ಪಾಟ್ನಾ: ಬಿಜೆಪಿ ಜತೆಗಿನ ಮೈತ್ರಿ ಕಡಿದುಕೊಂಡು ಹಳೆಯ ಮಿತ್ರ ರಾಷ್ಟ್ರೀಯ ಜನತಾ ದಳ(ಆರ್ ಜೆಡಿ)ದ ಕೈ ಹಿಡಿದಿರುವ ನಿತೀಶ್ ಕುಮಾರ್ ಮಂಗಳವಾರ (ಆಗಸ್ಟ್ 16) ತಮ್ಮ ಹೊಸ ಸರ್ಕಾರದ ಸಂಪುಟ ವಿಸ್ತರಣೆ ಮಾಡಿ ಖಾತೆಯನ್ನು ಹಂಚಿದ್ದಾರೆ.
ಮುಖ್ಯಮಂತ್ರಿ ನಿತೀಶ್ ಕುಮಾರ್ ಪ್ರಮುಖವಾದ ಗೃಹ ಖಾತೆ, ಸಾಮಾನ್ಯ ಆಡಳಿತ, ಕ್ಯಾಬಿನೆಟ್ ಸಚಿವಾಲಯ, ಚುನಾವಣೆ ಖಾತೆಯನ್ನು ಬೇರೆ ಯಾರಿಗೂ ಹಂಚದೆ, ತಮ್ಮ ಬಳಿಯೇ ಇರಿಸಿಕೊಂಡಿದ್ದಾರೆ.
ಉಪಮುಖ್ಯಮಂತ್ರಿ, ಆರ್ ಜೆಡಿ ಮುಖಂಡ ತೇಜಸ್ವಿ ಪ್ರಸಾದ್ ಯಾದವ್ ಗೆ ಆರೋಗ್ಯ, ರಸ್ತೆ ನಿರ್ಮಾಣ, ನಗರ ವಸತಿ ಮತ್ತು ಅಭಿವೃದ್ಧಿ, ಗ್ರಾಮೀಣಾಭಿವೃದ್ಧಿ ಖಾತೆಯನ್ನು ವಹಿಸಲಾಗಿದೆ. ಯಾದವ್ ಹಿರಿಯ ಸಹೋದರ ತೇಜ್ ಪ್ರತಾಪ್ ಯಾದವ್ ಗೆ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಖಾತೆ ಜವಾಬ್ದಾರಿ ನೀಡಲಾಗಿದೆ ಎಂದು ವರದಿ ವಿವರಿಸಿದೆ.
ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಸೇರಿದಂತೆ ವಿಜಯ್ ಕುಮಾರ್ ಚೌಧರಿಗೆ ಹಣಕಾಸು, ವಾಣಿಜ್ಯ ತೆರಿಗೆ ಮತ್ತು ಸಂಸದೀಯ ವ್ಯವಹಾರಗಳ ಖಾತೆ ನೀಡಲಾಗಿದೆ. ಬಿಜೇಂದ್ರ ಯಾದವ್ ಗೆ ವಿದ್ಯುತ್ ಮತ್ತು ಯೋಜನೆ, ಅಭಿವೃದ್ಧಿ ಖಾತೆ ನೀಡಲಾಗಿದೆ.
ಸಚಿವ ಸಂಪುಟ ವಿಸ್ತರಣೆಗೂ ಮಾಡುವ ಮೊದಲು,. ಮುಖ್ಯಮಂತ್ರಿ ನಿತೀಶ್ ಕುಮಾರ್ ಹಾಗೂ ಉಪಮುಖ್ಯಮಂತ್ಇ ತೇಜ್ವಿ ಯಾದವ್ ಅವರನ್ನೊಳಗೊಂಡ ಎರಡು ಸದಸ್ಯರ ಬಿಹಾರ ಸಂಪುಟವನ್ನು ವಿಸ್ತರಿಸಿ ಸುಮಾರು 31 ಸಚಿವರಿಗೆ ಖಾತೆ ಹಂಚಲಾಗಿದೆ.
ರಾಜಧಾನಿ ಪಾಟ್ನಾದ ರಾಜಭವನದಲ್ಲಿ ರಾಷ್ಟ್ರೀಯ ಜನತಾ ದಳದ 16 ಶಾಸಕರು, ಜೆಡಿಯುನ 11 ಶಾಸಕರು, ಕಾಂಗ್ರೆಸ್ ನ ಇಬ್ಬರು, ಮಾಜಿ ಸಿಎಂ ಜಿತನ್ ರಾಮ್ ಮಾಂಜಿಯ ಎಚ್ ಎಎಂ ಪಕ್ಷದ ಒಬ್ಬರು ಹಾಗೂ ಪಕ್ಷೇತರ ಒಬ್ಬರು ಪ್ರಮಾಣವಚನ ಸ್ವೀಕರಿಸಿದ್ದಾರೆ.
ಬಿಹಾರ ಸಚಿವ ಸಂಪುಟದಲ್ಲಿ ಐವರು ಮುಸ್ಲಿಂ ಸಚಿವರಿದ್ದಾರೆ. ಈ ಹಿಂದಿನ ಎನ್ ಡಿಎ ಮೈತ್ರಿ ವೇಳೆ ಕೇವಲ ಒಬ್ಬರೇ ಮುಸ್ಲಿಂ ಸಚಿವರಿದ್ದರು. ಆಗಸ್ಟ್ 9ರಂದು ಬಿಜೆಪಿ ಜತೆಗಿನ ಮೈತ್ರಿಯನ್ನು ಕಡಿದುಕೊಂಡ ಆರ್ ಜೆಡಿ ಬಳಿಕ ಆರ್ ಜೆಡಿ ಮೈತ್ರಿಕೂಟದ ಜತೆ ಜಡಿಯು ಕೈಜೋಡಿಸಿತ್ತು.