Advertisement

ದೊಡ್ಡಪತ್ರೆಯ ದೊಡ್ಡ ಲಾಭಗಳು

07:30 AM Mar 23, 2018 | |

ದೊಡ್ಡಪತ್ರೆ ಅಥವಾ ಸಂಬಾರಬಳ್ಳಿ ಸಸ್ಯವನ್ನು ನಾವು ನಮ್ಮ ಮನೆಯ ಹಿತ್ತಲಿನಲ್ಲಿ ಹೂವಿನ ಗಿಡಗಳೊಂದಿಗೂ ಅಥವಾ ಹೂಕುಂಡಗಳಲ್ಲೂ ಬೆಳೆಸಬಹುದು. ಇದು ನೆಲದ ಮೇಲೆ ಪೊದೆಯಾಗಿ ಬೆಳೆಯುವ ಸಸ್ಯ. ಇದರ ಎಲೆಗಳು ಹಸಿರಾಗಿ, ದಪ್ಪವಾಗಿರುವುದರಿಂದ ಅಲಂಕಾರ ಸಸ್ಯವಾಗಿಯೂ ಕಂಗೊಳಿಸುತ್ತದೆ. ಇದರ ಎಲೆಯು ಕರ್ಪೂರ ವಾಸನೆಯನ್ನು ಹೊಂದಿರುವುದರಿಂದ ಇದನ್ನು ಕರ್ಪೂರವಳ್ಳಿ ಎಂದೂ ಕರೆಯುತ್ತಾರೆ.

Advertisement

ದೊಡ್ಡಪತ್ರೆಯ ಎಲೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರಿನ ಅಂಶ ಇರುವುದರಿಂದ ಎಲೆಗಳನ್ನು ಕೊಯ್ದು ಸ್ವಲ್ಪ ಬೆಂಕಿಯಲ್ಲಿ ಬಾಡಿಸಿ ಹಿಂಡಿದರೆ ನೀರು ಸಿಗುತ್ತದೆ. ಈ ನೀರಿನಲ್ಲಿ ಔಷಧೀಯ ಗುಣವಿರುವುದರಿಂದ ಎಳೆ ಮಕ್ಕ‌ಳಲ್ಲಿ ಕಂಡುಬರುವ ಜ್ವರ, ಶೀತ ಸೇರಿದಂತೆ ಹಲವು ಕಾಯಿಲೆಗಳಿಗೆ ಮನೆ ಮದ್ದಾಗಿ ಬಳಸಲಾಗುತ್ತದೆ. ಮಕ್ಕಳಿಗೆ ಆಗಾಗ ಅಲರ್ಜಿ, ಜ್ವರ, ಶೀತ ಬರುತ್ತಲೇ ಇರುವುದರಿಂದ ಚಿಕ್ಕಮಕ್ಕಳಿರುವ ಮನೆಗಳಲ್ಲಿ ದೊಡ್ಡಪತ್ರೆ ಇರಲೇಬೇಕು. 

.    ದೊಡ್ಡಪತ್ರೆ ಜ್ವರ, ಕೆಮ್ಮು, ಶೀತಕ್ಕೆ ಉತ್ತಮವಾದ ಮನೆಮದ್ದು. ಚಿಕ್ಕ ಮಕ್ಕಳಿಗೆ ದೊಡ್ಡಪತ್ರೆಯ ಎಲೆಗಳನ್ನು ಬಾಡಿಸಿ ಅದರ ರಸವನ್ನು ಜೇನುತುಪ್ಪದೊಂದಿಗೆ ಬೆರೆಸಿ ತಿನ್ನಿಸುವುದರಿಂದ ಕಟ್ಟಿದ ಮೂಗು, ಗಂಟಲು ಕಿರಿಕಿರಿ  ವಾಸಿಯಾಗುತ್ತದೆ.

.    ಸಂಬಾರ ಬಳ್ಳಿಯ ಎಲೆಗಳನ್ನು ಕೊಯ್ದು ಬೆಂಕಿಯಲ್ಲಿ ಬಾಡಿಸಿಕೊಂಡು ಎದೆಗೆ ಶಾಖ ಕೊಡುವುದರಿಂದಲೂ ಮಕ್ಕಳಲ್ಲಿ ಕಂಡುಬರುವ ಉಬ್ಬಸ, ಕಫ‌ಗಳ ನಿವಾರಣೆಯಾಗುತ್ತದೆ.

