Advertisement

POCSO ಪ್ರಕರಣದಲ್ಲಿ ಬಿಎಸ್ ವೈಗೆ ಬಿಗ್ ರಿಲೀಫ್; ಬಂಧನಕ್ಕೆ ತಡೆ ನೀಡಿದ ಹೈಕೋರ್ಟ್

05:07 PM Jun 14, 2024 | Team Udayavani |

ಬೆಂಗಳೂರು: ಅಪ್ರಾಪ್ತ ವಯಸ್ಕ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪದಡಿಯಲ್ಲಿ ಬಂಧನ ಭೀತಿ ಎದುರಿಸುತ್ತಿರುವ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಅವರಿಗೆ ದೊಡ್ಡ ಸಮಾಧಾನ ಸಿಕ್ಕಿದೆ. ಬಿಎಸ್ ಯಡಿಯೂರಪ್ಪ ಅವರನ್ನು ಸದ್ಯ ಬಂಧನ ಮಾಡದಂತೆ ಹೈಕೋರ್ಟ್ ಸೂಚನೆ ನೀಡಿದೆ.

Advertisement

ಹೈಕೋರ್ಟ್‌ನ ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಅವರ ಏಕಸದಸ್ಯ ಪೀಠವು ಈ ಆದೇಶ ಹೊರಡಿಸಿದೆ. ಮುಂದಿನ ವಿಚಾರಣೆಯವರೆಗೆ ಅವರನ್ನು ಬಂಧಿಸುವಂತಿಲ್ಲ ಎಂದಿದೆ.

ಬಿಎಸ್ ಯಡಿಯೂರಪ್ಪ ಅವರು ಜೂನ್ 17ರಂದು ವಿಚಾರಣೆಗೆ ಹಾಜರಾಗುವುದಾಗಿ ಹೇಳಿದ್ದಾರೆ. ಹೀಗಾಗಿ ಅವರನ್ನು ಬಂಧಿಸುವುದು ಬೇಡ ಎಂದು ಉಚ್ಛ ನ್ಯಾಯಾಲಯದ ಪೀಠ ಹೇಳಿದೆ.

ಬಿ.ಎಸ್‌.ಯಡಿಯೂರಪ್ಪ ಅವರ ಪರವಾಗಿ ಹಿರಿಯ ವಕೀಲ ಸಿ.ವಿ. ನಾಗೇಶ್‌ ಅವರು ವಾದ ಮಂಡಿಸಿದರು. “ಪೋಕ್ಸೊ ಕೇಸ್‌ಗೆ ಸಂಬಂಧಿಸಿದಂತೆ ಎರಡು ಅರ್ಜಿಗಳನ್ನು ಸಲ್ಲಿಸಲಾಗಿದೆ. ಒಂದು ಪ್ರಕರಣವನ್ನು ರದ್ದುಗೊಳಿಸುವಂತೆ ಹಾಗೂ ಇನ್ನೊಂದು ನಿರೀಕ್ಷಣಾ ಜಾಮೀನು ನೀಡುವಂತೆ ಕೋರಿ ಅರ್ಜಿ ಸಲ್ಲಿಸಲಾಗಿದೆ. ಪ್ರಕರಣದಲ್ಲಿ ದೂರುದಾರೆಗೆ ಬ್ಲ್ಯಾಕ್‌ಮೇಲ್‌ ಮಾಡುವುದೇ ಕೆಲಸವಾಗಿದೆ. ಪ್ರಕರಣದಲ್ಲಿ ಸಂತ್ರಸ್ತೆಯ ತಾಯಿ ದೂರು ನೀಡಿದ್ದಾರೆ. ಆಕೆಯ ವೃತ್ತಿಯೇ ಬೇರೆಯವರ ವಿರುದ್ಧ ಕೇಸ್‌ ದಾಖಲಿಸುವುದಾಗಿದೆ. ಇದುವರೆಗೆ ಮಹಿಳೆಯು ಸುಮಾರು 53 ಪ್ರಕರಣಗಳನ್ನು ದಾಖಲಿಸಿದ್ದಾರೆ. ಇಲ್ಲಿ ಭಾವನಾತ್ಮಕ ಅಂಶಗಳಿಗಿಂತ ವಾಸ್ತವಾಂಶಕ್ಕೆ ಹೆಚ್ಚಿನ ಆದ್ಯತೆ ನೀಡಬೇಕಿದೆ” ಎಂದು ಹೇಳಿದರು.

ಏನಿದು ಪ್ರಕರಣ?

Advertisement

ಕೆಲ ತಿಂಗಳ ಹಿಂದೆ ಸಹಾಯ ಬಯಸಿ, ಅಪ್ರಾಪ್ತ ವಯಸ್ಕ ಪುತ್ರಿ ಜತೆ ಯಡಿಯೂರಪ್ಪ ನಿವಾಸಕ್ಕೆ ತೆರಳಿದ್ದ ಮಹಿಳೆಯೊಬ್ಬರು ತೆರಳಿದ್ದರು. ಈ ವೇಳೆ ಅಪ್ತಾಪ್ತೆ ಜತೆಗೆ ಬಿಎಸ್‌ವೈ ಅಸಭ್ಯ ವರ್ತನೆ ತೋರಿದ್ದಾರೆ ಎಂದು ಆರೋಪಿಸಿ ಮಹಿಳೆ ದೂರು ನೀಡಿದ್ದರು. ಯಡಿಯೂರಪ್ಪ ವಿರುದ್ಧ ಸಾಕ್ಷ್ಯ ಕಲೆಹಾಕುತ್ತಿದ್ದ ಸಿಐಡಿ ಅಧಿಕಾರಿಗಳು ಬುಧವಾರ ವಿಚಾರಣೆಗೆ ಹಾಜರಾಗಲು ನೋಟಿಸ್‌ ನೀಡಿದ್ದರು. ಆದರೆ ಬಿಎಸ್‌ವೈ ಗೈರಾದ ಕಾರಣ ಸಿಐಡಿ ಮನವಿಯನ್ನು ಪುರಸ್ಕರಿಸಿ ಬೆಂಗಳೂರಿನ 1ನೇ ತ್ವರಿತಗತಿಯ ನ್ಯಾಯಾಲಯವು ಗುರುವಾರ ಜಾಮೀನುರಹಿತ ವಾರಂಟ್‌ ಜಾರಿಗೊಳಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next