ಮುಂಬಯಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಭದ್ರತೆಯಲ್ಲಿ ಭಾರೀ ಲೋಪ ಎಸಗಿರುವುದು ಬೆಳಕಿಗೆ ಬಂದಿದೆ. ಮುಂಬೈಗೆ ಭೇಟಿ ನೀಡಿದ ಸಂದರ್ಭದಲ್ಲಿ 32 ವರ್ಷದ ಅಪರಿಚಿತ ವ್ಯಕ್ತಿಯೊಬ್ಬ ಗೃಹ ಸಚಿವರ ಸುತ್ತ ಗಂಟೆಗಟ್ಟಲೆ ಅಲೆದಾಡಿದ್ದಾನೆ. ವ್ಯಕ್ತಿ ತನ್ನನ್ನು ಆಂಧ್ರಪ್ರದೇಶದ ಸಂಸದರ ಪಿಎ ಎಂದು ಹೇಳಿಕೊಂಡಿದ್ದಾನೆ.
ಗೃಹ ಸಚಿವಾಲಯದ ಐಡಿ ಕಾರ್ಡ್ ಪಟ್ಟಿಯನ್ನು ಸಹ ಹೊಂದಿದ್ದು, ಅದನ್ನು ಧರಿಸಿ ಗೃಹ ಸಚಿವರ ಬೆಂಗಾವಲು ಪಡೆಯೊಂದಿಗೆ ತಿರುಗಾಡಿದ್ದಾನೆ.
ಮಾಹಿತಿಯ ಪ್ರಕಾರ, ಗೃಹ ಸಚಿವಾಲಯದ ಗುರುತಿನ ಚೀಟಿಯನ್ನು ಧರಿಸಿರುವ ವ್ಯಕ್ತಿಯು ತನ್ನ ನೈಜ ಗುರುತನ್ನು ಮರೆಮಾಡಿದ್ದು, ಅಪರಿಚಿತ ವ್ಯಕ್ತಿ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಮತ್ತು ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರ ಮನೆಯ ಹೊರಗೆ ಬ್ಲೇಜರ್ ಧರಿಸಿ ನಡೆದುಕೊಂಡು ಹೋಗುತ್ತಿರುವುದು ಕಂಡುಬಂದಿದೆ. ಈ ವ್ಯಕ್ತಿಯ ಕುರಿತು ಅನುಮಾನ ಬಂದ ನಂತರ, ಗೃಹ ಸಚಿವಾಲಯದ ಅಧಿಕಾರಿಯೊಬ್ಬರು ಮುಂಬೈ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ವಿಚಾರಣೆ ನಂತರ ಮುಂಬೈ ಪೊಲೀಸರು ಶಂಕಿತ ವ್ಯಕ್ತಿಯನ್ನು ಬಂಧಿಸಿದ್ದು, ಆರೋಪಿಯ ಹೆಸರು ಹೇಮಂತ್ ಪವಾರ್ ಎಂದು ಹೇಳಲಾಗಿದೆ. ಆತ ಮಹಾರಾಷ್ಟ್ರದ ಧುಲೆ ನಿವಾಸಿಯಾಗಿದ್ದಾನೆ. ಆರೋಪಿ ಪವಾರ್ ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ 5 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಕಳುಹಿಸಲಾಗಿದೆ.