್ತು ಎಂದು ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಅಂಕಿಅಂಶದಲ್ಲಿ ತಿಳಿಸಿದೆ. ಪ್ರಸ್ತುತ ರಾಜ್ಯದಲ್ಲಿ ಸಕ್ರಿಯ ಕೋವಿಡ್ ಪ್ರಕರಣಗಳ ಸಂಖ್ಯೆ 20,000ಕ್ಕಿಂತ ಕಡಿಮೆ ಇದೆ ಎಂದು ತಿಳಿಸಿದೆ.