.    ದೊಡ್ಡಪತ್ರೆ ಎಲೆಗಳ ರಸ ಸೇವಿಸುವುದರಿಂದ ಮಲಬದ್ಧತೆ ನಿವಾರಣೆಯಾಗಿ ಜೀರ್ಣಕ್ರಿಯೆಯನ್ನು ಉತ್ತೇಜಸುತ್ತದೆ.

Advertisement

.    ದೊಡ್ಡಪತ್ರೆಯ ಎಲೆಗಳನ್ನು ಶುಂಠಿರಸದಲ್ಲಿ ಬೆರೆಸಿ ಬೆಚ್ಚಗಿನ ತಾಪಮಾನದಲ್ಲಿ ಸುಟ್ಟು ತಣ್ಣಗಾದ ಮೇಲೆ ತಲೆಗೆ ಪಟ್ಟು ಹಾಕಿಕೊಳ್ಳಬೇಕು. ಇದರಿಂದ ತಲೆನೋವು ಕಡಿಮೆಯಾಗುತ್ತದೆ. ಅಲ್ಲದೆ ಎಳ್ಳೆಣ್ಣೆಗೆ ದೊಡ್ಡಪತ್ರೆ ರಸವನ್ನು ಸೇರಿಸಿ ತಲೆಗೆ ಹಚ್ಚುವುದರಿಂದ ತಲೆ ತಂಪಾಗುವುದಲ್ಲದೆ ಕಣ್ಣುರಿಯೂ ಕಡಿಮೆಯಾಗುತ್ತದೆ.

.    ದೊಡ್ಡಪತ್ರೆಯ ಎಲೆಗಳನ್ನು 5ರಿಂದ 10 ನಿಮಿಷಗಳ ಕಾಲ ಬಿಸಿನೀರಿನಲ್ಲಿ ಕುದಿಸಿ ಆ ನೀರನ್ನು ತಲೆಗೆ ಹಚ್ಚಿಕೊಂಡು ಅರ್ಧ ಗಂಟೆಯ ಬಳಿಕ ಶಾಂಪೂ ಹಾಕಿ ತೊಳೆದರೆ ತಲೆಹೊಟ್ಟು ದೂರವಾಗುತ್ತದೆ.

.     ತುರಿಕೆ, ಕಜ್ಜಿಯಾದಾಗ ದೊಡ್ಡಪತ್ರೆ ಎಲೆ, ಅರಶಿನ ಪುಡಿ ಸೇರಿಸಿ ಬೆಣ್ಣೆಯಲ್ಲಿ ಅರೆದು ಚೆನ್ನಾಗಿ ಕಲೆಸಿ ಮುಲಾಮು ಮಾಡಿಟ್ಟುಕೊಂಡು ದಿನಕ್ಕೆ ಒಂದೆರಡು ಬಾರಿ ಹಚ್ಚುತ್ತಾ ಬಂದರೆ ತುರಿಕೆ ಮಾಯವಾಗುತ್ತದೆ. ಅಲ್ಲದೆ ದೊಡ್ಡಪತ್ರೆಯ ಎಲೆಗಳನ್ನು ಸುಟ್ಟುಕೊಂಡು ಯಾವುದೇ ಕೀಟಗಳ ಕಡಿತ, ಜೇನುನೊಣದ ಕುಟುಕುಗಳಿಗೆ ಇಲ್ಲವೇ ಯಾವುದೇ ಕೀಟ ಕಡಿತ, ಚರ್ಮದ ಉರಿಯೂತದ ನೋವು ಮತ್ತು ಗಾಯಗಳನ್ನು ಗುಣಪಡಿಸುತ್ತದೆ.

. ಸಂಬಾರಬಳ್ಳಿ ಎಲೆಗಳನ್ನು ಬಾಡಿಸಿ ಚಟ್ನಿ , ತಂಬುಳಿ ತಯಾರಿಸಿ ಊಟದಲ್ಲಿ ಸೇವಿಸಬಹುದು. ಶುಂಠಿ, ಬೆಳ್ಳುಳ್ಳಿ, ಹಸಿಮೆಣಸು, ಲಿಂಬೆರಸ ಸೇರಿಸಿ ಅರೆದರೆ ಚಟ್ನಿಯಾಗಿಯೂ ಮಜ್ಜಿಗೆ ಬೆರೆಸಿದರೆ ಊಟಕ್ಕೆ ತಂಪು ಹುಳಿಯಾಗಿಯೂ ತಯಾರಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next