Advertisement
ರಾಷ್ಟ್ರೀಯ ಶಿಕ್ಷಣ ನೀತಿಯ ವೈಶಿಷ್ಟ್ಯ ಏನೆಂದರೆ ಇದನ್ನು ಅಂತಿಮಗೊಳಿಸುವ ಮೊದಲು 2.5 ಲಕ್ಷ ಗ್ರಾಮ ಪಂಚಾಯತ್, 6,600 ಬ್ಲಾಕ್, 6000 ನಗರ ಪ್ರದೇಶದ ಸ್ಥಳೀಯಾಡಳಿತ ಸಂಸ್ಥೆಗಳನ್ನು, 676 ಜಿಲ್ಲೆಗಳನ್ನು ಸೇರಿಸಿ ಅಭಿಪ್ರಾಯ ಕ್ರೋಡೀಕರಿಸಲಾಗಿದೆ. ಇದರ ಮೂಲಪ್ರತಿಗಳು 22 ಭಾಷೆಗಳಲ್ಲಿ ಅನುವಾದಗೊಂಡಿವೆ. ರಾಷ್ಟ್ರದ ಎಲ್ಲ ರಾಜ್ಯ ಸರಕಾರಗಳೊಂದಿಗೆ ಸಂವಹನ ನಡೆಸಲಾಗಿದೆ. ಸಂಸದರು ಕೊಟ್ಟ ಸಲಹೆಗಳನ್ನು ಅಳವಡಿಸಲಾಗಿದೆ. ದಿಲ್ಲಿಯ ಜೆಎನ್‌ಯುನಲ್ಲಿ ಒಂದು ದಿನದ ಕಾರ್ಯಗಾರ ನಡೆಸಿ ಅಲ್ಲಿನ ಉಪನ್ಯಾಸಕರೊಂದಿಗೆ ಸಮಾಲೋಚನೆ ಕೂಡ ನಡೆಸಲಾಗಿದೆ. ಶಿಕ್ಷಣ ತಜ್ಞರು ಕೊಟ್ಟ ಸಲಹೆಗಳನ್ನು ಸಂಗ್ರಹಿಸಿ ಪೂರ್ಣ ಪ್ರಮಾಣದಲ್ಲಿ ಒಂದು ಮಾದರಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಕೇಂದ್ರ ಅನುಷ್ಟಾನಕ್ಕೆ ತರುವ ಈ ಹೊತ್ತಿನಲ್ಲಿ ಅದನ್ನು ನಮ್ಮ ಮುಂದಿನ ಪೀಳಿಗೆ ಅರ್ಥ ಮಾಡಿಕೊಳ್ಳುವ ಆವಶ್ಯಕತೆ ಇದೆ.
Related Articles
Advertisement
ವಿಶೇಷ ಚೇತನ ಮಕ್ಕಳಿಗಾಗಿ ಶಾಲೆಗಳಲ್ಲಿ ಉತ್ತಮ ಕಲಿಕಾ ವಾತಾವರಣವನ್ನು ಕಲ್ಪಿಸಿ ಅವರು ಶಾಲೆಯ ಆಕರ್ಷಣೆಗೆ ಒಳಗಾಗುವಂತೆ ಮಾಡಲು ಈ ನೀತಿ ರೂಪುರೇಶೆ ಸಿದ್ಧಪಡಿಸಿದೆ. ವಿಕಲಚೇತನ ಮಕ್ಕಳು ಕೇವಲ ಶಾಲೆಯಲ್ಲಿ ಮಾತ್ರ ಕಲಿತು ಉನ್ನತ ವಿದ್ಯಾಭ್ಯಾಸದ ಅವಕಾಶ ಇಲ್ಲದೆ ತಮ್ಮ ಗುರಿಯನ್ನು ಕೈಬಿಡಬಾರದು ಎನ್ನುವ ಕಾರಣಕ್ಕೆ ಅವರಿಗೆ ಸ್ಕಾಲರ್‌ಶಿಪ್ ಒದಗಿಸಿ ಅವರ ಭವಿಷ್ಯವನ್ನು ಭದ್ರಗೊಳಿಸುವ ಗುರಿ ಈ ನೀತಿಯಲ್ಲಿದೆ.
