ಬೆಂಗಳೂರು: ಹುಣಸಮಾರನಹಳ್ಳಿ ಜಂಗಮ ಮಠದ ಸ್ವಾಮೀಜಿ ರಾಸಲೀಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಯಾನಂದ ಸ್ವಾಮಿ ಹಾಗೂ ಹಿರಿಯ ಸ್ವಾಮೀಜಿ ಕುಟುಂಬವನ್ನು ಮಠದಿಂದ ಹೊರಹಾಕಬೇಕೆಂಬ ಒತ್ತಡದ ಹಿನ್ನೆಲೆಯಲ್ಲಿ ದಯಾನಂದ ಸ್ವಾಮಿಯನ್ನು ಮಠದಿಂದ ಉಚ್ಛಾಟಿಸಲಾಗಿದೆ. ಅಲ್ಲದೇ ಮಠದಿಂದ ಹೊರಹೋಗಲು 15 ದಿನಗಳ ಗಡುವು ನೀಡಲಾಗಿದೆ ಎಂದು ಶ್ರೀಶೈಲ ಶ್ರೀಗಳು ತಿಳಿಸಿದ್ದಾರೆ.
ವರದಿ ಆಧರಿಸಿ ಮಠದ ಮುಂದಿನ ಉತ್ತರಾಧಿಕಾರಿ ಯಾರು ಎಂಬುದನ್ನು ನಿರ್ಧರಿಸಲಾಗುತ್ತದೆ. ವರದಿ ನೀಡುವ ತನಕ ಯಾವುದೇ ನಿರ್ಧಾರ ಕೈಗೊಳ್ಳುವಂತಿಲ್ಲ ಎಂದು ಹುಣಸಮಾರನಹಳ್ಳಿ ಮಠದ ಮುಂದೆ ಶ್ರೀಶೈಲ ಶ್ರೀಗಳು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮಠ ಖಾಲಿ ಮಾಡಲು ದಯಾನಂದ ಸ್ವಾಮಿ ಹಾಗೂ ಕುಟುಂಬಸ್ಥರು ಪತ್ರದಲ್ಲಿ ಸಹಿ ಮಾಡಿದ್ದಾರೆ. ಹೀಗಾಗಿ ಅವರಿಗೆ ಮಠ ಖಾಲಿ ಮಾಡಲು 15 ದಿನಗಳ ಗಡುವು ನೀಡಲಾಗಿದೆ ಎಂದು ಹೇಳಿದರು. ಟ್ರಸ್ಟಿಗಳು ಸಹ ತಕ್ಷಣ ಉಪವಾಸ ಸತ್ಯಾಗ್ರಹ ಕೈಬಿಡಬೇಕು ಎಂದು ಹೇಳಿದರು.
ರಾಸಲೀಲೆ ಪ್ರಕರಣದ ಸಂಬಂಧ ಸುಮಾರು ಮೂರುವರೆ ತಾಸುಗಳ ಕಾಲ ಶ್ರೀಶೈಲ ಶ್ರೀಗಳು ಶನಿವಾರ ಉಭಯ ಬಣಗಳ ಮಾತುಕತೆ ನಡೆಸಿದರೂ ಕೂಡಾ ಸಂಧಾನ ಮುರಿದುಬಿದ್ದಿತ್ತು. ತದನಂತರ ಸಾಕಷ್ಟು ವಾದ, ಪ್ರತಿವಾದಗಳ ನಂತರ ಶ್ರೀಗಳು ಅಸಮಾಧಾನಗಳ ನಡುವೆ ಪತ್ರಿಕಾಗೋಷ್ಠಿ ನಡೆಸಿದರು.
ಶ್ರೀಶೈಲ ಶ್ರೀಗಳ ಮಾತಿಗೂ ಬೆಲೆ ಕೊಡದ ಭಕ್ತರು ವಾಗ್ವಾದ, ಜಟಾಪಟಿಯಲ್ಲಿ ತೊಡಗುವ ಮೂಲಕ ಹುಣಸಮಾರನಹಳ್ಳಿ ಮಠದ ಆವರಣದಲ್ಲಿ ಹೈಡ್ರಾಮಾ ನಡೆಯಿತು. ವೀರಶೈವ ಮಹಾಸಭಾ, ಸ್ವಾಮೀಜಿ ಬೆಂಬಲಿಗರ ನಡುವೆ ವಾಗ್ವಾದ ನಡೆಯಿತು.
ದಯಾನಂದ ಸ್ವಾಮಿ ಹಾಗೂ ಹಿರಿಯ ಸ್ವಾಮೀಜಿ ಕುಟುಂಬ ಮಠವನ್ನು 15 ದಿನದೊಳಗೆ ತೊರೆಯಬೇಕೆಂದು ಶ್ರೀಶೈಲ ಶ್ರೀಗಳು ಗಡುವು ನೀಡಿದ್ದರು. ಆದರೆ 15 ದಿನಗಳ ಗಡುವನ್ನು ನೀಡಬಾರದು ಎಂದು ದಯಾನಂದ ಸ್ವಾಮಿ ವಿರೋಧಿ ಬಣ ಪಟ್ಟು ಹಿಡಿದಿದೆ. ಈ ಸಂದರ್ಭದಲ್ಲಿ ಉದ್ವಿಗ್ನ ವಾತಾವರಣ ನೆಲೆಸಿದ್ದರಿಂದ ಪೊಲೀಸರು ಶ್ರೀಶೈಲ ಜಗದ್ಗುರುಗಳನ್ನು ಮಠದೊಳಕ್ಕೆ ಕರೆದೊಯ್ದಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.