Advertisement

ಬಿಹಾರ ಚುನಾವಣಾ ಕದನ: ಮಹಾಮೈತ್ರಿಕೂಟದ ಪ್ರಣಾಳಿಕೆ ಬಿಡುಗಡೆ-ಕೃಷಿ ಕಾಯ್ದೆ ರದ್ದು ಭರವಸೆ

02:55 PM Oct 17, 2020 | Nagendra Trasi |

ಪಾಟ್ನಾ:ಮುಂಬರುವ ಬಿಹಾರ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್, ರಾಷ್ಟ್ರೀಯ ಜನತಾ ದಳ ಮತ್ತು ಎಡಪಕ್ಷಗಳ ಮಹಾಮೈತ್ರಿಕೂಟ ಶನಿವಾರ (ಅಕ್ಟೋಬರ್ 17, 2020) ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ.

Advertisement

“ಬದಲಾವಣೆಗೆ ನಮ್ಮ ಪ್ರತಿಜ್ಞೆ” ಶೀರ್ಷಿಕೆಯ ಪ್ರಣಾಳಿಕೆಯನ್ನು ಆರ್ ಜೆಡಿ ಮುಖಂಡ ತೇಜಸ್ವಿ ಯಾದವ್ ಅವರು ಕಾಂಗ್ರೆಸ್ ಮುಖಂಡ ರಣದೀಪ್ ಸಿಂಗ್ ಸುರ್ಜೇವಾಲಾ ಮತ್ತು ಇತರ ಮಹಾಮೈತ್ರಿಕೂಟದ ಮುಖಂಡರ ಸಮ್ಮುಖದಲ್ಲಿ ಬಿಡುಗಡೆಗೊಳಿಸಿದರು.

ಪ್ರಣಾಳಿಕೆಯಲ್ಲೇನಿದೆ?

ಒಂದು ವೇಳೆ ಬಿಹಾರದಲ್ಲಿ ಮಹಾಘಟಬಂಧನ್ ಅಧಿಕಾರಕ್ಕೆ ಬಂದಲ್ಲಿ, ಕಳೆದ ತಿಂಗಳು ಕೇಂದ್ರ ಸರ್ಕಾರ ಜಾರಿಗೆ ತಂದ ಮೂರು ರೈತ ವಿರೋಧಿ ಕಾಯ್ದೆಯನ್ನು ರದ್ದುಗೊಳಿಸುವುದಾಗಿ ಘೋಷಿಸಿದೆ.

ಬಿಹಾರದಲ್ಲಿ ನಡೆಯಲಿರುವ ವಿವಿಧ ನೇಮಕಾತಿ ಪರೀಕ್ಷೆಗೆ ಸಂಬಂಧಿಸಿದಂತೆ ಅಭ್ಯರ್ಥಿಗಳ ಪ್ರಯಾಣ ವೆಚ್ಚ ಹೊರತುಪಡಿಸಿ ಶುಲ್ಕವನ್ನು ಮನ್ನಾ ಮಾಡುವುದಾಗಿ ಭರವಸೆ ನೀಡಿದೆ.  ಗುತ್ತಿಗೆ ಆಧಾರದಲ್ಲಿ ನೇಮಕವಾದ ಶಿಕ್ಷಕರಿಗೂ ಸಹ “ಒಂದೇ ತೆರನಾದ ಕೆಲಸಕ್ಕೆ ಒಂದೇ ವಿಧದ ವೇತನ” ನೀಡುವುವುದಾಗಿ ಪ್ರಣಾಳಿಕೆಯಲ್ಲಿ ಭರವಸೆ ನೀಡಿದೆ.

Advertisement

ಇದನ್ನೂ ಓದಿ:ರಾಯಲ್ಸ್ ವರ್ಸಸ್ ಚಾಲೆಂಜರ್ಸ್: ಸೋಲಿನ ಸೇಡು ತೀರಿಸಲು ರಾಜಸ್ಥಾನ ಕಾತರ

ಮಹಾಮೈತ್ರಿಕೂಟ ಮುಖ್ಯವಾಗಿ ರೈತರಿಗೆ ಸಂಬಂಧಿಸಿದ ಕಾನೂನು ಮತ್ತು ಉದ್ಯೋಗ ಸೃಷ್ಟಿಗೆ ಹೆಚ್ಚಿನ ಒತ್ತು ನೀಡಿರುವುದಾಗಿ ತಿಳಿಸಿದೆ. ನಿತೀಶ್ ಕುಮಾರ್ ಅವರದ್ದು ಎರಡು ಇಂಜಿನ್ ಹೊಂದಿರುವ ಸರ್ಕಾರವಾಗಿದೆ. ಕಳೆದ 15 ವರ್ಷಗಳಿಂದ ರಾಜ್ಯದ ಆಡಳಿತ ನಡೆಸುತ್ತಿದ್ದರು ಕೂಡಾ ಈವರೆಗೂ ವಿಶೇಷ ಸ್ಥಾನಮಾನ ಕಲ್ಪಿಸಿಕೊಡಲು ಸಾಧ್ಯವಾಗಿಲ್ಲ ಎಂದು ತೇಜಸ್ವಿ ಯಾದವ್ ಆರೋಪಿಸಿದ್ದಾರೆ.

ವಿಧಾನಸಭಾ ಚುನಾವಣೆಯಲ್ಲಿ ಮತದಾರರನ್ನು ಸೆಳೆಯಲು ಮುಂದಾಗಿರುವ ಮಹಾಮೈತ್ರಿ ಹತ್ತು ಲಕ್ಷ ಖಾಯಂ ಸರ್ಕಾರಿ ಉದ್ಯೋಗ, ಮನ್ರೇಗಾ ಯೋಜನೆಯಡಿ ಉದ್ಯೋಗದ ದಿನಗಳ ಅವಧಿ 100ರಿಂದ 200ಕ್ಕೆ ಹೆಚ್ಚಳ, ರೈತರು ಹಾಗೂ ಇತರರ ಸಾಲ ಮನ್ನಾ ಸೇರಿದಂತೆ 25 ಭರವಸೆಗಳನ್ನು ನೀಡಿದೆ.

ಬಿಹಾರದ 243 ವಿಧಾನಸಭಾ ಕ್ಷೇತ್ರಗಳಿಗೆ ಮೂರು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಅಕ್ಟೋಬರ್ 28ರಂದು 71 ಸ್ಥಾನಕ್ಕೆ, ನವೆಂಬರ್ 3ರಮದು 94 ಸ್ಥಾನಕ್ಕೆ ಹಾಗೂ ಉಳಿದ 78 ಕ್ಷೇತ್ರಗಳಿಗೆ ನವೆಂಬರ್ 7ರಂದು ನಡೆಯಲಿದ್ದು, ನವೆಂಬರ್ 10ರಂದು ಫಲಿತಾಂಶ ಪ್ರಕಟವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next