“ದೊಡ್ಡ ಪರದೆಯಲ್ಲಿ ಸಿನಿಮಾ ನೋಡಿ 2 ವರ್ಷವೇ ಆಗೋಯ್ತು. ಮನೇಲಿ ಟಿವಿ ನೋಡಿ ನೋಡಿ,ದೊಡ್ಡ ಪರದೆ ನೋಡೋಕೆ ತುಂಬಾ ಖುಷಿಯಾಗುತ್ತಿದೆ. ಸಿನಿಮಾದವರಿಗೆ ಪರದೆ ಎಷ್ಟು ಮುಖ್ಯ ಅನ್ನೋದು ಮತ್ತೂಮ್ಮೆ ಗೊತ್ತಾಗುತ್ತಿದೆ. ಸಿನಿಮಾದ ಬ್ಯೂಟಿ ಕಾಣೋದೇ ಇಂತಹ ದೊಡ್ಡ ಪರದೆ ಮೇಲೆ. ಮತ್ತೆ ಎಲ್ಲವೂ ಹಿಂದಿನಂತೆ ಆಗುತ್ತದೆ ಎಂಬ ಭರವಸೆ ಇದೆ. ಆ ತರಹ ಆದರೇನೇ ಪ್ರತಿಯೊಬ್ಬರು ತೆಗೆಯುತ್ತಿರುವ ಸಿನಿ ಮಾಕ್ಕೆ ನ್ಯಾಯ ಸಿಗುತ್ತದೆ’- ಹೀಗೆ ಹೇಳಿದ್ದು ನಟ ಕಿಚ್ಚ ಸುದೀಪ್
-ನಟ ಕಿಚ್ಚ ಸುದೀಪ್ ಹೀಗೆ ಹೇಳಲು ಕಾರಣ ಅವರ ಬೆನ್ನ ಹಿಂದಿದ್ದ ಬಿಗ್‌ಸ್ಕ್ರೀನ್. ಕಲಾವಿದರ ಸಂಘದ ಆಡಿಟೋರಿಯಂ ದೊಡ್ಡ ಪರದೆ ಮೇಲೆ ಸಿನಿಮಾವೊಂದರ ಟ್ರೇಲರ್ ವೀಕ್ಷಿಸಿದ ಬಳಿಕ ಸುದೀಪ್ ಈ ಮೇಲಿನ ಮಾತು ಹೇಳಿದರು. ಇದು ಅವರ ಅಂತರಾಳದ ಮಾತು. ದೊಡ್ಡ ಪರದೆ ಮೇಲೆ ಟ್ರೇಲರ್ ನೋಡಿ ಖುಷಿಯಾಗಿದ್ದರು. ಇದು ಸುದೀಪ್ ಒಬ್ಬರ ಮಾತಲ್ಲ, ಇವತ್ತು ಬಹುತೇಕ ಸ್ಟಾರ್ ನಟರು ಮತ್ತೆ ಬಿಗ್‌ಸ್ಕ್ರೀನ್ ಮೇಲೆ ಬರುವ ಕನಸಿನಲ್ಲಿದ್ದಾರೆ. ಅದಕ್ಕೆ ಕಾರಣ ಕೋವಿಡ್. ಕಳೆದ ಎರಡು ವರ್ಷದಿಂದ ಕೋವಿಡ್‌ನಿಂದಾಗಿ ಬಹುತೇಕ ಸ್ಟಾರ್‌ಗಳ ಸಿನಿಮಾಗಳು ಬಿಡುಗಡೆಯಾಗಿಲ್ಲ. ಆದರೆ, ಬಿಡುಗಡೆಗೆ ತಯಾರಿವೆ. ಈ ತಿಂಗಳು ಸರಿ ಹೋಗಬಹುದು, ಮುಂದಿನ ತಿಂಗಳು ಸರಿ ಹೋಗಬಹುದು ಎಂದು ಸ್ಟಾರ್‌ಗಳು ಕಾಯುತ್ತಲೇ ಇದ್ದಾರೆ. ಆದರೆ, ಕೋವಿಡ್ ಆತಂಕದಿಂದ ಚಿತ್ರಮಂದಿರಗಳಲ್ಲಿ ಪೂರ್ಣ ಪ್ರವೇಶಕ್ಕೆ ಅನುಮತಿ ಸಿಕ್ಕಿಲ್ಲ. ಯಾರೇ ಸ್ಟಾರ್ ಇರಬಹುದು, ಅವರಿಗೂ ಆಸೆ ಇರುತ್ತದೆ. ಅಭಿಮಾನಿಗಳ ತಮ್ಮ ಸಿನಿಮಾ ನೋಡಿ ಖುಷಿ ಪಡಬೇಕು, ಕಟೌಟ್ ಕಟ್ಟ ಬೇಕು, ಜೈಕಾರ ಹಾಕಬೇಕು ಎಂದು. ಆದರೆ, ಚಿತ್ರಮಂದಿರಗಳು ಪೂರ್ಣ ಪ್ರಮಾಣದಲ್ಲಿ ತೆರೆ ಯದೇ ಅದು ಸಾಧ್ಯವಿಲ್ಲ.