ಈ ರಾಷ್ಟ್ರೀಯ ಶಿಕ್ಷಣ ನೀತಿಯು ಮಕ್ಕಳು ಬಾಲ್ಯದ ಶಿಕ್ಷಣವನ್ನು ಅವರದ್ದೇ ಮಾತೃಭಾಷೆಯಲ್ಲಿ ಪಡೆಯಲು ಯೋಜಿಸುತ್ತಿದೆ. ಒಂದು ವೇಳೆ ಮಾತೃಭಾಷೆಯಲ್ಲಿ ಸಾಧ್ಯವಾಗದಿದ್ದರೆ ಕನಿಷ್ಟ ಆ ರಾಜ್ಯದ ಸ್ಥಳೀಯ ಭಾಷೆಯಲ್ಲಾದರೂ ಆ ಮಕ್ಕಳು ತಮ್ಮ ಆರಂಭಿಕ ಶಿಕ್ಷಣವನ್ನು ಪಡೆಯಬೇಕು ಎನ್ನುವುದು ಇದರ ಉದ್ದೇಶ. ಮಗು ತನ್ನ ಬುದ್ಧಿಮತ್ತೆಯನ್ನು ಹೆಚ್ಚಿಸಲು ಇದು ಸಹಾಯಕಾರಿಯಾಗುತ್ತದೆ ಅಲ್ಲದೆ ಮಗು ಸಕಾರಾತ್ಮಕವಾಗಿ ಯೋಚನೆ ಮಾಡಲು ಮಾತೃಭಾಷೆ ಪೂರಕವಾದ ವಾತಾವರಣವನ್ನು ಸೃಷ್ಟಿಸುತ್ತದೆ. ಮಾತೃಭಾಷಾ ಶಿಕ್ಷಣ ಅಥವಾ ರಾಜ್ಯಭಾಷಾ ಶಿಕ್ಷಣದಿಂದ ಮಗುವಿನ ಸರ್ವತೋಮುಖ ಬೆಳವಣಿಗೆ ಮಾತ್ರವಲ್ಲ ಆಯಾ ರಾಜ್ಯ ಭಾಷೆ ಕೂಡ ಬೆಳೆಯುತ್ತದೆ ಮತ್ತು ಅದರೊಂದಿಗೆ ಭಾಷಾ ಸಾಹಿತ್ಯದ ಬೆಳವಣಿಗೆಗೂ ಇದು ನೆರವಾಗುತ್ತದೆ. ತ್ರಿಭಾಷಾ ಕಲಿಕೆಯನ್ನು ವಿದ್ಯಾಭ್ಯಾಸದಲ್ಲಿ ಅಳವಡಿಸಿದರೆ ಅದರಿಂದ ರಾಷ್ಟ್ರದ ಎಕತೆಗೂ ಅದು ನೆರವಾಗುತ್ತದೆ. ಭಾರತದಂತಹ ಭಾಷಾ ಶ್ರೀಮಂತ ನಾಡಿನಲ್ಲಿ ಖಂಡಿತವಾಗಿ ಮನಸ್ಸು ಮಾಡಿದರೆ ಸಾಧ್ಯವಿದೆ ಎನ್ನುವುದು ರಾಷ್ಟ್ರೀಯ ಶಿಕ್ಷಣ ನೀತಿಯ ಒಟ್ಟು ಆಶಯವೂ ಆಗಿದೆ.
