Advertisement

ಬಿಎಸ್ ವೈ ವಿರುದ್ದದ ಷಡ್ಯಂತ್ರದ ಹಿಂದೆ ಪ್ರಭಾವಿ ಸಚಿವರಿದ್ದಾರೆ: ರೇಣುಕಾಚಾರ್ಯ

02:42 PM Jun 14, 2024 | Team Udayavani |

ದಾವಣಗೆರೆ: ರಾಜಕೀಯದ ಷಡ್ಯಂತ್ರದ ಭಾಗವಾಗಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ವಿರುದ್ಧದ ಫೋಕ್ಸೋ ಪ್ರಕರಣಕ್ಕೆ ಮರು ಜೀವ ಕೊಡಲಾಗಿದೆ ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ದೂರಿದರು.

Advertisement

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಲವಾರು ವರ್ಷಗಳಿಂದ ಕುಟುಂಬದಿಂದ ದೂರವಿದ್ದ ಸಂತ್ರಸ್ತೆಯ ಸಹೋದರನಿಗೆ ಆಸೆ, ಆಮಿಷವೊಡ್ಡಿ ದೂರು ಕೊಡಿಸಲಾಗಿದೆ. ಯಡಿಯೂರಪ್ಪ ಅವರ ವಿರುದ್ಧದ ಪ್ರಕರಣಕ್ಕೆ ಮರುಜೀವ ನೀಡಲು ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಇಷ್ಟವಿಲ್ಲದಿದ್ದರೂ ಅವರ ಮೇಲೆಯೂ ಒತ್ತಡ ತರಲಾಗಿದೆ.‌ ರಾಜ್ಯದ ಪ್ರಭಾವಿ ಸಚಿವರೊಬ್ಬರು ಈ ಎಲ್ಲದರ ಹಿಂದೆ ಇದ್ದಾರೆ. ಅವರು ಯಾರೂ ಎಂಬುದು ನನಗೆ ಚೆನ್ನಾಗಿ ಗೊತ್ತಿದೆ. ಮುಂದಿನ ದಿನಗಳಲ್ಲಿ ಸೂಕ್ತ ಸಮಯದಲ್ಲಿ ಅವರ ಹೆಸರು ಬಹಿರಂಗಗೊಳಿಸುವುದಾಗಿ ತಿಳಿಸಿದರು.

