ಮುಂಬಯಿ: ʼಬಿಗ್ ಬಾಸ್ 16 ʼ ಖ್ಯಾತಿಯ ಅಬ್ದು ರೋಝಿಕ್ ಅವರನ್ನು ಮಂಗಳವಾರ(ಫೆ.27 ರಂದು) ಇಡಿ ಅಧಿಕಾರಿಗಳು ಮೂರು ಗಂಟೆಗಳ ಕಾಲ ವಿಚಾರಣೆ ನಡೆಸಿರುವುದಾಗಿ ವರದಿ ಆಗಿದೆ.
ಕಳೆದ ವಾರ ಅಬ್ದು ರೋಝಿಕ್ ಹಾಗೂ ಸಹ-ಸ್ಪರ್ಧಿ ಶಿವ್ ಠಾಕರೆ ಅವರನ್ನು ವಿಚಾರಣೆಗೆ ಬರುವಂತೆ ಇಡಿ ಸಮನ್ಸ್ ನೀಡಿತ್ತು.
ಏನಿದು ಪ್ರಕರಣ?: ಅಲಿ ಅಸ್ಗರ್ ಶಿರಾಜಿ ಅವರ ಹಸ್ಟ್ಲರ್ಸ್ ಹಾಸ್ಪಿಟಾಲಿಟಿ ಪ್ರೈವೇಟ್ ಲಿ. ಕಂಪೆನಿ ಶಿವ್ ಠಾಕರೆ ಮತ್ತು ಅಬ್ದು ರೋಜಿಕ್ ಅವರ ಸ್ಟಾರ್ಟ್‌ಅಪ್‌ಗಳು ಸೇರಿದಂತೆ ಹಲವಾರು ಸ್ಟಾರ್ಟ್‌ಅಪ್‌ಗಳಿಗೆ ಹಣಕಾಸು ಒದಗಿಸಿದೆ. ಶಿವ್ ಅವರ ರೆಸ್ಟೋರೆಂಟ್, ಠಾಕರೆ ಚಾಯ್ ಮತ್ತು ಸ್ನ್ಯಾಕ್ಸ್ ಮತ್ತು ಅಬ್ದು ರೋಜಿಕ್ ಅವರ ಬರ್ಗಿರ್(ಬರ್ಗರ್ ಬ್ರ್ಯಾಂಡ್) ಕಂಪೆನಿಗೆ ಇದು ಹಣಕಾಸನ್ನು ಒದಗಿಸಿದೆ. ಈ ಕಂಪೆನಿಯು ನಾರ್ಕೋ-ಫಂಡಿಂಗ್ ಮೂಲಕ ಹಣವನ್ನು ನೀಡಿದೆ ಎನ್ನುವ ಆರೋಪ ಕೇಳಿ ಬಂದಿದೆ.
ಠಾಕರೆ ಮತ್ತು ರೋಝಿಕ್ ಇಬ್ಬರೂ ನಾರ್ಕೋ ವ್ಯವಹಾರದಲ್ಲಿ ಶಿರಾಜಿಯ ಭಾಗಿಯಾಗಿರುವ ವಿಚಾರ ತಿಳಿದು ಅವರೊಂದಿಗಿನ ಒಪ್ಪಂದವನ್ನು ಕೊನೆಗೊಳಿಸಿದ್ದರು.
ಜನವರಿ 5 ರಂದು ಮಾದಕವಸ್ತು ಕಳ್ಳಸಾಗಣೆ ಆರೋಪದಲ್ಲಿ ಶಿರಾಜಿಯನ್ನು ಜಾರಿ ನಿರ್ದೇಶನಾಲಯ (ಇಡಿ) ಅಕ್ರಮ ಹಣ ವರ್ಗಾವಣೆ ತನಿಖೆಗೆ ಸಂಬಂಧಿಸಿದಂತೆ ಬಂಧಿಸಿತ್ತು.
ಕಳೆದ ವರ್ಷ ಮಾರ್ಚ್‌ನಲ್ಲಿ ಮುಂಬೈ ಪೊಲೀಸರು ಸುಮಾರು ₹7.87 ಕೋಟಿ ಮೌಲ್ಯದ ಸಿಂಥೆಟಿಕ್ ನಾರ್ಕೋಟಿಕ್ ಕೆಟಮೈನ್ ವಶಪಡಿಸಿಕೊಂಡ ಹಿನ್ನೆಲೆಯಲ್ಲಿ ಈ ತನಿಖೆ ನಡೆದಿತ್ತು. ಶಿರಾಜಿ ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾರೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.
ಇದೇ ಕಾರಣದಿಂದ ಅಬ್ದು ಹಾಗೂ ಶಿವ್ ಠಾಕರೆ ಅವರನ್ನು ಇಡಿ ವಿಚಾರಣೆ ನಡೆಸಿದೆ. ಸತತ ಮೂರು ಗಂಟೆಗಳ ಅಬ್ದು ಅವರನ್ನು ಪ್ರಕರಣದಲ್ಲಿ ಸಾಕ್ಷಿಯಾಗಿ ಪರಿಗಣಿಸಿ ಅವರ ಹೇಳಿಕೆಯನ್ನು ಪಡೆದುಕೊಳ್ಳಲಾಗಿದೆ ಎಂದು ವರದಿ ತಿಳಿಸಿದೆ.
ಅಬ್ದು ರೋಝಿಕ್ ಪ್ರಾಸಿಕ್ಯೂಷನ್ ಸಾಕ್ಷಿಯಾಗಿದ್ದು ಆರೋಪಿಯಲ್ಲ ಎಂದು ಅವರ ವಕೀಲರು ತಿಳಿಸಿದ್ದಾರೆ.