Advertisement
ನಿತೀಶ್‌ರನ್ನು ಬೆಂಬಲಿಸಿದ ಮೋದಿಒಂದು ಸಮಯದಲ್ಲಿ ನರೇಂದ್ರ ಮೋದಿಯವರ ಪ್ರಬಲ ಟೀಕಾಕಾರರಾಗಿದ್ದ ನಿತೀಶ್ ಕುಮಾರ್ ಆವರು ಈ ಬಾರಿ ಚುನಾವಣೆಯಲ್ಲಿ ಮೋದಿ ಅಲೆಯನ್ನು ಅವಲಂಬಿಸಿದ್ದಾರೆ ಎನ್ನುತ್ತಾರೆ ರಾಜಕೀಯ ವಿಶ್ಲೇಷಕರು. ಎನ್‌ಡಿಎದಿಂದ ದೂರವಾಗಿ ಕಾಂಗ್ರೆಸ್ ಹಾಗೂ ಆರ್‌ಜೆಡಿಯೊಂದಿಗೆ ಸರಕಾರ ರಚಿಸಿದ್ದ ನಿತೀಶ್, ಆ ಮೈತ್ರಿಕೂಟದಿಂದ ಹೊರಬಂದು, 2017ರಲ್ಲಿ ಬಿಜೆಪಿಯೊಂದಿಗೆ ಕೈಜೋಡಿಸಿದ್ದರು. ಈ ಬಾರಿ ನರೇಂದ್ರ ಮೋದಿಯವರು ನಿತೀಶ್ ಅವರೇ ಮೈತ್ರಿಕೂಟದ ಮುಂಚೂಣಿ ನಾಯಕರಾಗಲಿದ್ದಾರೆ ಎನ್ನುವುದನ್ನು ಪರೋಕ್ಷವಾಗಿ ಸ್ಪಷ್ಟಪಡಿಸಿದ್ದಾರೆ. ನವ ಭಾರತ ಹಾಗೂ ನವ ಬಿಹಾರದ ಗುರಿಯನ್ನು ಮುಟ್ಟುವಲ್ಲಿ ನಿತೀಶ್ ದೊಡ್ಡ ಪಾತ್ರ ವಹಿಸಿದ್ದಾರೆ ಎನ್ನುವ ಮೂಲಕ ನರೇಂದ್ರ ಮೋದಿ, ನಿತೀಶ್ ವಿರುದ್ಧ ಅಪಸ್ವರವೆತ್ತುತ್ತಿದ್ದ ಬಿಜೆಪಿ ನಾಯಕರಿಗೆ ಸ್ಪಷ್ಟ ಸಂದೇಶ ಕಳುಹಿಸಿದ್ದಾರೆ.
ಆರ್‌ಜೆಡಿಯ ನೇತೃತ್ವದಲ್ಲಿ ಮಹಾಮೈತ್ರಿಯೊಂದಿಗೆ ಚುನಾವಣೆ ಎದುರಿಸಬೇಕೇ ಬೇಡವೇ ಎನ್ನುವ ಕುರಿತು ಕಾಂಗ್ರೆಸ್, ಉಪೇಂದ್ರ ಖುಷ್ವಾಹಾರ ರಾಷ್ಟ್ರೀಯ ಲೋಕ ಸಮತಾ ಪಾರ್ಟಿ(ಆರ್‌ಎಸ್‌ಎಲ್‌ಪಿ), ಕಮ್ಯುನಿಸ್ಟ್ ಪಕ್ಷಗಳು ಯೋಚಿಸುತ್ತಿವೆ. ಈ ಪಕ್ಷಗಳೆಲ್ಲವೂ ಜಾತ್ಯತೀತ ಛಾವಣಿಯಡಿ ಒಂದಾಗಿ ಸ್ಪರ್ಧಿಸುವ ಯೋಚನೆಯಲ್ಲಿವೆಯಾದರೂ ಭಿನ್ನ ಸೈದ್ಧಾಂತಿಕ ನೆಲೆಗಟ್ಟಿನ ಈ ರಾಜಕೀಯ ಪಕ್ಷಗಳ ಆಕಾಂಕ್ಷೆಗಳೂ ಭಿನ್ನವಾಗಿದೆ. ಆರ್‌ಜೆಡಿಯ ಬೆನ್ನಿಗಿರುವ ಯಾದವರ, ಹಿಂದುಳಿದ ವರ್ಗಗಳ, ಮುಸಲ್ಮಾನರ ಮತಗಳೇ ತಮ್ಮ ಮತದಾರ ವರ್ಗ ಎಂದು ವಾದಿಸುವ ಈ ಪಕ್ಷಗಳು ವರ್ಷಗಳಿಂದ ಲಾಲೂ ಅವರ ಪಕ್ಷವನ್ನು ದುರ್ಬಲಗೊಳಿಸಲು ಪ್ರಯತ್ನಿಸುತ್ತಾ ಬಂದಿದ್ದವಾದರೂ ಈ ನಿಟ್ಟಿನಲ್ಲಿ ಯಶಸ್ವಿಯಾಗಲೇ ಇಲ್ಲ. ಹೀಗಾಗಿ, ಅನಿವಾರ್ಯವಾಗಿ ಆರ್‌ಜೆಡಿಯ ನೇತೃತ್ವವನ್ನೇ ಒಪ್ಪಿಕೊಂಡು ಮುನ್ನಡೆಯುವ ಅನಿವಾರ್ಯತೆ ಅವಕ್ಕೆ ಎದುರಾಗಿದೆ. ಆದರೆ ಈ ಎಲ್ಲ ಪಕ್ಷಗಳ ಜತೆ ಕೈಜೋಡಿಸಿದರೆ, ಕಡಿಮೆ ಸೀಟುಗಳಿಗೆ ಸ್ಪರ್ಧಿಸಬೇಕಾಗುತ್ತದೆ, ಇದರ ಬದಲು ಏಕಾಂಗಿಯಾಗಿ ಕಣಕ್ಕಿಳಿದರೆ ಹೇಗೆ ಎನ್ನುವ ಯೋಚನೆ ಆರ್‌ಜೆಡಿ ನಾಯಕ, ಮಾಜಿ ಮುಖ್ಯಮಂತ್ರಿ ತೇಜಸ್ವಿ ಯಾದವ್‌ರದ್ದು.
Related Articles
Advertisement
ತಗ್ಗಿತೇ ಚಿರಾಗ್ ಮುನಿಸು?ನಿತೀಶ್ ನೇತೃತ್ವದ ಮೈತ್ರಿ ಸರಕಾರದಲ್ಲೂ ಅಸಮಾಧಾನ, ಒಡಕು ಇರುವುದು ಗುಟ್ಟಾಗಿಯೇನೂ ಉಳಿದಿಲ್ಲ. ಅದರಲ್ಲೂ ಕಳೆದ ಒಂದು ವರ್ಷದಿಂದ ನಿತೀಶ್ ಕುಮಾರ್ ಮತ್ತು ಎಲ್‌ಜೆಪಿ ನಾಯಕ ಚಿರಾಗ್ ಪಾಸ್ವಾನ್‌ರ ಮಧ್ಯದಲ್ಲಿ ಅಂತರ ಹೆಚ್ಚಾಗಿದೆ. ಎಲ್‌ಜೆಪಿಯನ್ನು ಮೂಲೆಗುಂಪಾಗಿಸಲು ನಿತೀಶ್ ಪ್ರಯತ್ನಿಸು ತ್ತಿದ್ದಾರೆ ಎನ್ನುವ ಅಸಮಾಧಾನ ಚಿರಾಗ್‌ರದ್ದು. ಚಿರಾಗ್ ಮೈತ್ರಿಕೂಟದಿಂದ ಹೊರಬಂದು ನಿತೀಶ್ ಎದುರು ತಮ್ಮ ಪಕ್ಷವನ್ನು ಕಣಕ್ಕಿಳಿಸಲಿ ದ್ದಾರೆ ಎಂದೂ ಭಾವಿಸಲಾಗಿತ್ತು. ಆದರೆ, ಈ ಅನುಮಾನಗಳಿಗೆ ಈಗ ತೆರೆ ಎಳೆದಿರುವ ಅವರು, ತಮಗೆ ಪ್ರಧಾನಿ ಮೋದಿಯವರ ಮೇಲೆ ನಂಬಿಕೆಯಿರುವುದಾಗಿ, ಬಿಜೆಪಿ ಏನು ನಿರ್ಧಾರ ತೆಗೆದುಕೊಳ್ಳುತ್ತದೋ ಅದನ್ನು ತಾವು ಪಾಲಿಸುವುದಾಗಿ ಹೇಳಿದ್ದಾರೆ. ಆದರೆ, ಚಿರಾಗ್ ಸೀಟು ಹಂಚಿಕೆಯ ವಿಷಯದಲ್ಲಿ ನಿತೀಶ್‌ಗೆ ದೊಡ್ಡ ಸಮಸ್ಯೆ ಎದುರೊಡ್ಡಲಿದ್ದಾರೆ ಎಂಬುದು ರಾಜಕೀಯ ಪರಿಣತರ ಅಭಿಪ್ರಾಯ. ಚಿರಾಗ್‌ರನ್ನು