ಒಂದು ಅಂಶವನ್ನು ಇಲ್ಲಿ ನಾವು ಸೂಕ್ಷ್ಮವಾಗಿ ಗಮನಿಸಬೇಕು. ಸ್ಕ್ರೀನ್ ಮೇಲೆ ಕಾಣಿಸಿಕೊಳ್ಳಲು ಪಟ್ಟ ಕಷ್ಟ ಒಂದಾದರೆ, ಆ ನಂತರ ಸ್ಟಾರ್ ಪಟ್ಟ ಗಿಟ್ಟಿಸಿಕೊಳ್ಳುವಲ್ಲಿನ ಕಷ್ಟ, ಹೋರಾಟ ಮತ್ತೂಂದು. ಈಗ ಸ್ಟಾರ್ ಆದ ನಂತರ ಅಭಿಮಾನಿಗಳನ್ನು ಖುಷಿ ಪಡಿಸುವುದು ಮತ್ತೂಂದು ಸವಾಲು. ಇಷ್ಟು ವರ್ಷ ಆ ಸವಾಲನ್ನು ಯಶಸ್ವಿಯಾಗಿ ಪೂರೈಸಿಕೊಂಡು ಬಂದ ಸ್ಟಾರ್ ಗಳಿಗೆ ಈಗ ಕೋವಿಡ್ ದೊಡ್ಡ ಸವಾಲು. ಅತ್ತ ಕಡೆ ಓಟಿಟಿ ಮೊರೆ ಹೋಗುವಂತೆಯೂ ಇಲ್ಲ, ಇತ್ತ ಕಡೆ ಚಿತ್ರಮಂದಿರಗಳಿಗೂ ಬರ ವಂತಿಲ್ಲ. ಇದು ಒಂಥರಾ ಅಡಕತ್ತರಿಯಲ್ಲಿ ಸಿಕ್ಕಂತೆ. ನಿರ್ಮಾಪಕರಿಗೆ ತಾವು ಹಾಕಿದ ಬಂಡವಾಳ ಯಾವುದೇ ರಿಟರ್ನ್ಸ್ ಇಲ್ಲದೇ ನಿಂತ ನೀರಾದ ಬೇಸರವಾದರೆ, ಸ್ಟಾರ್‌ಗಳಿಗೆ ದೊಡ್ಡ ಪರದೆ ಮೇಲೆ ಅಭಿಮಾನಿಗಳಿಗೆ ದರ್ಶನ ಕೊಡಲಾಗುತ್ತಿಲ್ಲವಲ್ಲ ಎಂಬ ಬೇಸರ.
ಚೇತರಿಕೆಗೆ ಸ್ಟಾರ್ ಸಿನಿಮಾ ಅಗತ್ಯ: ಸ್ಟಾರ್ ಸಿನಿಮಾಗಳು ಬಿಡುಗಡೆಯಾದರೆ ಚಿತ್ರರಂಗದಲ್ಲಿ ಚಟುವಟಿಕೆಗಳು ಗರಿಗೆದರುತ್ತವೆ. ಆರ್ಥಿಕವಾಗಿಯೂ ಚಿತ್ರರಂಗ ಸಬಲವಾಗುತ್ತದೆ. ಈ ನಿಟ್ಟಿನಲ್ಲಿ ಚಿತ್ರರಂಗದ ಚೇತರಿಕೆಗೆ ಸ್ಟಾರ್ ಸಿನಿಮಾಗಳ ಬಿಡುಗಡೆಗೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಸದ್ಯಕ್ಕೆ ಬಹುತೇಕ ಎಲ್ಲಾ ಸ್ಟಾರ್ ನಟರ ಚಿತ್ರಗಳು ಬಿಡುಗಡೆಗೆ ರೆಡಿಯಾಗಿವೆ. ಸುದೀಪ್ ನಟನೆಯ “ಕೋಟಿಗೊಬ್ಬ-3′, “ವಿಕ್ರಾಂತ್ ರೋಣ’, ಶಿವರಾಜ್‌ಕುಮಾರ್ ಅವರ “ಭಜರಂಗಿ-2′, “ಬೈರಾಗಿ’, ಉಪೇಂದ್ರ ಅವರ “ಹೋಮ್ ಮಿನಿಸ್ಟರ್’, “ಬುದ್ಧಿವಂತ-2′, “ತ್ರಿಶೂಲಂ’, ವಿಜಯ್‌ಅಭಿನಯದ “ಸಲಗ’, ಯಶ್ ಅವರ “ಕೆಜಿಎಫ್-2′, ಧನಂಜಯ್ ನಟನೆಯ “ಬಡವ ರಾಸ್ಕಲ್’, “ರತ್ನನ್ ಪ್ರಪಂಚ’, “ಮಾನ್ಸೂನ್ ರಾಗ’, ರಕ್ಷಿತ್ ಶೆಟ್ಟಿ “777 ಚಾರ್ಲಿ’, ಶ್ರೀಮುರಳಿ “ಮದಗಜ’ ಹೀಗೆ ಬಹುತೇಕ ಸ್ಟಾರ್ ನಟರ ಚಿತ್ರಗಳು ಬಿಡುಗಡೆಗೆ ಸಿದ್ಧವಾಗಿವೆ. ಚಿತ್ರಮಂದಿರಗಳಲ್ಲಿ ಪೂರ್ಣ ಪ್ರವೇಶ ಸಿಕ್ಕ ಬೆನ್ನಲ್ಲೇ ಈ ಎಲ್ಲಾ ಚಿತ್ರಗಳು ತೆರೆಗೆ ಬರಲಿವೆ
ರವಿಪ್ರಕಾಶ್ ರೈ