Advertisement

ಗರಿಗೆದರಿದ ಬಿಹಾರ ಕಣ

06:32 PM Oct 07, 2020 | mahesh |

ಪಾಟ್ನಾ: ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವಂತೆಯೇ ಬಿಹಾರದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಶನಿವಾರ ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರು ಬಿಜೆಪಿ ಅಧ್ಯಕ್ಷ ಜಗತ್‌ ಪ್ರಕಾಶ್‌ ನಡ್ಡಾ ಅವರೊಂದಿಗೆ ಮಹತ್ವದ ಸಭೆ ನಡೆಸಿದ್ದು, ಎನ್‌ಡಿಎ ಮಿತ್ರಪಕ್ಷಗಳ ನಡುವಿನ ಸೀಟು ಹಂಚಿಕೆ ಕುರಿತು ಚರ್ಚೆ ನಡೆಸಿದ್ದಾರೆ. ನಿತೀಶ್‌ ಅವರ ಜೆಡಿಯು ಹಾಗೂ ರಾಮ್‌ವಿಲಾಸ್‌ ಪಾಸ್ವಾನ್‌ ಅವರ ಎಲ್‌ಜೆಪಿ ನಡು­ವಿನ ಸಂಬಂಧ ಹದಗೆಟ್ಟಿರುವ ನಡುವೆಯೇ ಈ ಬೆಳವಣಿಗೆ ನಡೆದಿದೆ.

Advertisement

ಬಿಜೆಪಿಯ ವತಿಯಿಂದ ಉಪಮುಖ್ಯ­ಮಂತ್ರಿ ಸುಶೀಲ್‌ ಕುಮಾರ್‌ ಮೋದಿ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಭೂಪೇಂ­ದ್ರ ಯಾದವ್‌, ಪಕ್ಷದ ರಾಜ್ಯಾಧ್ಯಕ್ಷ ಸಂಜಯ್‌ ಜೈಸ್ವಾಲ್‌ ಹಾಗೂ ಜೆಡಿಯು ವತಿ­ಯಿಂದ ನಿತೀಶ್‌ ಕುಮಾರ್‌ ಹಾಗೂ ರಾಜೀವ್‌ ರಂಜನ್‌ ಸಿಂಗ್‌ ಸಭೆಯಲ್ಲಿ ಭಾಗಿ­ಯಾಗಿದ್ದರು. ಅರ್ಧ ಗಂಟೆಗೂ ಹೆಚ್ಚು ಕಾಲ ಮಾತುಕತೆ ನಡೆದಿದ್ದು, ಎನ್‌ಡಿಎ ಮಿತ್ರಪಕ್ಷ ಎಲ್‌ಜೆಪಿ(ಲೋಕ ಜನಶಕ್ತಿ ಪಾರ್ಟಿ)ಯನ್ನು ಒಳಗೊಂಡಂತೆ ಸೀಟು ಹಂಚಿಕೆ ಮಾಡುವ ಬಗ್ಗೆ ಚರ್ಚಿಸಲಾಗಿದೆ. ಜತೆಗೆ, ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ನೇತೃತ್ವದಲ್ಲೇ ಎನ್‌ಡಿಎ ಮಿತ್ರಪಕ್ಷಗಳು ಚುನಾವಣೆಯನ್ನು ಎದು­ರಿಸಲಿವೆ ಎಂದೂ ನಡ್ಡಾ ಹೇಳಿದ್ದಾರೆ.

ಭಿನ್ನಮತ ಶಮನದ ಭರವಸೆ: ಜೆಡಿಯು ಮತ್ತು ಎಲ್‌ಜೆಪಿ ನಡುವಿನ ಭಿನ್ನಮತ ಕುರಿತು ಮಧ್ಯಪ್ರವೇಶಿಸಿ, ಅದರ ಶಮನಕ್ಕೆ ಯತ್ನಿಸಲಾಗುವುದು ಎಂಬ ಭರವಸೆಯನ್ನು ನಡ್ಡಾ ನೀಡಿದ್ದಾರೆ ಎನ್ನಲಾಗಿದೆ. ಶುಕ್ರವಾರ­ವಷ್ಟೇ ಮಾತನಾಡಿದ್ದ ಬಿಹಾರದ ಬಿಜೆಪಿ ಚುನಾ­ವಣಾ ಉಸ್ತುವಾರಿ ದೇವೇಂದ್ರ ಫ‌ಡ್ನ­ವೀಸ್‌ ಅವರು, “ಎನ್‌ಡಿಎಗೆ ಎಲ್ಲರೂ ಸೇರ್ಪ­ಡೆಯಾಗುತ್ತಾರೆಯೇ ವಿನಾ ಯಾರೂ ಎನ್‌ಡಿಎ ತೊರೆದು ಹೋಗುವುದಿಲ್ಲ’ ಎಂದಿದ್ದರು.