ಸಮಾಧಾನ ಮಾಡಲು ಬಿಜೆಪಿ ಧುರೀಣರು ಪ್ರಯತ್ನಿಸುತ್ತಿದ್ದು, ಇತ್ತೀಚೆಗೆ ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಬಿಹಾರ ಪ್ರವಾಸ ಕೈಗೊಂಡ ನಂತರ ಚಿರಾಗ್ ಜೆಡಿಯು ಮೇಲಿನ ಪ್ರಹಾರವನ್ನು ಕಡಿಮೆಗೊಳಿಸಿದ್ದಾರೆ. ಚಿರಾಗ್ ಸೆಪ್ಟಂಬರ್ 16ರಂದು ತಮ್ಮ ಪಕ್ಷದ ಎಂಎಲ್‌ಎಗಳ ಸಭೆ ಕರೆದಿದ್ದು, ಬಿಜೆಪಿ, ಜೆಡಿಯುನಲ್ಲಿ ಅಳಕು ಶುರುವಾದರೆ, ಪ್ರತಿಪಕ್ಷಗಳು ಕುತೂಹಲದ ಕಣ್ಣಿಟ್ಟಿವೆ. ಪ್ರಚಾರಕ್ಕೆ ಸುಶಾಂತ್ ಸಿಂಗ್ ರಜಪೂತ್ ವಿಷಯ
ಈ ಬಾರಿ ಬಿಹಾರ ಚುನಾವಣೆಯಲ್ಲಿ ಸುಶಾಂತ್ ಸಿಂಗ್ ರಜಪೂತ್ ಸಾವಿನ ವಿಚಾರ ಪ್ರಚಾರದ ಮುನ್ನೆಲೆಯಲ್ಲಿದೆ. ಸುಶಾಂತ್ ಸಿಂಗ್ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಮೊದಲು ಜೋರಾಗಿ ಆಗ್ರಹಿಸಿದ್ದು ಆರ್‌ಜೆಡಿ ನಾಯಕ ತೇಜಸ್ವಿ ಯಾದವ್. ನಂತರದಲ್ಲಿ ಈ ವಿಚಾರವನ್ನು ಬಿಜೆಪಿ ಕೈಗೆತ್ತಿಕೊಂಡಿತು. ಈಗ ಬಿಜೆಪಿ ಬಿಹಾರಾದ್ಯಂತ ‘ನಾ ಭೂಲೇ ಹೈಂ, ನಾ ಭೂಲ್ಹೇ ದೇಂಗೇ (ಮರೆತಿಲ್ಲ, ಮರೆಯಲೂ ಬಿಡುವುದಿಲ್ಲ)’ ಎಂಬ ಘೋಷವಾಕ್ಯದೊಂದಿಗೆ ಸುಶಾಂತ್‌ರ ಪೋಸ್ಟರ್‌ಗಳನ್ನು ಅಂಟಿಸುತ್ತಿದೆ. ಬಿಜೆಪಿಯು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರನ್ನು ಬಿಹಾರ ಚುನಾವಣೆ ಪ್ರಚಾರದ ಮುಖ್ಯಸ್ಥರನ್ನಾಗಿಸಿರುವುದು ಈ ವಿಷಯವನ್ನು ಜೀವಂತವಾಗಿಡಲು ಎನ್ನುವ ಆರೋಪ ವಿಪಕ್ಷಗಳದ್ದು. ಇತ್ತೀಚೆಗೆ ನಡೆದ ಸಮೀಕ್ಷೆಯೊಂದು 55 ಪ್ರತಿಶತ ಬಿಹಾರಿಗಳಿಗೆ ಸುಶಾಂತ್ ಸಿಂಗ್ ಪ್ರಕರಣ ಚುನಾವಣೆ ವಿಷಯವಾಗುವುದು ಇಷ್ಟವಿಲ್ಲ ಎಂದು ಹೇಳಿದೆ. ಮಹಾದಲಿತರ ಸೆಳೆಯುತ್ತಿದ್ದಾರಾ ನಿತೀಶ್?
