ಹಾಸನ: ರಾಜ್ಯ ವಿಧಾನಸಭೆಯ 15 ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯಲ್ಲಿ 12 ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಬಿಜೆಪಿಯ ಕಾರ್ಯಕರ್ತರು ನಗರದಲ್ಲಿ ವಿಜಯೋತ್ಸವ ಆಚರಿಸಿದರು. ನಗರದ ಹೇಮಾವತಿ ಪ್ರತಿಮೆ ಬಳಿ ಸಮಾವೇಶಗೊಂಡ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು, 15 ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಭಾರೀ ಬಹುಮತದೊಂದಿಗೆ ವಿಜಯ ಸಾಧಿಸುವ ಮೂಲಕ ರಾಜ್ಯದಲ್ಲ ಬಿಜೆಪಿಯ ಸುಭದ್ರ ಸರ್ಕಾರಕ್ಕೆ ತೀರ್ಪು ನೀಡಿದ್ದಾರೆ ಎಂದು ಹೇಳಿದರು.
ಹಳೆ ಮೈಸೂರು ಭಾಗದಲ್ಲಿ ಪ್ರತಿಷ್ಠೆಯ ಕ್ಷೇತ್ರವಾಗಿದ್ದ ಕೆ.ಆರ್.ಪೇಟೆಯಲ್ಲಿ ಬಿಜೆಪಿ ಅಭ್ಯರ್ಥಿ ನಾರಾಯಣಗೌಡ ಅವರು 13 ಸಾವಿರ ಬಹುಮತಗಳ ಅಂತರದಿಂದ ವಿಜಯ ಸಾಧಿಸಿದ್ದಾರೆ. ಜೆಡಿಎಸ್ ಭದ್ರಕೋಟೆ ಮಂಡ್ಯ ಜಿಲ್ಲೆಯಲ್ಲಿ ಬಿಜೆಪಿ ಖಾತೆ ತೆರೆಯುವ ಮೂಲಕ ಭವಿಷ್ಯದಲ್ಲಿ ಬಿಜೆಪಿ ಹಳೆ ಮೈಸೂರು ಭಾಗದಲ್ಲಿ ಭದ್ರ ನೆಲೆಯೂರುವ ಸಂದೇಶ ರವಾನೆಯಾಗಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.
ಕೆ.ಆರ್.ಪೇಟೆಯಲ್ಲಿ ಬಿಜೆಪಿ ಅಭ್ಯರ್ಥಿಯ ಗೆಲುವಿನ ಶ್ರೇಯಸ್ಸು ಹಾಸನ ಕ್ಷೇತ್ರದ ಶಾಸಕ ಪ್ರೀತಂ ಜೆ. ಗೌಡ ಮತ್ತು ಎಲ್ಲಾ ಕಾರ್ಯಕರ್ತರಿಗೆ ಸಲ್ಲುತ್ತದೆ ಎಂದರು. ಹಾಸನದ ಶಾಸಕ ಪ್ರೀತಂಗೌಡ ಅವರ ಶ್ರಮಕ್ಕೆ ಫಲ ಸಿಕ್ಕಿದೆ. ಪ್ರೀತಂಗೌಡ ಅವರನ್ನು ಹಗರುವಾಗಿ ಕಾಣುತ್ತಿದ್ದವರಿಗೆ ಈಗ ಉತ್ತರ ಸಿಕ್ಕಿದೆ. ನಿಷ್ಠೆಯಿಂದ ಕೆಲಸ ಮಾಡುವರು ಯಾವ ಕ್ಷೇತ್ರದಲ್ಲಿ ಬೇಕಾದರೂ ಗೆಲುವು ಪಡೆಯಬಹುದು ಎನ್ನುವುದಕ್ಕೆ ಪ್ರೀತಂಗೌಡ ಅವರು ಸಾಕ್ಷಿಯಾಗಿದ್ದಾರೆ ಎಂದರು.
ಕುಟುಂಬ ರಾಜಕಾರಣದ ಅವನತಿ: ದೇವೇಗೌಡರ ಕುಟುಂಬದ ರಾಜಕಾರಣಿಯ ಅವನತಿ ಇಂದಿನಿಂದ ಪ್ರಾರಂಭವಾಗಿದೆ. ಹುಣಸೂರಿನಲ್ಲಿ ಮೂರನೇ ಸ್ಥಾನಕ್ಕೆ ಕುಸಿದರೆ ಕೆ.ಆರ್. ಪೇಟೆಯಲ್ಲಿ 2ನೇ ಸ್ಥಾನಕ್ಕೆ ಇಳಿದಿದೆ ಎಂದು ವ್ಯಂಗ್ಯವಾಡಿದರು. ಜಾತಿಯ ಹೆಸರಿನಲ್ಲಿ ದಬ್ಟಾಳಿಕೆ ಮತ್ತು ದೌರ್ಜನ್ಯಗಳು ಈಗಾಗಲೇ ಅಂತ್ಯವಾಗಿದೆ.
ಯಾರು ಅಭಿವೃದ್ಧಿ ಪರ ಕೆಲಸ ಮಾಡುತ್ತಾರೋ ಆವರಿಗೆ ಒಲವು ಇರುತ್ತದೆ ಎಂಬುದಕ್ಕೆ ಕೆ.ಆರ್. ಪೇಟೆ ಸಾಕ್ಷಿ ಗುಡ್ಡೆಯಾಗಿದೆ ಎಂದು ಹೇಳಿದರು. ಸಂಭ್ರಮಾಚರಣೆಯಲ್ಲಿ ಬಿಜೆಪಿ ಪಕ್ಷದ ಜಿಲ್ಲಾಧ್ಯಕ್ಷ ನವಿಲೆಅಣ್ಣಪ್ಪ, ಮುಖಂಡರಾದ ವೇಣುಗೋಪಾಲ್, ಪುನೀತ್, ಸುರೇಶ್ ಕುಮಾರ್ ಹಾಗೂ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.