ಯಡಿಯೂರಪ್ಪ ಅವರ ವಿರುದ್ಧ ಪ್ರಕರಣ ದಾಖಲಾದಾಗ ಸ್ವತಃ ಅವರೇ ವಿಚಾರಣೆಗೆ ಹಾಜರಾಗುವುದಾಗಿ ತಿಳಿಸಿದ್ದರೂ ಸಿಐಡಿಯವರು ಬೇಡ ಅಂದಿದ್ದರು.‌ ಕೇವಲ ಧ್ವನಿ ಪರೀಕ್ಷೆ ಮಾಡಿದ್ದರು. ಗೃಹ ಸಚಿವ ಡಾ.‌ಜಿ. ಪರಮೇಶ್ವರ್ ಅವರೇ ಸಂತ್ರಸ್ತೆಯ ತಾಯಿ ಮಾನಸಿಕ ಅಸ್ವಸ್ಥೆ, 53 ಜನರ ವಿರುದ್ಧ ಇದೇ ರೀತಿಯ ದೂರು ಸಲ್ಲಿಸಿದ್ದಾರೆ ಎಂದಿದ್ದರು. ಈಗ ಅವರೇ ಬಂಧಿಸಬಹುದು ಎಂದಿದ್ದಾರೆ. ‌ಯಡಿಯೂರಪ್ಪ ಅವರನ್ನೇನು ಬಂಧಿಸಿದರೆ ರಾಜ್ಯ ಸರ್ಕಾರ ಪತನ ಆಗುತ್ತದೆ. ರಾಜ್ಯಾದ್ಯಂತ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ಬಸವರಾಜ್ ಬೊಮ್ಮಾಯಿ ಅವರ ಅಧಿಕಾರ ಅವಧಿಯಲ್ಲಿ ಕಾಂಗ್ರೆಸ್ ನವರು ಪೇಸಿಎಂ‌ ಎಂಬ ಹೋರಾಟ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಈಚೆಗೆ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ರಾಹುಲ್ ಗಾಂಧಿ ನ್ಯಾಯಾಲಯಕ್ಕೆ ಹಾಜರಾಗಿದ್ದರು.‌ ಲೋಕಸಭಾ ಚುನಾವಣೆಯಲ್ಲಿ ಜನರು ಕಾಂಗ್ರೆಸ್ ನ್ನು ತಿರಸ್ಕರಿಸಿದ್ದರು. ಈ ಎಲ್ಲದರ ಕಾರಣದಿಂದ ಯಡಿಯೂರಪ್ಪ ವಿರುದ್ಧದ ಸತ್ತ ಪ್ರಕರಣಕ್ಕೆ ಮರು ಜೀವ ನೀಡಲಾಗಿದೆ. ಈ ರೀತಿಯ ದ್ವೇಷದ ರಾಜಕಾರಣಕ್ಕೆ ಯಡಿಯೂರಪ್ಪ ಅವರು ಬಗ್ಗುವುದಿಲ್ಲ, ಜಗ್ಗುವುದಿಲ್ಲ. ಇಡೀ ಬಿಜೆಪಿ ಅವರೊಂದಿಗೆ ಇದೆ ಎಂದು ತಿಳಿಸಿದರು.

ಸಂತ್ರಸ್ತೆಯ ತಾಯಿ ನನ್ನ ಮಗಳ ಮೇಲೆ ಗಂಡನ ಸಹೋದರ ಸಂಬಂಧಿಗಳ ಅತ್ಯಾಚಾರವೆಸಗಿದ್ದಾರೆ. ಕಂಪನಿಯೊಂದಕ್ಕೆ ಐದು ಸಾವಿರ ಕೋಟಿ ನೀಡಿದ್ದೇನೆ.‌ ವಾಪಸ್ ಬಂದಿಲ್ಲ. ನಮಗೆ ನ್ಯಾಯ ಕೊಡಿಸಬೇಕು ಎಂದು ಯಡಿಯೂರಪ್ಪ ಅವರ ಬಳಿ ಬಂದಿದ್ದರು. ಆಗ ಕಮೀಷನರ್ ಅವರಿಗೆ ಯಡಿಯೂರಪ್ಪ ಅವರೇ ಕರೆ ಮಾಡಿ, ನ್ಯಾಯ ಕೊಡಿಸುವಂತೆ ತಿಳಿಸಿದ್ದರು.‌ ಸಂತ್ರಸ್ತೆಯ ತಾಯಿ ಹೇಳಿದಂತೆ ಐದು ಸಾವಿರ ಕೋಟಿ ಎಲ್ಲಿಂದ ಬಂದಿತು.‌ ಗಂಡನ ಸಹೋದರ ಸಂಬಂಧಿಗಳ ವಿರುದ್ಧದ ಪ್ರಕರಣ ಏನಾಯಿತು. ಅವರ ವಿರುದ್ಧವೂ ಪೋಕ್ಸೋ ಪ್ರಕರಣ ದಾಖಲಾಗಿದ್ದರೂ ಈವರೆಗೆ ಏಕೆ ಬಂಧಿಸಲಿಲ್ಲ. ಅವರ ಜೊತೆಗೆ ಸಂತ್ರಸ್ತೆಯ ತಾಯಿ ನೀಡಿರುವ ದೂರಿನಂತೆ 53 ಜನರನ್ನೂ ಬಂಧಿಸಬೇಕು ಎಂದು ಒತ್ತಾಯಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next