ಆತ್ಮನಿರ್ಭರ ಬಿಹಾರ ಚುನಾವಣಾ ಗೀತೆ
ಬಿಹಾರ ಚುನಾವಣೆಗೆ ಸಂಬಂಧಿಸಿ ಬಿಜೆಪಿಯ ಚುನಾವಣಾ ಗೀತೆ ಹಾಗೂ ಉದ್ಘೋಷವನ್ನು ಶನಿವಾರ ಜೆ.ಪಿ.ನಡ್ಡಾ ಅನಾವರಣ ಮಾಡಿದ್ದಾರೆ. ಪ್ರಧಾನಿ ಮೋದಿ ಅವರ ಸ್ವಾಭಿಮಾನ ಭಾರತದ ಆಶಯವನ್ನು ಒಳಗೊಂಡ “ಜನ್‌ ಜನ್‌ ಕಿ ಪುಕಾರ್‌, ಆತ್ಮನಿರ್ಭರ್‌ ಬಿಹಾರ್‌’ ಎಂಬ ಸ್ಲೋಗನ್‌ ಹಾಗೂ ಚುನಾವಣಾ ಗೀತೆಯ ಮೂಲಕ ಎನ್‌ಡಿಎ ಮಿತ್ರಪಕ್ಷಗಳು ಪ್ರಚಾರ ಆರಂಭಿಸಲಿವೆ.

ಮಗನ ನಿರ್ಧಾರವೇ ಅಂತಿಮ: ಪಾಸ್ವಾನ್‌
ಜೆಡಿಯು ಜತೆಗಿನ ವೈಮನಸ್ಯ ಕುರಿತು ಶನಿವಾರ ಪ್ರತಿಕ್ರಿಯಿಸಿರುವ ಎಲ್‌ಜೆಪಿ ವರಿಷ್ಠ ರಾಮ್‌ವಿಲಾಸ್‌ ಪಾಸ್ವಾನ್‌, “ನನ್ನ ಮಗ(ಚಿರಾಗ್‌ ಪಾಸ್ವಾನ್‌) ಯಾವ ನಿರ್ಧಾರ ಕೈಗೊಳ್ಳುತ್ತಾನೋ, ಅದಕ್ಕೆ ನಾನು ಬದ್ಧನಾಗಿರುತ್ತೇನೆ’ ಎಂದು ಟ್ವೀಟ್‌ ಮಾಡಿದ್ದಾರೆ.  “”ಚಿರಾಗ್‌ ಇನ್ನೂ ಯುವಕ. ಅವನು ಪಕ್ಷವನ್ನು ಮತ್ತು ಬಿಹಾರವನ್ನು ಮತ್ತಷ್ಟು ಎತ್ತರಕ್ಕೆ ಏರಿಸುತ್ತಾನೆ ಎಂಬ ನಂಬಿಕೆ ನನಗಿದೆ. ಆತ ಕೈಗೊಳ್ಳುವ ನಿರ್ಧಾರವನ್ನು ನಾನು ಸ್ವಾಗತಿಸುತ್ತೇನೆ” ಎಂದೂ ಹೇಳಿದ್ದಾರೆ. ಇತ್ತೀಚೆಗಷ್ಟೇ ನಿತೀಶ್‌ ನೇತೃತ್ವದ ಜೆಡಿಯು ವಿರುದ್ಧ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ನಿರ್ಧರಿಸಲಾಗಿದ್ದು, 143 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಸಿದ್ಧಪಡಿಸಲಾಗುತ್ತಿದೆ ಎಂದು ಹೇಳುವ ಮೂಲಕ ಎಲ್‌ಜೆಪಿ ಅಚ್ಚರಿ ಮೂಡಿಸಿತ್ತು. ಅಲ್ಲದೆ, ಕೊರೊನಾ ಎದುರಿಸುವಲ್ಲಿ ಸರಕಾರ‌ದ ವೈಫ‌ಲ್ಯ, ವಲಸಿಗರ ಬಿಕ್ಕಟ್ಟು, ಕೊರೊನಾ ಕಾಲದಲ್ಲೂ ಚುನಾವಣೆ ನಡೆಸುವಿಕೆ ಸೇರಿದಂತೆ ವಿವಿಧ ವಿಚಾರಗಳಿಗೆ ಸಂಬಂಧಿಸಿ ಜೆಡಿಯು ವಿರುದ್ಧ ಎಲ್‌ಜೆಪಿ ಕಿಡಿಕಾರುತ್ತಲೇ ಬಂದಿತ್ತು.

