Advertisement
ದೊಡ್ಡ ಪಟ್ಟೆ ಗೊರವ ಹಕ್ಕಿಯಲ್ಲಿ- ಕಣ್ಣಿನ ಸುತ್ತ ಇರುವ ಬಿಳಿಬಣ್ಣ ಕುತ್ತಿಗೆವರೆಗೆ ವ್ಯಾಪಿಸಿದೆ. ಹಸಿರು ಮಿಶ್ರಿತ -ಕಂದು ಗಪ್ಪು ಬಣ್ಣ ಎದ್ದು ಕಾಣುತ್ತದೆ. 2 ಇಂಚಿಗಿಂತ ಉದ್ದ ಇರುವ -ನೇರವಾದ ಬಲವಾದ ಚುಂಚು ಇದಕ್ಕಿದೆ. ಇದು ಕೆಸರು ಕೆದಕಲು, ಮಣ್ಣಿನ ಅಡಿಯಲ್ಲಿರುವ -ಚಿಕ್ಕ ಮಣ್ಣಿನ ಹುಳು, ಎರೆಹುಳಗಳ ಮರಿ, ಅರಸಿ ತಿನ್ನಲು ಅನುಕೂಲವಾಗಿದೆ. ಸಮುದ್ರ ತೀರದ ಕೆಸರು ಗಜನಿ ಪ್ರದೇಶ, ನದಿಗಳು ಸಮುದ್ರ ಸೇರುವ ಜಾಗ, ಉಪ್ಪು ನೀರಿನ ಕೆಸರುಪ್ರದೇಶ, ಭತ್ತದ ಗದ್ದೆ ಮುಂತಾದ ಸ್ಥಳಗಳು ಈ ಹಕ್ಕಿಗೆ ಪ್ರಿಯವಾಗಿದೆ. ಪ್ರದೇಶದಲ್ಲಿ ಒಂಟಿಯಾಗಿ ಇಲ್ಲವೇ ಚಿಕ್ಕ ಗುಂಪಿನಲ್ಲಿ ಇದನ್ನು ಕಾಣಬಹುದು.
ಬಲವಾದ ಉದ್ದ ಹಸಿರು ಮಿಶ್ರಿತ ಹಳದಿ ಕಾಲು ಬಲವಾಗಿರುವುದು ಓಡಾಡಿ ತನ್ನ ಆಹಾರ ದೊರಕಿಸಲು ಸಹಾಯಕವಾಗಿದೆ. ಚುಂಚು ಕಪ್ಪು ಬಣ್ಣದಿಂದ ಕೂಡಿರುತ್ತದೆ. ರೆಕ್ಕೆ ಆರಂಭದಲ್ಲಿ ಬಿಳಿ ಬಣ್ಣದಿಂದ ಕೂಡಿದ್ದು, ರೆಕ್ಕೆಯ ಬುಡದಲ್ಲಿ ಬಿಳಿ ರೇಖೆ ಇರುತ್ತದೆ. ರೆಕ್ಕೆ ಚೂಪಾಗಿದೆ.
Related Articles
Advertisement
ಈ ಹಕ್ಕಿಯ ವಿಶೇಷ ಎಂದರೆ ತನ್ನ ಜೀತಾವಧಿಯಲ್ಲಿ ಒಂದೇ ಒಂದು ಗಂಡನ್ನು ವರಿಸುವ ಪಕ್ಷಿ ಇದು. ಅಕಸ್ಮಾತ್ತಾಗಿ ಗಂಡು ಇಲ್ಲವೇ ಹೆಣ್ಣು ಮೃತವಾದರೆ ಬೇರೆ ಹಕ್ಕಿಗಳ ಜೊತೆ ಸೇರಿ- ಸಂಸಾರ ಮಾಡುತ್ತೋ, ಇಲ್ಲವೋ? ಅಥವಾ ಹಾಗೇ ಬ್ರಹ್ಮಚಾರಿಯಾಗಿ ಜೀವಿತಾವಧಿ ಕಳೆಯುವುದೋ ತಿಳಿದಿಲ್ಲ. ಇದು ಓಡಾಡುವಾಗ ಮತ್ತು ಆಹಾರ ದೊರಕಿಸುವಾಗ ತನ್ನ ಚುಂಚನ್ನು ಮೇಲೆ ಕೆಳಗೆ ಹೊಲಿಗೆ ಯಂತ್ರದ ಸೂಜಿಯಂತೆ ಕುಣಿಸುತ್ತದೆ. ಕೆಲವೊಮ್ಮೆ ತನ್ನ ಮೋಟು ಬಾಲವನ್ನು ನೀರುಕೋಳಿಯಂತೆ ಕುಣಿಸುತ್ತದೆ.
ಇದು ತನ್ನ ಮರಿಗಳಿಗೆ ಬಾಲವನ್ನು ಭಿನ್ನವಾಗಿ ಕುಣಿಸಿ , ಮಾರ್ಗದರ್ಶನ ಮಾಡುವುದು. ಭಾರತ, ಚೀನಾ ಆಫ್ರಿಕಾ ದೇಶದಲ್ಲಿ ಈ ಹಕ್ಕಿಯನ್ನು ಕಾಣಬಹುದು. ಜಮ್ಮು-ಕಾಶ್ಮೀರ, ಹರಿಯಾಣ,ಪಂಜಾಬ್, ಗುಜರಾತ್, ರಾಜಸ್ಥಾನ, ಉತ್ತರ ಪ್ರದೇಶ, ಮಧ್ಯಪ್ರದೇಶ, ಓರಿಸಾ, ಜಾರ್ಖಂಡ್, ಆಸಾಂ ಮಧ್ಯಪ್ರದೇಶ,ತೆಲಂಗಾಣ , ಮಹಾರಾಷ್ಟ್ರ, ಕರ್ನಾಟಕ, ಗೋವಾ, ಕೇರಳ ರಾಜ್ಯಗಳಲ್ಲೂ ಈ ಹಕ್ಕಿ ಇದೆ.
ಬಣ್ಣ ಮತ್ತು ಆಕಾರದ ವ್ಯತ್ಯಾಸದಿಂದ ಇದನ್ನು 4 ಉಪಜಾತಿಗಳಾಗಿ ವಿಂಗಡಿಸಲಾಗಿದೆ. ಗಂಡು ಹೆಣ್ಣಿನಲ್ಲಿ ಹೋಲಿಕೆ ಇದ್ದರೂ ಹೆಣ್ಣು ಸ್ವಲ್ಪ ತಿಳಿಬಣ್ಣ ಇದೆ. ಆಕಾರದಲ್ಲೂ ಹೆಣ್ಣು ದೊಡ್ಡದು. ಮರಿಮಾಡುವ ಸಮಯದಲ್ಲಿ ತನ್ನ ಬಾಲದ ಪುಕ್ಕ ಅಗಲಿಸಿ- ರೆಕ್ಕೆಯಿಂದ ದನಿ ಹೊರಡಿಸುತ್ತಾ ಹೆಣ್ಣು ಆಕರ್ಷಿಸುತ್ತದೆ. ಪ್ರಣಯ ಮತ್ತು ಮಿಲನದ ನಂತರ ಮೊಟ್ಟೆ ರಕ್ಷಣೆ ಸಂದರ್ಭದಲ್ಲಿ ಗಂಡನ್ನು ನಿಯಂತ್ರಿಸುತ್ತದೆ.
* ಪಿ. ವಿ. ಭಟ್ ಮೂರೂರು