ಬಿಹಾರದ ಜನಸಂಖ್ಯೆಯಲ್ಲಿ ದಲಿತ ವರ್ಗದ ಪ್ರಮಾಣ 16 ಪ್ರತಿಶತದಷ್ಟಿದ್ದು, ಇದರಲ್ಲಿ ಅರ್ಧದಷ್ಟು ಜನವರ್ಗ ಪಾಸ್ವಾನ್‌ರ ದುಸಾಢ್ ಸಮುದಾಯಕ್ಕೆ ಸೇರಿರುವಂಥದ್ದು. ಕೆಲ ವರ್ಷಗಳಿಂದ ಈ ಜನ ವರ್ಗದ ಮೇಲಿನ ಹಿಡಿತವನ್ನು ನಿತೀಶ್ ತಮ್ಮತ್ತ ಸೆಳೆದುಕೊಳ್ಳಲಾರಂಭಿಸಿದ್ದಾರೆ. ದಲಿತರಲ್ಲೇ ಇರುವ ಮಹಾದಲಿತರಿಗಾಗಿ ನಿತೀಶ್ ಕುಮಾರ್ ಉಪ-ಕೋಟಾ ವ್ಯವಸ್ಥೆಯನ್ನು ಜಾರಿಗೊಳಿಸಿದಾಕ್ಷಣ ದುಸಾಢ್ ಏತರ ದಲಿತರ ಬೆಂಬಲ ಜೆಡಿಯುನತ್ತ ತಲುಪಿತು. ಒಟ್ಟಾರೆಯಾಗಿ ದಲಿತರ ಮೇಲೆ ಎಲ್‌ಜೆಪಿಗಿದ್ದ ಹಿಡಿತ ಕಡಿಮೆಯಾಗಿದೆ ಎನ್ನಲಾಗುತ್ತದೆ. ಜಿತನ್ ರಾಂ ಮಾಂಝಿ ರಿಟರ್ನ್ಸ್: ಮಹಾದಲಿತ ಮುಸಾಹರ್ ಸಮುದಾಯಕ್ಕೆ ಸೇರಿದ ಜಿತನ್ ರಾಂ ಮಾಂಝಿಯವರನ್ನು(ಈ ಹಿಂದೆ ನಿತೀಶ್‌ರಿಂದಲೇ ಸಿಎಂ ಆಗಿ ನೇಮಕವಾಗಿ ನಂತರ ದೂರವಾಗಿದ್ದವರು) ಈ ಬಾರಿ ನಿತೀಶ್ ಕುಮಾರ್ ಎನ್‌ಡಿಎದ ಭಾಗವಾಗಲು ಮನವೊಲಿಸಿದ್ದಾರೆ. ನಿತೀಶ್‌ರ ಈ ನಡೆಯ ಹಿಂದೆ ಎಲ್‌ಜೆಪಿ ರೆಕ್ಕೆಗಳ ಕತ್ತರಿಸಿ ಹಾಕುವ ಹುನ್ನಾರವಿದೆ ಎನ್ನುವುದು ಚಿರಾಗ್ ಅಸಮಾಧಾನಕ್ಕೆ ಕಾರಣ. ಮಾಂಝಿ ಮೊದಲಿಂದಲೂ ಎಲ್‌ಜೆಪಿಯನ್ನು ಕಟುವಾಗಿ ಟೀಕಿಸುತ್ತಾ ಬಂದವರು.