Advertisement

ಕಾಂಗ್ರೆಸ್‌-ಆರ್‌ಜೆಡಿ ಪ್ರಚಾರ
ಪೂರ್ವ ಚಂಪಾರಣ್‌ ಮತ್ತು ಪಶ್ಚಿಮ ಚಂಪಾರಣ್‌ ಜಿಲ್ಲೆಗಳಲ್ಲಿ ಕಾಂಗ್ರೆಸ್‌ “ಬಿಹಾರ್‌ ಕ್ರಾಂತಿ ವರ್ಚುವಲ್‌ ಮಹಾಸಮ್ಮೇಳನ್‌’ ಆಯೋ­ಜಿ­ಸುವ ಮೂಲಕ ಪ್ರಚಾರಕ್ಕೆ ಚಾಲನೆ ನೀಡಿದೆ. ಜನರು ಎನ್‌ಡಿಎ ಆಡಳಿತದಿಂದ ರೋಸಿ ಹೋಗಿದ್ದು, ಬಿಹಾರದ ಜನ ಸರಕಾರ‌ ಬದ­ಲಾವಣೆಗೆ ಕಾಯುತ್ತಿದ್ದಾರೆ ಎಂದು ಕಾಂಗ್ರೆಸ್‌ ಹೇಳಿದೆ. ಇದೇ ವೇಳೆ, ಆರ್‌ಜೆಡಿ ನಾಯಕ ತೇಜ್‌ ಪ್ರತಾಪ್‌ ಯಾದವ್‌ ಹಸನ್ಪುರ ವಿಧಾನಸಭಾ ಕ್ಷೇತ್ರದಲ್ಲಿ ಬೃಹತ್‌ ರ್ಯಾಲಿ ನಡೆಸಿ, ಪ್ರಚಾರ ಆರಂಭಿಸಿದ್ದಾರೆ.

ಬಿಜೆಪಿಯು ಎನ್‌ಡಿಎ ಸಿಎಂ ಅಭ್ಯರ್ಥಿಯನ್ನಾಗಿ ಟಾಮ್‌, ಡಿಕ್‌, ಹ್ಯಾರಿ…. ಯಾರನ್ನೇ ಆಯ್ಕೆ ಮಾಡಿದರೂ ನನಗೇನೂ ಸಮಸ್ಯೆಯಿಲ್ಲ. “ಬಿಹಾರಿಗರೇ ಮೊದಲು’ ಅಭಿಯಾನ ಒಳಗೊಂಡ ಸಾಮಾನ್ಯ ಕನಿಷ್ಠ ಕಾರ್ಯಕ್ರಮವನ್ನು ಒಪ್ಪಿಕೊಳ್ಳಬೇಕು ಅಷ್ಟೆ.
ಚಿರಾಗ್‌ ಪಾಸ್ವಾನ್‌, ಎಲ್‌ಜೆಪಿ ನಾಯಕ

ಬಿಜೆಪಿ ಆತ್ಮನಿರ್ಭರ ಬಿಹಾರದ ಬಗ್ಗೆ ಮಾತಾಡುತ್ತಿದೆ. ಆದರೆ, 24 ವರ್ಷ ಗ ಳಿಂದ ಲೂ ಬಿಜೆಪಿ ಇತ ರರು ಹಾಗೂ ನಿತೀಶ್‌ ಮೇಲೆ ಅವಲಂಬಿಸಿರುವುದು ದುರಂತ.
ತೇಜಸ್ವಿ ಯಾದವ್‌, ಆರ್‌ಜೆಡಿ ನಾಯಕ

ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ನೇತೃತ್ವದಲ್ಲೇ ಎನ್‌ಡಿಎ ಮಿತ್ರಪಕ್ಷಗಳು ಚುನಾವಣೆ ಎದುರಿಸಲಿವೆ. ಆತ್ಮನಿರ್ಭರ ಬಿಹಾರವು ರಾಜ್ಯದ ಅಭಿವೃದ್ಧಿ ಅಜೆಂಡಾವನ್ನು ಮುಖ್ಯವಾಹಿನಿಗೆ ತರಲಿದೆ. ಪ್ರಧಾನಿ ಮೋದಿಯವರ ಸ್ವಾವಲಂಬಿ ಭಾರತದ ಕನಸಿಗೂ ಒತ್ತು ನೀಡಲಿದೆ.
ಜೆ.ಪಿ. ನಡ್ಡಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next