ಪಟ್ನಾ : ಒಂದೊಮ್ಮೆ ನೀವು ಬಿಹಾರದಲ್ಲಿ ಇರುವಿರಾದರೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕೈ ಎತ್ತುವ ಅಥವಾ ಬೆರಳು ತೋರಿಸುವ ಧೈರ್ಯ ಮಾಡಬೇಡಿ !
ಪ್ರಧಾನಿ ಮೋದಿ ವಿರುದ್ಧ ಕೈಅಥವಾ ಬೆರಳು ತೋರಿಸುವ ದುಸ್ಸಾಹಸ ಮಾಡುವ ಯಾವುದೇ ವ್ಯಕ್ತಿಯ ಆ ಪಾಪದ ಕೈ ಮತ್ತು ಬೆರಳನ್ನು ಕತ್ತರಿಸಲಾಗುವುದು ಎಂದು ಬಿಹಾರ ಬಿಜೆಪಿ ಅಧ್ಯಕ್ಷ ಮತ್ತು ಉಜಿಯಾರ್‌ಪುರ ಲೋಕಸಭಾ ಕ್ಷೇತ್ರದ ಸದಸ್ಯರಾಗಿರುವ ನಿತ್ಯಾನಂದ ರಾಯ್ ಗುಡುಗಿದ್ದಾರೆ.
ಪ್ರಧಾನಿ ಮೋದಿ ಅವರು ಅನೇಕಾನೇಕ ಎಡರು ತೊಡರುಗಳನ್ನು ದಾಟಿ ದೇಶವನ್ನು ಸಮರ್ಥವಾಗಿ ಸಮಗ್ರ ಪ್ರತಿಯೆಡೆಗೆ ಮುನ್ನಡೆಸುತ್ತಿರುವುದು ಯಾರಿಗೇ ಆದರೂ ಹೆಮ್ಮೆಯ ವಿಷಯವಾಗಿದೆ ಎಂದು ರಾಯ್ ಹೇಳಿದರು.
ಸಂಸದ ನಿತ್ಯಾನಂದ ರಾಯ್ ಅವರು ನಿನ್ನೆ ಸೋಮವಾರ ವೈಶ್ಯ ಮತ್ತು ಕನೂ ಸಮುದಾಯದವರ ಬೃಹತ್ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.
‘ಅತ್ಯಂತ ಬಡ ಕುಟುಂಬದಿಂದ ಬಂದ ಹೊರತಾಗಿಯೂ ನರೇಂದ್ರ ಮೋದಿ ಅವರು ಇಂದು ದೇಶದ ಪ್ರಧಾನಿಯಾಗಿದ್ದಾರೆ. ಯಾವುದೇ ಬಗೆಯ ಭಿನ್ನಮತ ಇರುವ ವ್ಯಕ್ತಿಗಳು ಕೂಡ ದೇಶದ ಉನ್ನತಿಗಾಗಿ ಮೋದಿ ನಡೆಸುತ್ತಿರುವ ಪರಿಶ್ರಮವನ್ನು ಮೆಚ್ಚಿ ಬೆಂಬಲಿಸಬೇಕು. ಅಂತಿರುವಾಗ ಮೋದಿ ಅವರನ್ನು ಅವಹೇಳನ ಮಾಡಲು ಅವರತ್ತ ಕೈ ಅಥವಾ ಬೆರಳು ತೋರಿಸುವ ವ್ಯಕ್ತಿಗಳ ಕೈ ಅಥವಾ ಬೆರಳನ್ನು ಮುರಿದು ಹಾಕಲು ನಾವೆಲ್ಲ ಜತೆಗೂಡಬೇಕು; ಒಂದೊಮ್ಮೆ ಅದನ್ನು ಕತ್ತರಿಸಿ ಹಾಕುವ ಪ್ರಮೇಯ ಬಂದರೂ ಸರಿಯೇ’ ಎಂದು ನಿತ್ಯಾನಂದ ರಾಯ್ ಹೇಳಿದರು.
ಆದರೆ ತನ್ನ ಈ ಮಾತಿನ ಹಿಂದೆ ಹಿಂಸಾತ್ಮಕ ಪ್ರವೃತ್ತಿಯ ಛಾಯೆ ಇರುವುದನ್ನು ಅರಿತ ಸಂಸದ ರಾಯ್ ಅವರು, “ನಾನು ಕೇವಲ ನನ್ನಲ್ಲಿನ ತೀವ್ರವಾದ ಭಾವನೆಯನ್ನು ವ್ಯಕ್ತಪಡಿಸಿದ್ದೇನೆ; ಕೈ ಅಥವಾ ಬೆರಳು ಕತ್ತರಿಸುವುದು ನಿಜಕ್ಕೂ ನನ್ನ ಮೂಲ ಉದ್ದೇಶವಲ್ಲ; ಆದರೆ ಪ್ರಧಾನಿಯನ್ನು ಅನಗತ್ಯ ಅವಹೇಳನ ಮಾಡುವವರಿಗೆ ಎಚ್ಚರಿಕೆ ರೂಪದ ಮಾತುಗಳನ್ನಷ್ಟೇ ನಾನು ಆಡಿದ್ದೇನೆ’ ಎಂದು ಸಮಜಾಯಿಷಿಕೆ ನೀಡಿದರು.