ನಟ ರಕ್ಷಿತ್ ಶೆಟ್ಟಿ ಬ್ಯಾಕ್ ಟು ಬ್ಯಾಕ್ ಸಿನಿಮಾಗಳು ಈ ವರ್ಷ ತೆರೆಗೆ ಬರಲಿವೆ. ಹೀಗೆಂದರೆ ನಿಮಗೆ ಆಶ್ಚರ್ಯವಾಗಬಹುದು. ಏಕೆಂದರೆ ಸದ್ಯ ರಕ್ಷಿತ್ ನಟಿಸಿರುವ ಎರಡು ಸಿನಿಮಾಗಳಷ್ಟೇ ಬಿಡುಗಡೆಗೆ ಸಿದ್ಧವಾಗಿವೆ. “ಸಪ್ತ ಸಾಗರದಾಚೆ ಎಲ್ಲೋ- ಸೈಡ್-ಎ’ ಮತ್ತು “ಬಿ’ ಚಿತ್ರಗಳಲ್ಲಷ್ಟೇ ರಕ್ಷಿತ್ ನಟಿಸಿರೋದು. ಹಾಗಾದರೆ ಬ್ಯಾಕ್ ಟು ಬ್ಯಾಕ್ ಸಿನಿಮಾಗಳು ಯಾವುವು ಎಂದು ನೀವು ಕೇಳಬಹುದು. ರಕ್ಷಿತ್ ಶೆಟ್ಟಿ ನಟಿಸದೇ ಇರಬಹುದು. ಆದರೆ, ಅವರು ನಿರ್ಮಾಪಕರೂ ಎಂಬುದನ್ನು ಮರೆಯಬಾರದು.
ಹೌದು, ಈ ವರ್ಷ ರಕ್ಷಿತ್ ನಿರ್ಮಾಣದ 4 ಚಿತ್ರಗಳು ತೆರೆಗೆ ಬರಲಿವೆ. “ಸಪ್ತ ಸಾಗರದಾಚೆ ಎಲ್ಲೋ- ಸೈಡ್-ಎ’ ಹಾಗೂ “ಸೈಡ್-ಬಿ’ ಚಿತ್ರದಲ್ಲಿ ರಕ್ಷಿತ್ ಶೆಟ್ಟಿ ನಟಿಸಿ, ನಿರ್ಮಿಸಿದ್ದರೆ ಇನ್ನೆರಡು ಚಿತ್ರಗಳನ್ನು ರಕ್ಷಿತ್ ನಿರ್ಮಿಸಿದ್ದಾರೆ.
“ಬ್ಯಾಚುಲರ್ ಪಾರ್ಟಿ’ ಹಾಗೂ “ಇಬ್ಬನಿ ತಬ್ಬಿದ ಇಳೆಯಲಿ’ ಚಿತ್ರಗಳನ್ನು ರಕ್ಷಿತ್ ನಿರ್ಮಿಸಿದ್ದಾರೆ. ಈ ಎರಡೂ ಚಿತ್ರಗಳು ಕೂಡಾ ಈಗಾಗಲೇ ಚಿತ್ರೀಕರಣ ಪೂರೈಸಿ, ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬಿಝಿಯಾಗಿವೆ. ಈ ಚಿತ್ರಗಳನ್ನು ರಕ್ಷಿತ್ ಈ ವರ್ಷವೇ ತೆರೆಗೆ ತರುತ್ತಿದ್ದಾರೆ. ಈ ಮೂಲಕ ಒಂದರ ಹಿಂದೊಂದರಂತೆ ತಮ್ಮ ಪ್ರೊಡಕ್ಷನ್ ಸಿನಿಮಾಗಳನ್ನು ಬಿಡುಗಡೆ ಮಾಡಲು ಮುಂದಾಗಿದ್ದಾರೆ.