ಇನ್ನು ಹೇಗೆ ಈ ಹೊಸ ಶಿಕ್ಷಣ ರೂಪಗೊಂಡಿದೆ ಎನ್ನುವುದನ್ನು ಅರಿತುಕೊಳ್ಳೋಣ. ಇನ್ನು ಮುಂದೆ 10+2 ಇರುವುದಿಲ್ಲ. ಭವಿಷ್ಯದಲ್ಲಿ 5+3+3+4 ಎಂದು ಶಿಕ್ಷಣ ಪದ್ಧತಿಯನ್ನು ವಿಭಾಗಿಸಲಾಗುತ್ತದೆ. ಯಾವುದೇ ಪದವಿ ತರಗತಿಯು ನಾಲ್ಕು ವರ್ಷದ್ದು ಮಾತ್ರ ಆಗಲಿದೆ. ಆರನೇ ತರಗತಿಯಿಂದ ಮಕ್ಕಳು ವೃತ್ತಿಪರ ಶಿಕ್ಷಣಕ್ಕೆ ಬೇಕಾದ ಪಠ್ಯವನ್ನು ಆಯ್ದುಕೊಳ್ಳಬಹುದು. ಪದವಿ ತರಗತಿಯಲ್ಲಿ ಪ್ರಮುಖ ಪಠ್ಯ ಮತ್ತು ಉಪಪಠ್ಯ ಎಂದು ವರ್ಗೀ ಕರಿಸಲಾಗಿದ್ದು, ಒಬ್ಬ ವಿಜ್ಞಾನದ ವಿದ್ಯಾರ್ಥಿ ಭೌತಶಾಸ್ತ್ರವನ್ನು ಮುಖ್ಯ ವಿಷಯವನ್ನಾಗಿ ತೆಗೆದುಕೊಂಡರೆ ಸಂಗೀತ ಉಪಪಠ್ಯವನ್ನಾಗಿ ತೆಗೆದುಕೊಳ್ಳಬಹುದು. ಹೀಗೆ ಬಹಳಷ್ಟು ಆಯ್ಕೆಗಳು ಲಭ್ಯವಿರುತ್ತದೆ. ಶಾಲೆಗಳಲ್ಲಿ ವರ್ಷಕ್ಕೆ ಎರಡು ಸೆಮಿಸ್ಟರ್ ಮಾಡಿ ಪರೀಕ್ಷೆ ನಡೆಸಲಾಗುತ್ತದೆ. ಶಿಕ್ಷಣ ಮಕ್ಕಳ ಭವಿಷ್ಯದ ಕುರಿತಾಗಿ ಹೆಚ್ಚೆಚ್ಚು ಪ್ರಾಕ್ಟಿಕಲ್ ಮತ್ತು ಜ್ಞಾನ ಉಪಯುಕ್ತವಾಗಬೇಕು ಎನ್ನುವ ಅರ್ಥದಲ್ಲಿ ಪಠ್ಯ ಸಿದ್ಧಪಡಿಸಲಾಗುತ್ತದೆ. ಪದವಿ ಕಲಿಯುವ ವಿದ್ಯಾರ್ಥಿ ಒಂದು ವರ್ಷ ಮಾತ್ರ ಕಲಿತು ಹೊರಗೆ ಬಂದರೆ ಅವರಿಗೆ ಬೇಸಿಕ್ ಪ್ರಮಾಣಪತ್ರ, ಎರಡು ವರ್ಷ ಮುಗಿಸಿದರೆ ಡಿಪ್ಲೋಮಾ ಪ್ರಮಾಣಪತ್ರ ಹಾಗೂ ಪೂರ್ಣ ಅವಧಿ ಮುಗಿಸಿದರೆ ಪದವಿ ಪ್ರಮಾಣ ಪತ್ರ ಸಿಗುತ್ತದೆ. ವಿದ್ಯಾರ್ಥಿ ಅರ್ಧದಲ್ಲಿಯೇ ಪದವಿ ವಿದ್ಯಾಭ್ಯಾಸ ಮೊಟಕುಗೊಳಿಸಿದರೆ ಆತ ನಿರಾಶನಾಗ ಬೇಕಿಲ್ಲ. ಹೀಗೆ ಹತ್ತು ಹಲವಾರು ಬದಲಾವಣೆಗಳೊಂದಿಗೆ ಈ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ಬರಲಿದೆ. ಹೊಸ ಮನ್ವಂತರಕ್ಕೆ ನಮ್ಮ ದೇಶ ಸಾಕ್ಷಿಯಾಗಲಿದೆ. ಅದಕ್ಕೆ ನಮ್ಮ ಹೆಮ್ಮೆಯ ಪ್ರಧಾನ ಮಂತ್ರಿಗಳು ನಾಂದಿ ಹಾಡಿದ್ದಾರೆ!!
ನಳಿನ್ ಕುಮಾರ್ ಕಟೀಲು