ಮುಂಬೈ: ಮುಂಬರುವ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಬಿಹಾರದ ಮಾಜಿ ಪೊಲೀಸ್ ವರಿಷ್ಠಾಧಿಕಾರಿ ಗುಪ್ತೇಶ್ವರ್ ಪಾಂಡೆ ವಿರುದ್ಧ ಅಭ್ಯರ್ಥಿಯನ್ನು ಕಣಕ್ಕಿಳಿಸುವುದಾಗಿ ಮಹಾರಾಷ್ಟ್ರದ ಆಡಳಿತಾರೂಢ ಶಿವಸೇನಾ ಬುಧವಾರ (ಅಕ್ಟೋಬರ್ 07, 2020) ಘೋಷಿಸಿದೆ.
ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದಲ್ಲಿ ತನಿಖೆ ನಡೆಸಿದ್ದ ಮುಂಬೈ ಪೊಲೀಸರನ್ನು ಪಾಂಡೆ ಪ್ರಶ್ನಿಸಿದ್ದರು. ಅಲ್ಲದೇ ಮುಂಬೈ ಪೊಲೀಸರ ತನಿಖೆ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದು ಬಿಹಾರ ಮತ್ತು ಮಹಾರಾಷ್ಟ್ರ ಸರ್ಕಾರದ ನಡುವೆ ಜಟಾಪಟಿಗೆ ಕಾರಣವಾಗಿತ್ತು.
ಇತ್ತೀಚೆಗಷ್ಟೇ ಡಿಜಿಪಿಯಾಗಿದ್ದ ಗುಪ್ತೇಶ್ವರ್ ಪಾಂಡೆ ಸ್ವಯಂ ನಿವೃತ್ತಿ ಪಡೆದುಕೊಂಡಿದ್ದು, ಬಿಹಾರದ ಆಡಳಿತಾರೂಢ ಜೆಡಿಯು ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು. ಸ್ವಯಂ ನಿವೃತ್ತಿ ಪಡೆದ ಸಂದರ್ಭದಲ್ಲಿಯೇ ಪಾಂಡೆ ರಾಜಕೀಯಕ್ಕೆ ಸೇರ್ಪಡೆಯಾಗಲಿದ್ದಾರೆ ಎಂಬ ಸುದ್ದಿ ದಟ್ಟವಾಗಿ ಹಬ್ಬಿತ್ತು.
ಸುದ್ದಿಗಾರರ ಜತೆ ಮಾತನಾಡಿದ ಶಿವಸೇನಾ ಮುಖಂಡ ಅನಿಲ್ ದೇಸಾಯಿ, ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣವನ್ನು ಗುಪ್ತೇಶ್ವರ್ ಪಾಂಡೆ ರಾಜಕೀಯ ಲಾಭಕ್ಕಾಗಿ ಬಳಸಿಕೊಂಡಿರುವುದಾಗಿ ಆರೋಪಿಸಿದರು.
ರಜಪೂತ್ ಪ್ರಕರಣದಲ್ಲಿ ಇವರ ನಾಟಕವನ್ನು ಕೇವಲ ಮಹಾರಾಷ್ಟ್ರ ಮಾತ್ರವಲ್ಲ, ಇಡೀ ದೇಶವೇ ಗಮನಿಸಿದೆ. ಇದೀಗ ಜೆಡಿಯು ಸೇರಿರುವ ಪೊಲೀಸ್ ಮಾಜಿ ಅಧಿಕಾರಿ ಬಿಹಾರದ ಬಕ್ಸಾರ್ ನಿಂದ ಚುನಾವಣೆಗೆ ಸ್ಪರ್ಧಿಸಿದ್ದಾರೆ. ನಮ್ಮ ಪಕ್ಷದ ಸಾಮಾನ್ಯ ಕಾರ್ಯಕರ್ತನೊಬ್ಬ ಸ್ಪರ್ಧಿಸುವ ಮೂಲಕ ಪಾಂಡೆಗೆ ಕಠಿಣ ಸ್ಪರ್ಧೆ ನೀಡಲಿದ್ದಾರೆ ಎಂದು ತಿಳಿಸಿದರು.