ಇನ್ನು, ರಕ್ಷಿತ್ ಶೆಟ್ಟಿ ಸಾಥ್ ನೀಡಿದ “ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಚಿತ್ರ ಈ ವರ್ಷದ ಮೊದಲ ಹಿಟ್ ಆಗಿ, ಎಲ್ಲರ ಗಮನ ಸೆಳೆದಿದೆ. ಇದು ರಕ್ಷಿತ್ ಶೆಟ್ಟಿ ಜೋಶ್ ಹೆಚ್ಚಿಸಿದ್ದು ಸುಳ್ಳಲ್ಲ. “ಹಾಸ್ಟೆಲ್ ಹುಡುಗರು ದೊಡ್ಡಮಟ್ಟದಲ್ಲಿ ಹಿಟ್ ಆಗಿರುವುದು ಖುಷಿ ಕೊಟ್ಟಿದೆ. ಇಂತಹ ಹೊಸ ತಂಡಗಳ ಗೆಲುವು ಇಡೀ ಚಿತ್ರರಂಗಕ್ಕೆ ಜೋಶ್ ನೀಡುವುದರಲ್ಲಿ ಎದರಡು ಮಾತಿಲ್ಲ. ತಿಂಗಳಿಗೊಂದು ಚಿತ್ರವಾದರೂ ಒಳ್ಳೆಯ ಸ್ಕೋರ್ ಮಾಡಿದಾಗ ಚಿತ್ರರಂಗದಲ್ಲಿ ಉತ್ಸಾಹ ಇರುತ್ತದೆ’ ಎನ್ನುತ್ತಾರೆ.
ಇನ್ನು “ಸಪ್ತಸಾಗರ’ ನಂತರ ರಕ್ಷಿತ್ “ರಿಚರ್ಡ್ ಆ್ಯಂಟನಿ’ ಕೈಗೆತ್ತಿಕೊಳ್ಳಲಿದ್ದಾರೆ. ಇದು ಇವರ ಡ್ರೀಮ್ ಪ್ರಾಜೆಕ್ಟ್. ಈ ಚಿತ್ರದ ನಟನೆ, ನಿರ್ದೇಶನ ಎರಡೂ ಜವಾಬ್ದಾರಿ ರಕ್ಷಿತ್ ಅವರದ್ದೇ. ಈಗಾಗಲೇ ಫಸ್ಟ್‌ಲುಕ್ ಟೀಸರ್ ಹಿಟ್‌ಲಿಸ್ಟ್ ಸೇರಿದೆ. ಈ ಚಿತ್ರವನ್ನು ಹೊಂಬಾಳೆ ಫಿಲಂಸ್ ನಿರ್ಮಿಸುತ್ತಿದೆ. ಈ ಚಿತ್ರದ ಬಳಿಕ ರಕ್ಷಿತ್ “ಪುಣ್ಯಕೋಟಿ’ ಚಿತ್ರದ ಕಡೆಗೆ ಗಮನಹರಿಸಲಿದ್ದಾರೆ. ಇದು ರಕ್ಷಿತ್ ಮಹತ್ವಕಾಂಕ್ಷೆಯ ಸಿನಿಮಾ. ಈ ಚಿತ್ರ ಎರಡು ಭಾಗಗಳಲ್ಲಿ ಬರಲಿದೆ.
ಇದನ್ನು ಮುಗಿಸಿಕೊಂಡು ರಕ್ಷಿತ್ ಶೆಟ್ಟಿ “ಎಂ2ಎಂ'( ಮಾರ್ನಿಂಗ್ ಟು ಮೋಕ್ಷ’) ಚಿತ್ರ ಮಾಡಲಿದ್ದಾರೆ. ಈ ಎಲ್ಲಾ ಕಮಿಟ್‌ಮೆಂಟ್‌ಗಳು ಮುಗಿದ “ಕಿರಿಕ್ ಪಾರ್ಟಿ-2′ ಮಾಡಲಿದ್ದಾರೆ. ಈ ಚಿತ್ರ ಮಾಡುವ ಕುರಿತು ರಕ್ಷಿತ್ ಅವರ ಹೊಸ ಪ್ಲ್ರಾನ್ ಕೂಡಾ ಹೊಂದಿದ್ದಾರಂತೆ. ಅದೇನು ಎಂಬುದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.
ರವಿಪ್ರಕಾಶ್ ರೈ