ಪಣಜಿ: ಆಧುನಿಕ ಬದುಕಿನ ಸಮಸ್ಯೆಗಳು ನೋಡಲಿಕ್ಕೆ ಸರಳ. ಆದರೆ ಅದನ್ನು ಅರ್ಥೈಸಿಕೊಳ್ಳುವುದು ಹಾಗೂ ಪರಿಹರಿಸಿಕೊಳ್ಳುವುದು ತೀರಾ ಕಷ್ಟ ಎಂಬುದು ಆಸ್ಟ್ರಿಯಾ ಸಿನಿಮಾ ನಿರ್ದೇಶಕ ಡಯಟರ್ ಬರ್ನರ್ ಅವರ ಅಭಿಪ್ರಾಯ.
53 ನೇ ಇಫಿ ಚಿತ್ರೋತ್ಸವದ ಉದ್ಘಾಟನಾ ಚಿತ್ರ ಅಲ್ಮಾ ಆಂಡ್ ಓಸ್ಕರ್ ಸಿನಿಮಾದ ನಿರ್ದೇಶಕ ಬರ್ನರ್ ಪತ್ರಿಕಾಗೋಷ್ಠಿಯಲ್ಲಿ ವಿವಿಧ ಪ್ರಶ್ನೆಗಳಿಗೆ ಉತ್ತರಿಸುತ್ತಾ,ನನ್ನ ಸಿನಿಮಾಗಳು ಇಂಥ ಸಮಸ್ಯೆ, ಸವಾಲುಗಳನ್ನು ಕುರಿತಾದುದೇ ಎಂದು ವಿವರಿಸಿ, ನಾವು ಅಂದುಕೊಂಡಷ್ಟು ಸರಳವೂ ಅಲ್ಲ, ಪರಿಹಾರವೂ ಸುಲಭವಿಲ್ಲ ಎಂದರು.
ಆಲ್ಮಾ ಮತ್ತು ಓಸ್ಕರ್ ನಲ್ಲೂ ಕಥಾನಾಯಕ ಬದುಕಿನಲ್ಲಿ ಒಂದು ಹಂತದ ತೀರ್ಮಾನಕ್ಕೆ ಬಂದರೆ, ಕಥಾನಾಯಕಿ ಬದುಕಿನ ಮತ್ತೊಂದು ಹಂತದ ಕನಸು ಕಾಣುತ್ತಾಳೆ. ಅದನ್ನು ಗುರಿಯೂ ಎಂದುಕೊಳ್ಳಬಹುದು. ಈ ಆಧುನಿಕ ಸಂದರ್ಭದ ಸವಾಲುಗಳೇ ಹಾಗೆ ಎಂದು ಬರ್ನರ್ ವಿವರಿಸುತ್ತಾರೆ.
ಸಮಾಜ ಮತ್ತು ಅದರಲ್ಲಿನ ಪಾತ್ರಗಳ ಬಗ್ಗೆ ಎಲ್ಲಿಲ್ಲದ ಕುತೂಹಲ. ಇವೆಲ್ಲವನ್ನೂ ನನ್ನದೇ ಆದ ದೃಷ್ಟಿಕೋನದಲ್ಲಿ ವಿಶ್ಲೇಷಿಸುತ್ತಾ ಕಥೆ ಕಟ್ಟಲು ಪ್ರಯತ್ನಿಸುವೆ. ಈ ಸಿನಿಮಾ ಮಾಡಲೂ ಅಂಥದ್ದೇ ಒಂದು ಎಳೆ ಪ್ರೇರಣೆ ಎಂದರು.
ದೊಡ್ಡ ಬದಲಾವಣೆಗಳು ಸುಮ್ಮನೆ ಬರುವುದಿಲ್ಲ, ಕಠಿನ ಸವಾಲುಗಳೊಂದಿಗೆ ಬರುತ್ತದೆ. ಇದನ್ನು ನಾವು ಅರಿಯವುದೂ ವಿಶೇಷವೇ, ನನ್ನ ಸಿನಿಮಾಗಳೂ ಅದೇ ಬಗೆಯ ಪ್ರಯತ್ನ ಎಂದ ಅವರು, ಆಧುನಿಕ ಬದುಕಿನ ಸಂದರ್ಭಗಳ ಸಂಕೀರ್ಣತೆಯನ್ನು ಅರಿಯಲೆತ್ನಿಸುತ್ತಿದ್ದೇನೆ. ಅದಕ್ಕೆ ಸಿನಿಮಾವನ್ನು ಮಾಧ್ಯಮವಾಗಿ ಆರಿಸಿಕೊಂಡಿದ್ದೇನೆ ಎಂದರು.
ಅಲ್ಮಾ ಮತ್ತು ಓಸ್ಕರ್ ಸಿನಿಮಾ ಆಸ್ಟ್ರಿಯಾ ದೇಶದ ಸಿನಿಮಾ. ಒಬ್ಬ ಕಲಾವಿದ ಹಾಗೂ ತನ್ನ ಕಲೆಯ ರೂಪದರ್ಶಿಯ ನಡುವಿನ ಸಂಬಂಧ, ಪ್ರೀತಿ, ಮಹಾತ್ವಾಕಾಂಕ್ಷೆ ಎಲ್ಲವೂ ಸಿನಿಮಾದ ಕಥಾವಸ್ತು.