ಬರ್ಲಿನ್: ಇವತ್ತು ವಿಶ್ವವನ್ನೇ ಕಂಗೆಡಿಸಿರುವ ಮತ್ತು ಹಲವು ದೇಶಗಳಲ್ಲಿ ಮರಣ ಮೃದಂಗವನ್ನು ನುಡಿಸುತ್ತಿರುವ ಕೊರೊನಾ ಅಥವಾ ಕೋವಿಡ್ 19 ಮಹಾಮಾರಿಯ ಹೆಸರು ಕೇಳದೇ ಇರುವ ವ್ಯಕ್ತಿಗಳು ಬಹುಶಃ ಈ ಭೂಮಂಡಲದಲ್ಲೇ ಇರಲಾರರು!
ಆದರೆ ಇಷ್ಟೆಲ್ಲಾ ತಲ್ಲಣ ಎಬ್ಬಿಸಿರುವ ಮತ್ತು ಕಾಡ್ಗಿಚ್ಚಿನಂತೆ ದೇಶ ದೇಶಗಳಿಗೆ ವ್ಯಾಪಿಸುತ್ತಿರುವ ಕೊರೊನಾ ವೈರಸ್ ಬಗ್ಗೆ ಈ ಮನೆಯಲ್ಲಿರುವ ಹದಿನಾಲ್ಕು ಜನರಿಗೆ ಗೊತ್ತೇ ಇಲ್ಲ. ಬಹುಷಃ ಕೊರೊನಾ ವೈರಸ್ ಕುರಿತಾಗಿ ಈ ವಿಶ್ವದಲ್ಲಿ ವಿಷಯ ತಿಳಿದುಕೊಳ್ಳುತ್ತಿರುವ ಕಟ್ಟ ಕಡೆಯ ಹದಿನಾಲ್ಕು ಜನರು ಇವರೇ ಇರಬೇಕು!
ಅಂದ ಹಾಗೆ ಜರ್ಮನಿಯಲ್ಲಿ ನಡೆಯುತ್ತಿರುವ ‘ಬಿಗ್ ಬ್ರದರ್’ ರಿಯಾಲಿಟಿ ಶೋನಲ್ಲಿ ಆ ಮನೆಯಲ್ಲಿ ಬಂಧಿಗಳಾಗಿರುವ ಪುರುಷ ಮತ್ತು ಮಹಿಳಾ ಸ್ಪರ್ಧಿಗಳೇ ಇಲ್ಲಿಯವರೆಗ ಕೊರೊನಾ ಸುದ್ದಿಯ ಮಾಹಿತಿಯೇ ಇಲ್ಲದವರಾಗಿದ್ದಾರೆ.
ಕಳೆದ ಫೆಬ್ರವರಿ 10ರಿಂದ ಈ ಮನೆಯಲ್ಲಿ ಸ್ವಯಂ ಬಂಧಿಗಳಾಗಿರುವ ಸ್ಪರ್ಧಿಗಳಿಗೆ ಹೊರ ಪ್ರಪಂಚದ ಸಂಪರ್ಕವನ್ನು ಸಂಪೂರ್ಣವಾಗಿ ನಿರಾಕರಿಸಲಾಗಿದೆ. ಚೀನಾದಲ್ಲಿ ಕಳೆದ ಡಿಸೆಂಬರ್ ನಲ್ಲೇ ಕೊರೊನಾ ವೈರಸ್ ತನ್ನ ಹಾವಳಿಯನ್ನು ಪ್ರಾರಂಭಿಸಿದ್ದರೂ ಅದು ಯುರೋಪ್ ರಾಷ್ಟ್ರಗಳಿಗೆ ವ್ಯಾಪಿಸಿದ್ದು ಫೆಬ್ರವರಿ ಕೊನೆಯ ವಾರದ ಬಳಿಕ. ಜರ್ಮನಿಯಲ್ಲೂ 7000 ಕೊರೊನಾ ವೈರಸ್ ಪ್ರಕರಣಗಳು ಪತ್ತೆಯಾಗಿದ್ದು ಈ ಮಹಾ ಪಿಡುಗು ಇಲ್ಲಿ ಈಗಾಗಲೇ 17 ಬಲಿಗಳನ್ನು ಪಡೆದುಕೊಂಡಿದೆ.
ಇದುವರೆಗೂ ಕೊರೊನಾ ವೈರಸ್ ಕುರಿತಾಗಿ ಬಿಗ್ ಬ್ರದರ್ ಮನೆಯ ಸ್ಪರ್ಧಿಗಳಿಗೆ ಈ ಚಾನೆಲ್ ಹೇಳಿರಲಿಲ್ಲ. ಇದೀಗ ಈ ವಿಷಯಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗಳು ಕೇಳಿಬಂದ ಬಳಿಕ ಎಚ್ಚೆತ್ತುಕೊಂಡಿರುವ ವಾಹಿನಿಯು ವಿಶೇಷ ನೇರ ಪ್ರಸಾರ ಕಾರ್ಯಕ್ರಮದಲ್ಲಿ ಈ ಸ್ಪರ್ಧಿಗಳಿಗೆ ಕೊರೊನಾ ವಿಸಯದ ಕುರಿತಾಗಿ ಮಾಹಿತಿಯನ್ನು ನೀಡಲಿದೆಯಂತೆ.